ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ ಸದ್ಯಕ್ಕಿಲ್ಲ; ಆರತಿ ಮಂತ್ರ ಜಪಿಸಿದ ಸೂಟು ಬೂಟು ಕಾ..ಕಾ.. ಗಳ ಕನಸು ಭಗ್ನ

ರಾಜ್ಯ

ಬೆಂಗಳೂರು: ಕರ್ನಾಟಕದಲ್ಲಿ ಅನಿವಾಸಿ ಕನ್ನಡಿಗರಿಗಾಗಿ NRI ಪ್ರತ್ಯೇಕ ಸಚಿವಾಲಯ ಅಥವಾ ಇಲಾಖೆಯನ್ನು ಸ್ಥಾಪಿಸುವ ವಿಚಾರದಲ್ಲಿ ಆಡಳಿತಾರೂಢ ಸಚಿವ ಸಂಪುಟದಲ್ಲಿ ‘ಅಪಸ್ವರ’ ಉಂಟಾಗಿದೆ. ಅಸ್ತಿತ್ವದಲ್ಲಿರುವ ಕೈಗಾರಿಕೆ ಹಾಗೂ ಐಟಿ-ಬಿಟಿ ಇಲಾಖೆಗಳ ಕೆಲಸಗಳಲ್ಲಿ ಇದು ಮರುಕಳಿಕೆ (overlap) ಆಗಬಹುದೆಂಬ ಆತಂಕದಿಂದಾಗಿ, ಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಪ್ರತ್ಯೇಕ ಎನ್ಆರ್‌ಐ ಇಲಾಖೆಯ ಪ್ರಸ್ತಾವನೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಅನಿವಾಸಿ ಕನ್ನಡಿಗರಿಗೆ ನೆರವಾಗಲು ಮತ್ತು ರಾಜ್ಯಕ್ಕೆ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಪ್ರತ್ಯೇಕ ಸಚಿವಾಲಯವನ್ನು ರಚಿಸಲು ಮುಂದಾಗಿದ್ದರು. ದುಬೈ ಉದ್ಯಮಿ ಡಾ. ರೊನಾಲ್ಡ್ ಕೊಲಕೊ ನೇತೃತ್ವದ ನಿಯೋಗವು ಸಿಎಂ ಅವರನ್ನು ಭೇಟಿಯಾಗಿ, ಕೇರಳ ಮಾದರಿಯಲ್ಲಿಯೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕೆಂದು ಬಲವಾಗಿ ಆಗ್ರಹಿಸಿತ್ತು. ಪ್ರಸ್ತುತ ರಾಜ್ಯದಲ್ಲಿ ಎನ್ಆರ್ ಐ ಫೋರಂ ಕಾರ್ಯನಿರ್ವಹಿಸುತ್ತಿದ್ದರೂ, ಅದಕ್ಕೆ ಸೀಮಿತ ಅಧಿಕಾರಗಳಿರುವುದರಿಂದ ಪೂರ್ಣ ಪ್ರಮಾಣದ ಸಚಿವಾಲಯದ ಬೇಡಿಕೆ ಇಡಲಾಗಿತ್ತು.

ಸಚಿವ ಸಂಪುಟದಲ್ಲಿ ಉಂಟಾದ ಅಪಸ್ವರ ಹೂಡಿಕೆ ಹಾಗೂ ಉದ್ಯಮಶೀಲತೆಯ ಉತ್ತೇಜನದ ಕೆಲಸಗಳು ಈಗಾಗಲೇ ಕೈಗಾರಿಕೆ ಮತ್ತು ಐಟಿ-ಬಿಟಿ ಇಲಾಖೆಯ ವ್ಯಾಪ್ತಿಯಲ್ಲಿರುವುದರಿಂದ ಹೊಸ ಇಲಾಖೆಯ ರಚನೆಗೆ ವಿರೋಧ ವ್ಯಕ್ತವಾಯಿತು. ಸಚಿವರಾದ ಎಂಬಿ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಮಟ್ಟದಲ್ಲಿ ಗೊಂದಲಕ್ಕೆ ಕಾರಣವಾಗಬಹುದು ಎಂದು ವಾದಿಸಿದರು. ಅನಿವಾಸಿ ಭಾರತೀಯರ ಮೂಲಕ ರಾಜ್ಯದ ಉದ್ಯಮ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರ ಇಲಾಖೆ ರಚನೆಗೆ ಸಚಿವ ಸತೀಶ್ ಜಾರಕಿಹೊಳಿಯು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಹೆಸರಿನ ಹೊಸ ಇಲಾಖೆಯನ್ನು ಆರಂಭಿಸುವ ಪ್ರಸ್ತಾಪ ಸಚಿವ ಸಂಪುಟ ಸದಸ್ಯರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಎಚ್ಚೆತ್ತ ಸರ್ಕಾರ, ಹೊಸ ಇಲಾಖೆಯ ರಚನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಸಾಧಕ-ಬಾಧಕಗಳ ಬಗ್ಗೆ ಸ್ಪಷ್ಟನೆ ಕೋರಿದೆ.

ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯಕ್ಕೆ ಸೂಟು ಬೂಟು ಕಾಕಾಗಳು ಚಾರ್ಟೆಡ್ ಪ್ಲೈಟ್ ಹತ್ತಿ ಬೆಂಗಳೂರಿಗೆ ಬಂದಿದ್ದರು. ಸಿಎಂ ಡಿಕೆಶಿಗೆ ಮನವಿಯನ್ನು ಮಾಡಿದ್ದರು. ಸೂಟು ಬೂಟುಗಳು ಮಂತ್ರಿಗಿರಿಗೆ ಆರತಿ ಮಂತ್ರವನ್ನು ಜಪಿಸಿದ್ದರು. ಅನಿವಾಸಿಗರಿಂದ ಸೋಷಿಯಲ್ ಮೀಡಿಯಾ ಕ್ಯಾಂಪೈನ್ ಕೂಡ ಮಾಡಿದ್ದರು. ಆರತಿ ಮಂತ್ರ ಜಪಿಸುತ್ತಾ ಸಚಿವಾಲಯ ದಕ್ಕಿದರೆ ದುಂಡಗಾಗಲು ಸ್ಕೆಚ್ ಹಾಕಿದ್ದ ಸೂಟು ಬೂಟುಗಳ ಕನಸು ಕೊನೆಗೂ ಭಗ್ನವಾಗಿದೆ.