ಶಾಸಕರ ಕನಸಿನ ಸ್ವರ್ಣ ನಗರಿಯಲ್ಲಿ ಹೊಂಡಗಳ ಸಾಮ್ರಾಜ್ಯ!
ಮುಂಗಾರು ಮಳೆ ತೀವ್ರತೆ ಪಡೆದುಕೊಂಡಿದೆ. ಸುಸ್ಥಿತಿಯಲ್ಲಿರುವ ರಸ್ತೆಯಲ್ಲೇ ವಾಹನ ಓಡಿಸುವುದು ಕಷ್ಟ. ಅಂತಹದರಲ್ಲಿ ರಸ್ತೆಯನ್ನೇ ನುಂಗಿದ ಹೊಂಡ ಗುಂಡಿಗಳಲ್ಲಿ ಸಂಚಾರವೇ ಸಂಚಿಕಾರ. ಇಂತಹದ್ದೊಂದು ನರಕಯಾತನೆ ಇರುವುದು ಯಾವುದೋ ಒಂದು ಕುಗ್ರಾಮದ ರಸ್ತೆಯಲ್ಲಿ ಅಲ್ಲ. ಬದಲಾಗಿ ಕಾರ್ಕಳ ಪೇಟೆಯ ಹೃದಯ ಭಾಗವಾದ ಪೆರ್ವಾಜೆ, ಕಲ್ಲೊಟ್ಟೆ ಮೂಲಕ ಬಂಡಿಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಂತ ಚಿತ್ರಣ ಇದು. ಈ ಭಾಗದಲ್ಲಿ ಸತತ ನಾಲ್ಕು ಬಾರಿ ಹಿಂದುತ್ವದ ಅಲೆಯಲ್ಲಿ ಗೆದ್ದು ಬೀಗುತ್ತಿರುವ ಸುನೀಲ್ ಕುಮಾರ್ ಅವರ ಕ್ಷೇತ್ರದ ಯಾತನಾಮಯ ಕಥೆಯಿದು.
ಕೇಂದ್ರ -ರಾಜ್ಯ ಸರಕಾರಗಳು ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯದ ಆದ್ಯತೆ ಎಂದು ಬಜೆಟ್ ನಲ್ಲಿ ಕೋಟ್ಯಾಂತರ ರೂಪಾಯಿ ಘೋಷಿಸುತ್ತದೆ. ಆದರೆ ಕೆಲವೊಂದು ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದ್ದು ಅದೇ ಸಾಲಿನಲ್ಲಿ ಪೆರ್ವಾಜೆ -ಕಲ್ಲೊಟ್ಟೆ- ಬಂಡಿಮಠ ರಸ್ತೆಯಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತದೆ. ವಿದ್ಯಾರ್ಥಿಗಳು, ಕಾರ್ಕಳ ಪೇಟೆಗೆ ತೆರಳುವವರು ಕೂಡ ಪ್ರಯಾಣಕ್ಕೆ ಇದೇ ರಸ್ತೆಯನ್ನು ಬಳಸುತ್ತಾರೆ. ಆದರೆ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಗುಂಡಿಗೆ ಬೇಕು. ಹೊಂಡಗಳ ಸಾಮ್ರಾಜ್ಯ ಇದು. ಅಷ್ಟೊಂದು ಮಟ್ಟಿಗೆ ಈ ರಸ್ತೆ ಹದಗೆಟ್ಟಿದೆ. ಇಲ್ಲಿ ಗುಂಡಿಗಳದ್ದೇ ಕಾರುಬಾರು. ವಾಹನ ಸವಾರರು ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವಂತಾಗಿದೆ.

