ಬೆಳ್ತಂಗಡಿಗೆ ನಗರಾಭಿವೃದ್ಧಿ ಪ್ರಾಧಿಕಾರ ಇಲ್ಲ. ಬೆಳ್ತಂಗಡಿ ಜನರಿಗೆ ಸದ್ಯಕ್ಕೆ ಮೂಡಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರ ಗತಿಯಂತಾಗಿದೆ.
ಬೆಳ್ತಂಗಡಿ ದೊಡ್ಡ ತಾಲೂಕು. ಆದರೆ ತಾಲೂಕು ಹೆಡ್ ಕ್ವಾಟರ್ಸ್ ಇನ್ನೂ ಪಟ್ಟಣ ಪಂಚಾಯಿತಿ ಲೆವೆಲ್ನಲ್ಲೇ ಇದೆ. ತಾಲೂಕು ಹೆಡ್ ಕ್ವಾಟರ್ಸ್ನ ಸಿಟಿ ಲಿಮಿಟ್ಸ್ ಕೂಡಾ ದೊಡ್ಡದಿದ್ದರೂ ಬೆಳ್ತಂಗಡಿಗೆ ನಗರಾಭಿವೃದ್ಧಿ ಪ್ರಾಧಿಕಾರ (ಬೂಡಾ) ಇಲ್ಲ. ಬೆಳ್ತಂಗಡಿ ಜನರಿಗೆ ಸದ್ಯಕ್ಕೆ ಮೂಡಾವೇ (ಮೂಡಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರ) ಗತಿಯಂತಾಗಿದೆ. ಏಕೆಂದರೆ ಬೆಳ್ತಂಗಡಿಯನ್ನು ಮೂಡುಬಿದಿರೆಯೊಂದಿಗೆ ಲಿಂಕ್ ಮಾಡಲಾಗಿದೆ. ಇದು ಎತ್ತಿಂದೆತ್ತನ ಸಂಬಂಧ ಎಂದೇ ಅರ್ಥವಾಗುತ್ತಿಲ್ಲ.
ಒಬ್ಬರು ನಸುಕಿನ ಜಾವ 3.45ಕ್ಕೆ ತಾಲೂಕು ಪಂಚಾಯತ್ ಕಚೇರಿಯ ಮುಂದೆ ಬಂದು ನಿಂತಿದ್ದಾರೆ. ಮತ್ತೊಬ್ಬರು 4 ಗಂಟೆಗೆ ಬಂದಿದ್ದಾರೆ. ಇನ್ನೊಬ್ಬರು 4.15ಕ್ಕೆ ಬಂದಿದ್ದಾರೆ. ಯಾಕೆಂದರೆ ನಮಗೆ ಟೋಕನ್ ಬೇಕು. ಮಂಗಳವಾರ 50 ಜನರಿಗೆ ಮಾತ್ರ ಟೋಕನ್ ಕೊಡುತ್ತಾರೆ. ಇದು ಬೆಳ್ತಂಗಡಿಯ 9/11 ಅರ್ಜಿದಾರರ ಕಣ್ಣೀರ ಕಥೆ.

ಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮೂಡಾದ ಪ್ರಭಾರ ಸಹಾಯಕ ಇಂಜಿನಿಯರ್ ಮೋಕ್ಷ ಅವರು ಮಂಗಳವಾರದಂದು ಲಭ್ಯರಿರುತ್ತಾರೆ. ಅಂದು 9/11 ಕಡತಗಳನ್ನು ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆಳ್ಳಂಬೆಳಗ್ಗೆ ಬಂದು ಜನ ಕ್ಯೂ ನಿಲ್ಲುವ ಪರಿಪಾಠ ಆರಂಭವಾಗಿ ಅದೆಷ್ಟೋ ತಿಂಗಳುಗಳು ಕಳೆದರೂ ಇಲ್ಲಿನ ಯಾವ ಜನಪ್ರತಿನಿಧಿಗಳು ಕೂಡಾ ಇತ್ತ ಗಮನಹರಿಸಿಲ್ಲ.
