ಮಂಗಳೂರು ತಾಲೂಕು ಆಡಳಿತ ಸೌಧ: ಲಂಗರು ಹಾಕಿದ ನುಂಗಾಸುರರು

ಕರಾವಳಿ

ಆನೆ ನಡೆದದ್ದೇ ದಾರಿ ಅನ್ನುವಂತೆ ಇಲ್ಲಿನ ಕೆಲವೊಂದು ಸ್ಟಾಪ್‍ಗಳದ್ದು ಧಿಮಾಕು.!

ಮಂಗಳೂರು ಆಡಳಿತ ಸೌಧಕ್ಕೆ ಹಿಡಿದ ಸಡೇಸಾತ್ ಬಿಡುವ ಲಕ್ಷಣ ಕಾಣುತ್ತಿಲ್ಲ.

ಇಲ್ಲಿ ಲಂಗರು ಹಾಕಿದ ನುಂಗಾಸುರರ ಕಥೆಯನ್ನು ಹೇಳ ಹೊರಟರೆ ಅದೊಂದು ದೊಡ್ಡ ಕಾದಂಬರಿಯಾದೀತು. ಹತ್ತಾರು ವರ್ಷಗಳಿಂದ ಝಂಡಾ ಊರಿ ಕುಳಿತಿರುವ ಕೆಲವೊಂದು ಅಧಿಕಾರಿಗಳು, ನೌಕರರು ಮುಂಡಾ ಮೋಚಿದ್ದೆ. ಲಂಚ ಕಂಡರೆ ಕಣ್ಣು, ಬಾಯಿ ಬಿಡುತ್ತಾರೆ. ಲಂಚ ಇಲ್ಲದೆ ಇಲ್ಲಿ ಕೆಲಸವೇ ಆಗಲ್ಲ. ಕೆಲವೊಂದು ಅಧಿಕಾರಿಗಳು ಲಂಚ ಪಡೆಯಲೇ ಕಚೇರಿಯಲ್ಲಿ ನೌಕರರನ್ನು ಇಟ್ಟಿರುತ್ತಾರೆ. ಅವರ ಮೂಲಕವೇ ಅಡ್ಡ ಕಸುಬಿಗೆ ಇಳಿಯುತ್ತಾರೆ. ಇದು ಸೇಫ್ ಝೋನ್ ಅಂತ ತಿಳಿದಿದ್ದಾರೆ.

ಮಂಗಳೂರು ಮಿನಿ ವಿಧಾನಸೌಧದಲ್ಲಿ ಕೆಲವು ಸಿಬ್ಬಂದಿಗಳದ್ದೇ ದರ್ಬಾರಾಗಿ ಹೋಗಿದೆ. ಇಲ್ಲಿ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಇದ್ದರೂ ಅವರ ಕೈ ಕೆಳಗಿನ ಅಧಿಕಾರಿಗಳು ಮೆಂದುಂಡಿದ್ದೇ ಮೆಂದುಂಡಿದ್ದು. ಯಾರಿಗೂ ಏನೇ ಮಾಡಿದ್ರೂ ತಿಳಿಯುವುದಿಲ್ಲ ಎಂಬ ಹಠಮಾರಿ ಸೋಗಲಾಡಿತನಕ್ಕೆ ಕಟ್ಟುಬಿದ್ದ ಕೆಲವೊಬ್ಬ ಎಡಬಿಡಂಗಿ ಅಧಿಕಾರಿಗಳು, ಎಫ್.ಡಿ.ಎ., ಕೇಸ್ ವರ್ಕರ್ ಸೋಗಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲೇ ಮಂಗಳೂರು ಆಡಳಿತ ಸೌಧವನ್ನು ಮುಳುಗೇಳಿಸಿದ್ದಾರೆ.