ಕಾರ್ಕಳ ಭಾಗದಲ್ಲಿ ಬೇರೆ ಕಡೆಗಿಂತ ಮಳೆಯ ಪ್ರಮಾಣ ಹೆಚ್ಚು. ಮಳೆ ಬಂದರಂತೂ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಈಜುಕೊಳ, ಕೆರೆ, ಬಾವಿಯ ಸ್ವರೂಪಕ್ಕೆ ರಸ್ತೆ ಗುಂಡಿಗಳು ತಿರುಗುತ್ತದೆ. ನೀರು ತುಂಬಿಕೊಂಡು ಗುಂಡಿ ತೀವ್ರತೆ ಅರಿವು ವಾಹನ ಸವಾರರಿಗಿರುವುದಿಲ್ಲ. ಇಲ್ಲಿ ದ್ವಿಚಕ್ರ, ಆಟೋ ರಿಕ್ಷಾದವರು ಜೀವವನ್ನು ಕೈ ಹಿಡಿದು ಪ್ರಯಾಣಿಸುವಂತಾಗಿದೆ. ದಯವಿಟ್ಟು ಗುಂಡಿ ಮುಚ್ಚಿ ಎಂದು ಸ್ಥಳೀಯರು ಆಗ್ರಹಿಸಿದರೂ ಇಲ್ಲಿನ ಜನಪ್ರತಿನಿಧಿಗಳ ಕಣ್ಣು ಕುರುಡಾಗಿದೆ. ಇತ್ತೀಚೆಗೆ ಸ್ಥಳೀಯರು ಗುಂಡಿಗಳಲ್ಲಿ ಗಿಡ ನೆಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೊಂದೇ ಅಲ್ಲ. ಕಾರ್ಕಳ ತಾಲೂಕು ಬೇರೆ ತಾಲೂಕಿನ ಅಭಿವೃದ್ಧಿಗೆ ಹೋಲಿಸಿದರೆ ಆಮೆ ನಡಿಗೆ ರೀತಿಯಲ್ಲಿ ಇನ್ನೂ ಕೂಡ ಇದೆ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಸತತವಾಗಿ ಗೆದ್ದು ಶಾಸಕರಾಗುತ್ತಿರುವ ಹಿಂದುತ್ವದ ಐಕಾನ್ ಸುನೀಲ್ ಕುಮಾರ್ ಕಾರ್ಕಳ ನಗರವನ್ನು ಸ್ವರ್ಣ ನಗರಿ ಮಾಡಲಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ನಿನ್ನೆ ಮೊನ್ನೆ ರಚನೆಯಾದ ತಾಲೂಕು ಕೇಂದ್ರಗಳು ಸುಸಜ್ಜಿತ ತಾಲೂಕು ಆಡಳಿತ ಸೌಧ ವನ್ನು ಹೊಂದಿದ್ದರೆ, ಕಾರ್ಕಳದಲ್ಲಿ ಈಗಲೂ ಓಬಿರಾಯನ ಕಾಲದ ತಾಲೂಕು ಆಡಳಿತ ಸೌಧ ಕಟ್ಟಡವಿದೆ. ತಾಲೂಕಿನ ಬಹುತೇಕ ರಸ್ತೆಗಳು ಅಗಲೀಕರಣವಾಗದೆ ಪ್ರಯಾಣ ದುಸ್ತರ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ಅವಧಿಗಳಲ್ಲಿ ಶಾಸಕರು ಕಡಿದು ಗುಡ್ಡೆ ಹಾಕಿದದ್ದಾದರೂ ಏನನ್ನು..? ಶಾಸಕ, ಮಂತ್ರಿಯಾಗಿ, ಭವಿಷ್ಯದ ಮುಖ್ಯಮಂತ್ರಿ ಅನ್ನುವ ಬಿರುದು ಪಡೆದು ತೇಲುತ್ತಿರುವ ಇಲ್ಲಿನ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ. ಪರಶುರಾಮನ ಮೂರ್ತಿಯಲ್ಲೂ ಲಫಡಾ ನಡೆಸಿ ಹೆಸರು ಕೆಡಿಸಿಕೊಂಡ ಶಾಸಕರು ರಾಜಕೀಯ ಮಾಡುವುದರಲ್ಲೇ ನಿರತರಾಗಿದ್ದಾರೆ. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಅನ್ನುವ ಆರೋಪಗಳು ಕೇಳಿ ಬರುತ್ತಿವೆ. ಸದನದಲ್ಲಿ ಗುಡುಗುವುದನ್ನೇ ಸಾಧನೆ ಎಂದು ತಿಳಿದುಕೊಂಡಿದ್ದಾರೆ. ನಾಲ್ಕು ಬಾರಿ ಗೆಲ್ಲಿಸಿದ ಮತದಾರರು ಮನೆಗೆ ಕಳುಹಿಸಲು ಗೊತ್ತು ಎಂದು ಮತದಾರರು ಶಾಸಕರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