9/11, ಏಕೆ ನಿವೇಶನ ಅರ್ಜಿಯ ವಿಲೇವಾರಿಗೆ ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಬೆಳ್ತಂಗಡಿಯಲ್ಲಿ ಸಹಾಯಕ ಇಂಜಿನಿಯರ್ ಇಲ್ಲದೇ ಇರುವುದರಿಂದ ಮೂಡಬಿದ್ರೆಯ ನಗರ ಮತ್ತು ಗ್ರಾಮಾಂತರ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ನಿರತರಾಗಿರುವ ಮೋಕ್ಷರವರು ಪ್ರಭಾರ ಜವಾಬ್ದಾರಿಯಿಂದ ಬೆಳ್ತಂಗಡಿಗೆ ಬರುತ್ತಾರೆ. ಮಂಗಳವಾರದ ದಿನ ತಾಲೂಕು ಪಂಚಾಯತ್ ಕಚೇರಿಗೆ ಅವರು ಬರುವುದರಿಂದ ಮುಂಜಾನೆ 3 ಗಂಟೆಗೆ ಬಂದು ಕ್ಯೂ ನಿಂತು ಜನರು ಟೋಕನ್ ಪಡೆಯುತ್ತಿದ್ದಾರೆ. ಬೆಳಿಗ್ಗೆ 9.30ಕ್ಕೆ ಟೋಕನ್ ನೀಡುವುದಾದರೂ ಮುಂಜಾನೆಯೇ ಬರುವುದು ಯಾಕೆಂದರೆ ಮೊದಲು ಬಂದ 50ರಿಂದ 55 ಜನರ ಕಡತ ಮಾತ್ರ ಅಧಿಕಾರಿ ನೋಡಲು ಸಾಧ್ಯ. ಅದಕ್ಕಾಗಿ ಜನರು ಬೆಳ್ಳಂಬೆಳಗ್ಗೆ ಸಾಲಾಗಿ ನಿಂತು ಕಾಯುತ್ತಿರುತ್ತಾರೆ.
ಒಂದು ದಾಖಲೆ ಪತ್ರದ ಪರಿಶೀಲನೆಗೆ ಕನಿಷ್ಠ 10 ನಿಮಿಷ ಬೇಕು. ಹೀಗಿರುವಾಗ ದಿನಕ್ಕೆ 50ರಿಂದ 55 ಜನರ ದಾಖಲೆ ಪತ್ರ ಮಾತ್ರ ನೊಡಲು ಸಾಧ್ಯ. ಹೀಗಿರುವಾಗ ಅದಕ್ಕಿಂತ ಹೆಚ್ಚು ಜನ ಬಂದವರು ವಾಪಾಸಾಗುತ್ತಾರೆ. ಮುಂದಿನ ವಾರಕ್ಕಾಗಿ ಕಾಯಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ. ಹೀಗೆ ವಾಪಸಾದವರು ಮುಂದಿನ ವಾರ ಮುಂಜಾನೆಯೇ ಬಂದು ಕ್ಯೂ ನಿಲ್ಲುತ್ತಾರೆ

ಬೆಳ್ತಂಗಡಿಯಲ್ಲಿ ಬೂಡಾ ಇಲ್ಲದ ಕಾರಣ ಜನ ತಮ್ಮ ಕೆಲಸ ಕಾರ್ಯಗಳಿಗೆ 50 ಕಿ.ಮಿ. ದೂರದ ಮೂಡಬಿದ್ರೆಗೆ ಹೋಗಬೇಕು. ಇದೇ ಕಾರಣಕ್ಕೆ ವಾರದ ಒಂದು ದಿನ ಮೂಡಾ ಅಧಿಕಾರಿ ಬೆಳ್ತಂಗಡಿಯಲ್ಲಿ ಹಾಜರಾತಿ ಕಡ್ಡಾಯ ಮಾಡಲಾಯಿತು. ಅದಕ್ಕಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ನಲ್ಲಿ ಒಂದು ಕಚೇರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾವನೋ ಪುಣ್ಯಾತ್ಮ ಇಲ್ಲಿ ಟೋಕನ್ ವ್ಯವಸ್ಥೆ ಜಾರಿಗೆ ತಂದು ಜನರನ್ನು ಲಗಾಡಿ ತೆಗೆದುಬಿಟ್ಟ.
ಇನ್ನು ಈ ಮೂಡಾ ಬೆಳ್ತಂಗಡಿ ಬ್ರಾಂಚಿನ ಕತೆ ಹೇಳಿ ಪ್ರಯೋಜನವಿಲ್ಲ. ಮೂಡಾ ಅಧಿಕಾರಿಯ ವಾರದ ಒಂದು ದರ್ಶನದಲ್ಲಿ ಬೆಳ್ತಂಗಡಿಯ ಅಷ್ಟೂ ಗ್ರಾಮಗಳ ಮತ್ತು ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಮಲವಂತಿಗೆ, ಮಿತ್ತಬಾಗಿಲು ಕುಗ್ರಾಮಗಳ ಫೈಲ್ ಕೂಡಾ ಕ್ಲಿಯರ್ ಆಗಬೇಕು. ಕಳ್ಳನಿಗೆ ಒಂದು ಪಿಳ್ಳೆ ನೆವ ಅಂತ ಟೋಕನ್ ಪಡೆದು ಫೈಲು ತೋರಿಸಿದ ಜನರ ದಾಖಲೆಗಳಲ್ಲಿ ಏನಾದರೂ ತಪ್ಪು ಹುಡುಕಿ ಹೆಕ್ಕಿ ಅವರನ್ನು ವಾಪಾಸ್ ಕಳಿಸೋದೇ ಈ ಕಚೇರಿಯ ಕೆಲಸವಾಗಿದೆ.