ಇಲ್ಲಿನ ಅಧಿಕಾರಿಗಳನ್ನು ಬಿಡಿ, ಕೆಲವೊಂದು ಸಿಬ್ಬಂದಿಗಳು ಅಧಿಕಾರಿಗಳ ರೀತಿ ದರ್ಬಾರ್ ನಡೆಸುತ್ತಿರುವುದನ್ನು ನೋಡಲು ಎರಡು ಕಣ್ಣು ಸಾಲದು. ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಷ್ಟು ವ್ಯವದಾನವಿಲ್ಲದ ಕೆಲ ಸಿಬ್ಬಂದಿಗಳು ತಾವೇ ತಹಶೀಲ್ದಾರ್, ಉಪತಹಶೀಲ್ದಾರ್ ರೀತಿ ಪೋಸ್ ಕೊಡುತ್ತಿದ್ದಾರೆ. ಅಹಂಕಾರಿಗಳಾಗುತ್ತಿದ್ದಾರೆ. ದೊಡ್ಡ ಅಧಿಕಾರಿಗಳಾದರೂ ತಾಳ್ಮೆಯಿಂದ, ಸಂಯಮದಿಂದ ಜನರ ಕಷ್ಟವನ್ನು ಆರಾಮವಾಗಿ ಕೇಳಿಸಿಕೊಂಡರೆ ಇಲ್ಲಿಯ ಪ್ರಥಮ ದರ್ಜೆ, ದ್ವಿತೀಯ ದರ್ಜೆ ರ್ಯಾಂಕಿನ ಕೆಲವು ನೌಕರರು ಮಿನಿ ವಿಧಾನಸೌಧ ತಮ್ಮದೇ ಆಸ್ತಿ ಅನ್ನುವ ರೀತಿಯಲ್ಲಿ ಧಿಮಾಕು ತೋರಿಸುತ್ತಾರೆ. ಕೆಲವೊಂದು ನೌಕರರಂತೂ ಮಿನಿವಿಧಾನಸೌಧ ಬಿಟ್ಟು ಬೇರೆ ಕಡೆ ತೆರಳಲು ಬಿಲ್‍ಕುಲ್ ಒಪ್ಪುತ್ತಿಲ್ಲವಂತೆ. ವರ್ಗಾವಣೆ ಆದೇಶ ಬಂದರೂ ರಾಜಕಾರಣಿಗಳ ಪಾದ ಸೇವೆ ಮಾಡಿ ಖಾಯಂ ಅಲ್ಲಿಯೇ ಲಂಗರು ಹಾಕುತ್ತಿದ್ದಾರಂತೆ, ಮಿನಿವಿಧಾನ ಸೌಧ ಇಲ್ಲಿನ ನೌಕರರು, ಅಧಿಕಾರಿಗಳಿಗೆ ಮೇಯಲು ಸಂಪದ್ಭರಿತ ಪ್ರದೇಶ ಅನ್ನುವುದಕ್ಕೆ ಇದುವೇ ಸಾಕ್ಷಿ.

ಆನೆ ನಡೆದದ್ದೇ ದಾರಿ ಅನ್ನುವಂತೆ ಇಲ್ಲಿನ ಕೆಲವೊಂದು ಸ್ಟಾಪ್‍ಗಳದ್ದು ಧಿಮಾಕಿಗೇನೂ ಕೊರತೆಯಿಲ್ಲ. ಇವರುಗಳನ್ನು ಕೇಳುವವರು ಯಾರು ಇಲ್ಲ, ಹೇಳುವವರು ಯಾರು ಇಲ್ಲವೆಂಬಂತಾಗಿ ಪರಿಣಾಮ ತಮ್ಮದೇ ರಿಪಬ್ಲಿಕ್ ರೀತಿ ಮಿನಿವಿಧಾನ ಸೌಧವನ್ನು ಬದಲಾಯಿಸಿಬಿಟ್ಟಿದ್ದಾರೆ.

