ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡದಿದ್ದಲ್ಲಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸುತ್ತೇವೆ: ಮುನೀರ್ ಕಾಟಿಪಳ್ಳ

ಕರಾವಳಿ

ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹಿಸಿ ಗಂಜಿಮಠದಲ್ಲಿ ಬೃಹತ್ ಮಾನವ ಸರಪಳಿ

ಸರಕಾರಿ ಆಸ್ಪತ್ರೆಗಳನ್ನು ಬಲವರ್ಧನೆಗೊಳಿಸಿ ಎಂದು ಜನರು ಆಗ್ರಹಿಸುತ್ತಿದ್ದರೆ, ಆರೋಗ್ಯ ಸಚಿವ ಯು.ಟಿ ಖಾದರ್ ಖಾಸಗಿಯವರ ಮಡಿಲಿಗೆ ಹಾಕಲು ಹೊರಟಿದ್ದಾರೆ. ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಿ ಎಂದು ಬೇಡಿಕೆ ಇಟ್ಟರೆ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಗಿಲೀಟಿನ ಮಾತುಗಳನ್ನು ಸರಕಾರ ಆಡುತ್ತದೆ. ವಿರೋಧ ಪಕ್ಷದ ಬಿಜೆಪಿ ಶಾಸಕರುಗಳು ಸರಕಾರದ ಇಂತಹ ಜನವಿರೋಧಿ ಧೋರಣೆಗಳ ವಿರುದ್ದ ಸೊಲ್ಲೆತ್ತುತ್ತಿಲ್ಲ. ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿ ಧರ್ಮ ರಕ್ಷಣೆಯ ಹುಸಿ ಫೋಸು ನೀಡುತ್ತಾ ಕಾಲ ಕಳೆಯುತ್ತಾರೆ, ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸುವುದು, ಸರಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ಒದಗಿಸುವುದು ನಿಜವಾದ ಧರ್ಮರಕ್ಷಣೆ ಎಂಬುದನ್ನು ಮರೆತಿದ್ದಾರೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದರು. ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಅವರು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ, ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡಬೇಕು, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಜಿಲ್ಲೆಗೆ ಕಿದ್ವಾಯಿ ಹಾಗು ಜಯದೇವ ಆಸ್ಪತ್ರೆಗಳ ಘಟಕ ಮಂಜೂರು ಮಾಡಬೇಕು ಎಂಬ ಬೇಡಿಕೆಗಳ ಸಹಿತ ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹಿಸಿ ಸಿಪಿಐಎಂ ಗುರುಪುರ ವಲಯ ಸಮಿತಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಮಾತನಾಡುತ್ತಾ, ಗುರುಪುರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು, ಔಷಧಿಗಳ ಕೊರತೆಯಿಂದ ಬಳಲುತ್ತಿದೆ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವ ಪ್ರಸ್ಥಾಪದ ಕಡತ ಆರೋಗ್ಯ ಇಲಾಖೆಯಲ್ಲಿ ಧೂಳು ತಿನ್ನುತ್ತಿದೆ. ಹಲವು ಹಂತದ ಪ್ರತಿಭಟನೆಗಳ ಹೊರತಾಗಿಯು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.

ಸಿಪಿಐಎಂ ಗುರುಪುರ ವಲಯ ಸಮಿತಿಯ ಪ್ರಮುಖರಾದ ನೋಣಯ್ಯ ಗೌಡ, ಬಾಬು ಸಾಲ್ಯಾನ್ ವಾಮಂಜೂರು, ಆನಂದ ಪೂಜಾರಿ ಇರುವೈಲು, ರಾಜೇಶ್ ನಾಯ್ಕ್, ಅಶೋಕ ಬಂಗೇರ ತಿರುವೈಲು, ವಾರಿಜ ಕುಪ್ಪೆಪದವು, ಗೋಪಾಲ ಮೂಲ್ಯ ಮಳಲಿ, ಕಟ್ಟಡ ಕಾರ್ಮಿಕರ ಸಂಘದ ಪ್ರಮುಖರಾದ ರವೀಂದ್ರ ಶೆಟ್ಟಿಗಾರ್ ಮುಚ್ಚೂರು, ಜನಾರ್ಧನ ಗೌಡ ಎಡಪದವು, ರಾಮ ಶೆಟ್ಟಿಗಾರ್ ಕೊಂಪದವು, ಇಬ್ರಾಹಿಂ ಕುಪ್ಪೆಪದವು, ಹೊನ್ನಯ್ಯ ಅಮೀನ್, ಭವಾನಿ, ಯಶೋಧ ಮಳಲಿ, ಪದ್ಮನಾಭ ಪೂಜಾರಿ ಇರುವೈಲು, ಸಾಮಾಜಿಕ ಕಾರ್ಯಕರ್ತರಾದ ಬಾವ ಪದರಂಗಿ, ಅಬ್ದುಲ್ ಖಾದರ್ ಇಡ್ಮಾ ಮತ್ತಿತ್ತರರು ಉಪಸ್ಥಿತರಿದ್ದರು. ವಸಂತಿ ಕುಪ್ಪೆಪದವು ಹಾಗು ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.‌

ತರುವಾಯ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸಿಪಿಐಎಂ ಹಾಗು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಗಂಜಿಮಠ ಪೇಟೆಯಲ್ಲಿ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿದರು. ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡುವಂತೆ, ವೈದ್ಯರು, ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಬಲಪಡಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ ಗಮನ ಸೆಳೆದರು.