ಇಲ್ಲಿ ಗುಂಡಿ ದಾಟಲು ಗುಂಡಿಗೆ ಬೇಕು.! ಸರಲಿಕಟ್ಟೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರೆ ನಟ್ಟು ಬೋಲ್ಟು ಲೂಸು-ಲೂಸು

ಕರಾವಳಿ

ದಪ್ಪ ಚರ್ಮದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಈ ರಸ್ತೆ

ಸರ್ವ ಧರ್ಮೀಯ ಬಾಂಧವರಿಗೆ ನನ್ನ ನಮಸ್ಕಾರಗಳು. ನನ್ನನ್ನು ನೀವು ರಾತ್ರಿ-ಹಗಲು ಅನ್ನದೆ ಉಪಯೋಗಿಸಿ, ತನ್ನ ಎದೆಯ ಮೇಲೆ ನೀವು ವಾಹನ ಓಡಿಸಿ ಇದೀಗ ನನಗೆ ಪ್ರಾಯವಾಗಿದೆ. ಮಳೆ ಗಾಳಿ, ಬಿಸಿಲು ಎನ್ನದೆ ನಿಮಗೆ ಮೈಯೊಡ್ಡಿ ಸೇವೆ ನೀಡಿದೆ. ಇದೀಗ ನನ್ನ ದೇಹದ ಹಲವು ಭಾಗಗಳಲ್ಲಿ ಗುಂಡಿ ಎಂಬ ಹುಣ್ಣಿನ ರೋಗ ಬಾಧಿಸಿದೆ. ಬಿಳಿ ಬಟ್ಟೆಯ ಖಾಧಿದಾರಿಗಳು ಗಿರ್ ಗೀಟ್ಲೆ ಹೊಡೆಯುವ ಲೈಟ್ ಹಾಕಿ, ನನ್ನ ಎದೆಯ ಮೇಲೆಯೇ ಸಂಚರಿಸಿ, ನನ್ನನ್ನು ರಿಪೇರಿಯೂ ಮಾಡದೆ, ನನ್ನನ್ನು ಉಪಯೋಗಿಸಿ, ಇದೀಗ ಗುಂಡಿ ಎಂಬ ರೋಗ ಬಿದ್ದು, ಬಡವರ ಸೊಂಟ ಮುರಿದರೂ, ಕೀಲು ಜಾರಿದರೂ ನನ್ನನ್ನೇ ನೀವು ಶಪಿಸುತ್ತೀರಿ. ನಾನೆಂದು ನಿಮಗೆ ದ್ರೋಹ ಬಗೆಯಲಿಲ್ಲ. ನನ್ನನ್ನ ಅ ಕಂತ್ರಿ ರಾಜಕಾರಣಿಗಳು ರಿಪೇರಿ ಮಾಡದೆ, ನನ್ನ ಹೆಸರಿನಲ್ಲಿ ಬಿಲ್ಲು ಮುಕ್ಕಿ ತಿಂದ ಅ ಲಫಂಗ ಲಂಚ ಬಾಕ ಅಧಿಕಾರಿಗಳ ಕುತಂತ್ರದಿಂದ ನಿಮ್ಮೂರಲ್ಲಿ ನನ್ನನ್ನ ನೀವು ಶಪಿಸುತ್ತೀರಿ. ನನ್ನ ಗುಂಡಿ ಬಿದ್ದ ಹುಣ್ಣಿಗೆ ಕಲ್ಲು-ಮಣ್ಣು ಹಾಕಿ ಜಜ್ಜಿ ಲೂಟಿ ಮಾಡಿದ ಅಧಿಕಾರಿಗಳ, ರಾಜಕಾರಣಿಗಳ ಕೊರಳ ಪಟ್ಟಿ ಹಿಡಿದು ನೀವಾದರೂ ನನಗೆ ಮುಕ್ತಿ ದೊರಕಿಸಿ. ನನ್ನನ್ನು ರಿಪೇರಿ ಮಾಡಿಸಿ, ಪುನರ್ಜನ್ಮ ನೀಡಿ. ಅ ದಪ್ಪ ಚರ್ಮದ ಕಂತ್ರಿಗಳಿಗೆ ಬುದ್ದಿ ಕಲಿಸಿ.

ನಾನು ಸುಮಾರು 25 ವರ್ಷದಿಂದ ನಿಮ್ಮಗೆ ಎದೆಯೊಡ್ಡಿ, ನಿಮ್ಮ ಸೇವೆ ನೀಡಿದ್ದೇನೆ. ನಿಮ್ಮ ಮಕ್ಕಳು, ಮರಿ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಹುಟ್ಟಿದ್ದು, ಬೆಳೆದದ್ದು, ಇಂದು ಐಷಾರಾಮಿ ಕಾರಲ್ಲಿ ಓಡಾಡಿದ್ದು ಇದೇ ನನ್ನ ಎದೆಯ ಮೇಲೆ ಇರಬಹುದು. ಇದೀಗ ನಾನು ಗುಂಡಿ ಬಿದ್ದು, ನನ್ನ ಗುಂಡಿ, ಹೊಂಡಗಳ ರೋಗಕ್ಕೆ ನೀವು ಮುಕ್ತಿ ದೊರಕಿಸಿರೆಂದು ಭಾವಿಸುತ್ತೇನೆ. ಸರಕಾರದ ಮೇಲೆ ಸರಕಾರ ಬಂತು. ಮುಖ್ಯಮಂತ್ರಿ ಬದಲಾಯಿತು, ಮಂತ್ರಿ-ಕಂತ್ರಿಗಳು ಬದಲಾದರು.!, ಕುತಂತ್ರಿಗಳು ನನ್ನ ಹೆಸರಿನಲ್ಲಿ ಮುಕ್ಕಿ ಮುಕ್ಕಿ ತಿಂದರು. 2026 ಬಂದರೂ ನನ್ನ ಹುಣ್ಣುಗಳಾದ ಆ ಗುಂಡಿಗಳು ವಾಸಿಯಾಗಿಲ್ಲ. ವಾಸಿಯಾಗುವ ಲಕ್ಷಣವೂ ಕಾಣುತ್ತಿಲ್ಲ.