ಇನ್ನು ಇಲ್ಲಿಯ ಕೆಲಸ ಕಾರ್ಯದ ಬಗ್ಗೆ ಹೇಳಿ ಪ್ರಯೋಜನವಿಲ್ಲ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕಾಗಿ ಮಿನಿವಿಧಾನ ಸೌಧಕ್ಕೆ ಬರುವುದು ಕಾಮನ್. ಅದು ರೇಷನ್ ಕಾರ್ಡ್, ಹಕ್ಕುಪತ್ರದಿಂದ ಹಿಡಿದು ಸರ್ವೇ ಇಲಾಖೆ ತನಕ ಇಲ್ಲಿ ಜನಜಂಗುಳಿ. ಕಂದಾಯ ಇಲಾಖೆ, ಉಪನೋಂದಣಾಧಿಕಾರಿ ಕಚೇರಿ ಹೀಗೆ ತಮ್ಮ ಕೆಲಸಕ್ಕೆ ಜನಸಾಮಾನ್ಯರು ಡ್ಯೂಟಿ ಬಿಟ್ಟು ಬರುತ್ತಾರೆ. ಆದರೆ ಇಲ್ಲಿ ಅಧಿಕಾರಿಗಳು ಹಾಗೂ ಸರಕಾರದ ದುಡ್ಡು ತಿನ್ನುವ ಕೆಲವು ನೌಕರರು ಸಾರ್ವಜನಿಕರನ್ನು ಸತಾಯಿಸುವುದೆಂದರೆ ಇವರಿಗೆ ಬಹಳಷ್ಟು ಸಂತೋಷ. ಬ್ರೋಕರ್ ಮುಖಾಂತರ ಫೈಲ್ ಬಂದರೆ ಕೆಲಸ ಸಲೀಸು. ಇಲ್ಲವಾದರೆ ಇವರ ಕಚೇರಿಯಲ್ಲಿಯೇ ಫೈಲ್ ಮೂವ್ ಆಗುವುದೇ ಇಲ್ಲ. ಕೆಲವು ನೌಕರರು, ಅಧಿಕಾರಿಗಳಂತೂ ಸಾರ್ವಜನಿಕರೊಂದಿಗೆ ಸ್ವಲ್ಪವೂ ಕಾಮನ್‍ಸೆನ್ಸ್ ಇಲ್ಲದೆ ಬಿಹೇವ್ ಮಾಡುತ್ತಾರೆ ಅನ್ನುವ ಆರೋಪಗಳಿವೆ. ದುಡ್ಡು ಹಿಡಿದುಕೊಂಡು ಬರುವ ಬ್ರೋಕರ್ ಗಳಿಗೆ ಗಂಟೆಗಟ್ಟಲೆ ಚೇಂಬರಿನಲ್ಲಿ ಕುಳ್ಳಿರಿಸಿ ಹರಟೆ ಹೊಡೆಯುವ ಇವರು ಬಡವರು, ವೃದ್ಧರು ಕೆಲಸದ ನಿಮಿತ್ತ ಚೇಂಬರಿಗೆ ಹೋದರೆ ಪಕ್ಕನೆ ಅಲ್ಲಿಂದ ಎಸ್ಕೇಪ್ ಆಗಿ ಮಾಯವಾಗಿ ಬಿಡುತ್ತಾರಂತೆ. ಇನ್ನು ಇಲ್ಲಿನ ಪ್ರಥಮ ದರ್ಜೆ ಸಹಾಯಕನೊಬ್ಬ ಮಿನಿ ವಿಧಾನಸೌಧವನ್ನು ಅಡ್ಡ ಕಸುಬಿನ ತಾಣವಾಗಿ ಬದಲಾಯಿಸಿ ಬಿಟ್ಟಿದ್ದಾನಂತೆ. ಈ ಅಸಾಮಿ ತಾನೇ ತಹಶೀಲ್ದಾರ್ ಅನ್ನುವ ರೀತಿ ಪೋಸ್ ಕೊಟ್ಟು ಜನಸಾಮಾನ್ಯರನ್ನು ಸತಾಯಿಸುತ್ತಿದ್ದಾನೆ ಅನ್ನುವ ಆರೋಪವಿದೆ.