ಆದರೆ ಒಮ್ಮೆ ಟೋಕನ್ ಪಡೆದು ನಕ್ಷೆ ಸರಿ ಇಲ್ಲ ಎಂದು ವಾಪಾಸು ಕಳಿಸಿದವರು ಮುಂದಿನ ವಾರ ಅಧಿಕಾರಿಯನ್ನು ಭೇಟಿಯಾಗಬೇಕಿದ್ದರೆ ಮತ್ತೆ ಕ್ಯೂ ನಿಂತು ಟೋಕನ್ ಪಡೆಯಲೇಬೇಕು. ಹೀಗೆ ಹತ್ತಾರು ಸಲ ಟೋಕನ್ ಪಡೆದು ಹೈರಣಾದದ್ದೇ ಬಂತು. ಆದರೆ ಅವರ ಕೆಲಸ ಇನ್ನೂ ಕ್ಲಿಯರ್ ಆಗಿಲ್ಲ.
ಜನನಾಯಕರ ವೈಫಲ್ಯ
ಬೆಳ್ತಂಗಡಿ ಮೂಡುಬಿದಿರೆಗೆ ಹೋಲಿಸಿದರೆ ದೊಡ್ಡ ತಾಲೂಕು. ಮೂಡುಬಿದಿರೆ ಇತ್ತೀಚೆಗೆ ತಾಲೂಕು ಆಗಿ ಪರಿವರ್ತನೆ ಆಗಿದೆ ಅಷ್ಟೇ. ಆದರೆ ಬೆಳ್ತಂಗಡಿ ತಾಲೂಕಿಗೆ ಹಲವು ದಶಕಗಳ ಇತಿಹಾಸವಿದೆ. ಬೆಳ್ತಂಗಡಿ ದೊಡ್ಡ ದೊಡ್ಡ ನಾಯಕರ ತವರು ಆದರೂ ಒಂದು ಜುಜುಬಿ ಬೂಡಾ ಆಫೀಸ್ ಅನ್ನು ಪರ್ಮನೆಂಟಾಗಿ ತರಲು ಸಾಧ್ಯವಾಗದೆ ಇರುವುದು ಇಲ್ಲಿನ ಜನನಾಯಕರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಅಂದರೂ ತಪ್ಪಿಲ್ಲ. ಹಾಲಿ ಶಾಸಕ ಹರೀಶ್ ಪೂಂಜಾ ಎರಡನೇ ಅವಧಿಗೆ ಶಾಸಕರಾಗಿದ್ದಾರೆ. ಹ್ಯಾಟ್ರಿಕ್ ಗೆಲುವಿಗೆ ವೇದಿಕೆ ತಯಾರು ಮಾಡುತ್ತಿದ್ದಾರೆ. ಅಭಿವೃದ್ಧಿ ರಾಜಕಾರಣದ ಬದಲು ಮತೀಯ ವಿಚಾರ ಎತ್ತಿ ಜನರ ಮೈಂಡ್ ಸೆಟ್ ಬದಲಾಯಿಸುವ ಮೂಲಕ ಸಲೀಸಾಗಿ ಗೆಲ್ಲುತ್ತಿದ್ದಾರೆ. ಪೂಂಜಾ ಕ್ಷೇತ್ರದಲ್ಲಿ ಜನ ಹೈರಣಾಗುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಬೆಳ್ತಂಗಡಿ ಜನ ತಮ್ಮ 9/11 ಕೆಲಸಗಳಿಗೆ ಮೂಡುಬಿದಿರೆ ಬಸ್ ಹತ್ತಬೇಕು ಎಂದಾದರೆ ಬೆಳ್ತಂಗಡಿ ತಾಲೂಕು ಎಲ್ಲಿಗೆ ಮುಟ್ಟಿದೆ ಎಂದು ಅರ್ಥವಾಗುತ್ತದೆ. ಅಭಿವೃದ್ಧಿ ವಿಚಾರದ ಬಗ್ಗೆ ಸೊಲ್ಲೆತ್ತದೆ ಮತೀಯ ವಿಚಾರದ ಬಗ್ಗೆ ಗಮನ ಹರಿಸಿದ ಪರಿಣಾಮ ಇಂದು ಬೆಳ್ತಂಗಡಿಯ ಜನ ನಿದ್ದೆ ಬಿಟ್ಟು ಕ್ಯೂ ನಿಲ್ಲುವಂತಾಗಿದೆ. ಆದರೆ ಜನನಾಯಕರ ಹೃದಯ ಕರಗಿದ್ದು ಇಲ್ಲವೇ ಇಲ್ಲ.