ಇದು ಸರಲಿಕಟ್ಟೆ, ಮೂಡಡ್ಕ, ಬೇಂಗಿಲ, ಉರ್ಲಡ್ಕ, ನೆಲ್ಲಿಪಳಿಕೆ, ಮೂರುಗೋಳಿ ಹಾಗೂ ಇನ್ನೂ ಹಲವು ಊರುಗಳನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆ ಕತೆಯ ವ್ಯಥೆ.! ಈಗ ಇದು ಕೇವಲ ರಸ್ತೆ ಆಗಿ ಉಳಿದಿಲ್ಲ. ಸಾಹಸಮಯ ಸಂಚಾರದ ತಾಣವಾಗಿದೆ. ಬೈಕ್‌ನಲ್ಲಿ ಹೋದರೆ ಬೆನ್ನಿನ ಎಲ್ಲಾ ಮೂಳೆಗಳ ಲೆಕ್ಕ ಗೊತ್ತಾಗುತ್ತದೆ. ಕಾರಿನಲ್ಲಿ ಹೋದರೆ ಸಸ್ಪೆನ್ಷನ್ ಕಂಪನಿಗಳಿಗೆ ಫ್ರೀ ಟೆಸ್ಟಿಂಗ್ ಸೆಂಟರ್.! ನಟ್ಟು-ಬೋಲ್ಟುಗಳು ಲೂಸು-ಲೂಸು. ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸಿದರೆ ಪ್ರೀ ಡೆಲಿವರಿ.!

ಸುಮಾರು 25 ವರ್ಷಗಳಲ್ಲಿ ಎಷ್ಟೋ ಸರ್ಕಾರಗಳು ಬಂದವು, ಹೋದವು. ಹುರುಳಿದವು ಎಷ್ಟೋ ಚುನಾವಣೆಗಳು ನಡೆದವು. ಎಷ್ಟೋ ಭರವಸೆಗಳು ಕೇಳಿಬಂದವು. ಆದರೆ ಈ ರಸ್ತೆ ಮಾತ್ರ ರಿಪೇರಿ ಆಗಲೇ ಇಲ್ಲ.
ಈ ರಸ್ತೆಯ ಅವಸ್ಥೆ ನೋಡಿ ಇನ್ನು ಕೆಲವೇ ದಿನಗಳಲ್ಲಿ ಈ ರಸ್ತೆಯನ್ನು ಅಧಿಕಾರದ ಮಧದಲ್ಲಿರುವವರು ವರ್ಗ ಪುರಾತತ್ವ ಇಲಾಖೆಗೆ ಒಪ್ಪಿಸಿ “ಐತಿಹಾಸಿಕ ಪರಂಪರೆ ರಸ್ತೆ” ಎಂದು ಘೋಷಿಸಿದರೂ ಆಶ್ಚರ್ಯವಿಲ್ಲ.

ಈ ಊರಿನಲ್ಲಿ ಸಮಾಜದ ಸಮಸ್ಯೆಗಳ ಬಗ್ಗೆ ಮಾತನಾಡುವವರು, ಉಪದೇಶ ನೀಡುವವರು, ರಾಜಕಾರಣಿಗಳು, ಗಂಜಿ ಗಿರಾಕಿಗಳೂ ಕೂಡ ಇದ್ದಾರೆ. ಆದರೆ ಈ ರಸ್ತೆಯ ನೋವು ಮಾತ್ರ ಇನ್ನೂ ಅಧಿಕಾರಿಗಳ ಕಿವಿಗೆ ಸರಿಯಾಗಿ ತಲುಪಿಲ್ಲವೋ.. ಎನ್ನುವುದು ಬೇಸರದ ಸಂಗತಿ. ಆದರೂ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ. ಇಲ್ಲದಿದ್ದರೆ ನಿಮ್ಮ ಮರಿ ಮಕ್ಕಳು ಕೂಡ ಇದೇ ರಸ್ತೆಯಲ್ಲಿ ಬಿದ್ದು, ಎದ್ದು ಸೊಂಟ ಮುರ್ಕೊಂಡರೆ, ಕೀಲು ತಪ್ಪಿದರೆ, ಹಲ್ಲು ಉದುರಿದರೆ ಅವಸಾನದ ಹಂಚಿನಲ್ಲಿರುವ ಈ ರಸ್ತೆಯ ಶಪಿಸಬೇಡಿ. ಎಂಬುದೇ ಬಡಪಾಯಿ ನಾಗರಿಕರಲ್ಲಿ ಈ ರಸ್ತೆಯಾದ ನನ್ನ ವಿನಂತಿ.