ಇನ್ನು ಇಲ್ಲಿಯ ಕೆಲವೊಂದು ಅಧಿಕಾರಿಗಳು ಆಡಳಿತ ಸೌಧವನ್ನೇ ಅಡ್ಡೆ ಮಾಡಿಕೊಂಡು ಬಿಟ್ಟಿದ್ದಾರೆ. ಸಾರ್ವಜನಿಕರಿಗೆ ಸಖತ್ ಹಿಂಸೆ ಕೊಡುತ್ತಿದ್ದಾರೆ. ಸರಕಾರಿ ಭೂಮಿ ಒತ್ತುವರಿಯಾದರೂ ಇವರು ಕ್ರಮ ತೆಗೆದುಕೊಳ್ಳುತ್ತಿಲ್ಲವಂತೆ. ಕಬಳಿಕೆದಾರರೊಂದಿಗೆ ಸಖ್ಯ ಬೆಳೆಸಿ ಡೀಲ್… ಮಗ ಡೀಲ್… ಕುದುರಿಸಿಕೊಳ್ಳುತ್ತಾರೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ.

ಇವಿಷ್ಟೇ ಅಲ್ಲ. ಆಡಳಿತ ಸೌಧದ ದುರಂತಗಳು ಇನ್ನೂ ಹಲವು ಇದೆ. ಇಲ್ಲಿನ ಓರ್ವ ಅಧಿಕಾರಿ ಕೆಲಸದ ಸಮಯ ತೂರಾಡುತ್ತಾ ಕುಳಿತಿರುತ್ತಾನಂತೆ. ಜನರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ, ‘ಎಣ್ಣೆ’ ಏಟಿನ ಮಹಿಮೆಯನ್ನು ತೋರಿಸುತ್ತಿದ್ದಾನಂತೆ! ಮತ್ತೊಬ್ಬ ಅಧಿಕಾರಿ ಮೂಡಬಿದ್ರೆಯಿಂದ ಇಲ್ಲಿಗೆ ಎತ್ತಂಗಡಿಯಾಗಿದ್ದವ. ಮೂಡಬಿದ್ರೆಯಲ್ಲಿ ಹೆಸರು ಕೆಡಿಸಿಕೊಂಡು ಇಲ್ಲಿ ಕೂತಿದ್ದಾನೆ. ಮತ್ತೋರ್ವ ಕಂದಾಯ ವಿಭಾಗದ ತಹಶೀಲ್ದಾರ್ ಕೆಳಗಿನ ಅಧಿಕಾರಿ ಹತ್ತಾರು ವರ್ಷಗಳಿಂದ ಇಲ್ಲಿಯೇ ಝಂಡಾ ಹೂಡಿ ಕುಳಿತಿದ್ದಾನೆ. ಯಾರೂ ಇಲ್ಲಿಂದ ವರ್ಗಾವಣೆಯಾದರೂ ಈ ಅಸಾಮಿಗೆ ಇಲ್ಲಿಯೇ ಪರ್ಮನೆಂಟ್ ಜಾಗ. ಇನ್ನು ಲೋಕಾಯುಕ್ತ ಇಲಾಖೆ ನಾಲ್ಕೈದು ಬಾರಿ ಆಡಳಿತ ಸೌಧಕ್ಕೆ ದಾಳಿ ನಡೆಸಿದರೂ ಇಲ್ಲಿ ಅಮೇದ್ಯ ತಿನ್ನುವುದು ಕಡಿಮೆಯಾಗುತ್ತಿಲ್ಲ. ವಿಚಿತ್ರ ಅಂದರೆ ಲೋಕಾಯುಕ್ತ ರೈಡ್‍ಗೆ ಸಿಲುಕಿ ಜೈಲು ಪಾಲಾದವರು ಮತ್ತೆ ಇಲ್ಲಿಯೇ ಬಂದು ವಕ್ಕರಿಸಿದ್ದಾರೆ. ಸರ್ವೇ ಇಲಾಖೆಯತ್ತ ಕಣ್ಣು ಹಾಯಿಸಿದಾಗ ಜೈಲು ಪಾಲಾದ ನಾಲ್ಕೈದು ಮಹಾಪುರುಷರು ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಖಾದರ್ ಮಿನಿಸ್ಟ್ರು ಅಲ್ಲ ಮುಖ್ಯಮಂತ್ರಿಯಾದರೂ, ವೇದವ್ಯಾಸ ಎಂಎಲ್‍ಎ ಅಲ್ಲ ಮಂತ್ರಿ ಆದರೂ ಮಂಗಳೂರು ಆಡಳಿತ ಸೌಧಕ್ಕೆ ಹಿಡಿದ ಸಡೇಸಾತ್ ಬಿಡುವ ಲಕ್ಷಣ ಕಾಣುತ್ತಿಲ್ಲ.

