ಮೂಡಬಿದ್ರೆ ಮಾರುಕಟ್ಟೆ ಗುತ್ತಿಗೆದಾರನಿಂದ ಅಧಿಕ ಸುಂಕ ವಸೂಲಿ. ಅನಾಧಿಕೃತ ಸೀಯಾಳ ಅಂಗಡಿ ವಿವಾದ, ಮಾರ್ಕೆಟ್ ಸುಂಕ ವಸೂಲಿ ಗುತ್ತಿಗೆ ರದ್ದು.

ಕರಾವಳಿ

ಮೂಡಬಿದ್ರೆ ಮಾರುಕಟ್ಟೆ ಗುತ್ತಿಗೆದಾರನಿಗೆ ಅಧಿಕ ಸುಂಕ ನೀಡದ ಎಳನೀರು ವ್ಯಾಪಾರಿಯ ಅಂಗಡಿ ಪಕ್ಕದಲ್ಲಿ ರಾತ್ರೋರಾತ್ರಿ ಮತ್ತೊಂದು ಎಳನೀರು ಮಾರಾಟದ ಅಂಗಡಿಯನ್ನು ತೆರೆಯಲಾಗಿತ್ತು.
ಕಳೆದ ಹಲವಾರು ವರ್ಷಗಳಿಂದ ದಿನೇಶ್ ಎಂಬವರು ಸಿಯಾಳ ವ್ಯಾಪಾರ ಮಾಡುತ್ತಿದ್ದರು. ಎಳನೀರು ವ್ಯಾಪಾರಿ ದಿನೇಶ್ ಅವರು ದಿನಾ 280 ಸುಂಕವನ್ನು ಗುತ್ತಿಗೆದಾರರಿಗೆ ನೀಡುತ್ತಿದ್ದರು.

ಇತ್ತೀಚೆಗೆ ಮಾರುಕಟ್ಟೆಯ ಟೆಂಡರ್‌ ಅನ್ನು ಹೊಸದಾಗಿ ಪಡೆದ ಗುತ್ತಿಗೆದಾರರು 400 ರೂಪಾಯಿ ಸುಂಕ ನೀಡುವಂತೆ ದಿನೇಶ್ ಅವರಿಗೆ ಸೂಚಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಅವರ ಅಂಗಡಿಯ ಪಕ್ಕದಲ್ಲೇ ಮತ್ತೊಂದು ಅಂಗಡಿಯನ್ನು ಅನಧಿಕೃತವಾಗಿ ತೆರೆಯಲಾಗಿತ್ತು. ಮಾತ್ರವಲ್ಲದೆ ದಿನೇಶ್ ಅವರ ಅಂಗಡಿಯ ಶೀಟ್, ಚೇರ್, ಸಿಯಾಳಗಳನ್ನು ರಸ್ತೆಗೆ ಎಸೆಯಲಾಗಿತ್ತು. ಈ ಬಗ್ಗೆ ದಿನೇಶ್ ಅವರು ಗುತ್ತಿಗೆದಾರನ ವಿರುದ್ಧ ಮೂಡುಬಿದಿರೆ ಪುರಸಭೆಗೆ ದೂರು ನೀಡಿದ್ದರು.

ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತ ಅಂಗಡಿಯನ್ನು ಬಂದ್ ಮಾಡಿಸಿ, ಅಲ್ಲಿದ್ದ ಎಳನೀರನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ ಭೇಟಿ ನೀಡಿ ಸುಂಕದ ಹೆಸರಿನಲ್ಲಿ ಮಾರುಕಟ್ಟೆ ವ್ಯಾಪಾರಿಗಳಿಗೆ ತೊಂದರೆ ನೀಡಿದರೆ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.

ಕಳೆದ ಡಿಸಂಬರ್ ತಿಂಗಳಲ್ಲಿ ಮಾರುಕಟ್ಟೆಯ ಬಹಿರಂಗ ಏಲಂ ನಡೆದು, ನಿಡ್ಡೋಡಿಯ ಸುಂದರ ಪೂಜಾರಿ ಎಂಬವರು ಮಾರುಕಟ್ಟೆಯ ವಸೂಲಿನ ಹಕ್ಕನ್ನು ಪಡೆದಿದ್ದರು. ಆದರೆ ಸುಂಕ ವಸೂಲಿ ವಿಚಾರದಲ್ಲಿ ಆಗಾಗ ಸಣ್ಣ ಪುಟ್ಟ ಗಲಾಟೆ, ವಿವಾದಗಳು ನಡೆಯುತ್ತಿತ್ತು. ಅನಾಧಿಕೃತ ಸಿಯಾಳದ ಅಂಗಡಿ ವಿವಾದ, ಅಲ್ಲದೆ ಏಲಂ ಪಡೆದ ಬಿಡ್ಡುದಾರ ಸರಿಯಾದ ಸಮಯಕ್ಕೆ ಪೂರ್ಣ ಮೊತ್ತವನ್ನು ಪಾವತಿಸದ ಇರುವುದರಿಂದ ಪುರಸಭೆಯು ಗುತ್ತಿಗೆಯನ್ನು ರದ್ದುಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.