ತಹಶೀಲ್ದಾರ್ ಅವರೇ ಇದೇನಿದು..?

ಮಂಗಳೂರು ಆಡಳಿತ ಸೌಧಕ್ಕೆ ರಮೇಶ್ ಬಾಬು ಅವರು ತಹಶೀಲ್ದಾರ್ ಆಗಿ ಬಂದು ವರ್ಷವಾಗುತ್ತಾ ಬಂತು. ಈ ಹಿಂದಿನ ತಹಶೀಲ್ದಾರ್ ಅವರಿಗೆ ಹೋಲಿಸಿದರೆ ರಮೇಶ್ ಬಾಬು ಉತ್ತಮ ಅಧಿಕಾರಿ. ಪುತ್ತೂರಿನಲ್ಲಿ ತಹಶೀಲ್ದಾರ್ ಆಗಿದ್ದಾಗಲೂ ಒಳ್ಳೆಯ ಹೆಸರು ಉಳಿಸಿಕೊಂಡು ಬಂದವರು. ಸೌಮ್ಯ ಸ್ವಭಾವದವರು. ಆದರೆ ಮಂಗಳೂರು ಆಡಳಿತ ಸೌಧದಲ್ಲಿ ಬ್ರೋಕರ್ ಗಳ ಅಡ್ಡೆಯಾಗಿ ಬಿಟ್ಟಿದೆ. ಬಕಾಸುರರ ಅಡ್ಡೆಯಾಗಿ ಬಿಟ್ಟಿದೆ. ಇಲ್ಲಿ ಅಧಿಕಾರಿಗಳಿಗಿಂತ ನೌಕರರೇ ರಾಜ ದರ್ಬಾರ್ ನಡೆಸುತ್ತಿದ್ದಾರೆ. ಮಹಿಳಾ ಮಣಿ ಅಧಿಕಾರಿಯೊಬ್ಬಳು ಸಾರ್ವಜನಿಕರೊಂದಿಗೆ ರಣಚಂಡಿಯ ರೂಪ ತಾಳುತ್ತಾಳೆ. ತನ್ನ ಛೇಂಬರಿಗೆ ಬಂದ ಫೈಲಿನ ಪತ್ರವನ್ನೇ ಒಮ್ಮೊಮ್ಮೆ ನುಂಗಿ ಬಿಡುತ್ತಾಳೆ.

ತಹಶೀಲ್ದಾರ್ ಅವರಿಗೆ ಒಳ್ಳೆಯ ಹೆಸರಿದೆ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವಿದೆ. ಮಂಗಳೂರು ಆಡಳಿತ ಸೌಧದಲ್ಲಿ ನಡೆಯುತ್ತಿರುವ ಆಟಾಟೋಪಕ್ಕೆ ಇನ್ನಾದರೂ ಮುಕ್ತಿ ನೀಡಲಿ.