ಲಂಚ ಪ್ರಕರಣ: ಎ.ಸಿ ಕಾವ್ಯಾರಾಣಿ, ಆಪ್ತಸಹಾಯಕ ಶಿವಕುಮಾರ್‌ ಲೋಕಾಯುಕ್ತ ಪೊಲೀಸರ ಬಲೆಗೆ

ರಾಜ್ಯ

ಮೈಸೂರು: ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮತ್ತು ಅವರ ಆಪ್ತಸಹಾಯಕ ಶಿವಕುಮಾರ್‌ ಸೋಮವಾರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಒಂದು ವರ್ಷದಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಸ.ನಂ.17/26ರ 4 ಎಕರೆ 31 ಗುಂಟೆ ಭೂಮಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಿವಾಸಿ ಡಾ.ರೂಪಾ ಅವರ ಬಳಿ ಉಪವಿಭಾಗಧಿಕಾರಿ 15 ಲಕ್ಷಕ್ಕೆ ರೂಪಾಯಿ ಬೇಡಿಕೆ ಇಟ್ಟಿದ್ದರು. ತದ ನಂತರ 10.50 ಲಕ್ಷಕ್ಕೆ ಒಪ್ಪಂದವಾಗಿತ್ತು. ಈ ಪೈಕಿ ಮೊದಲ ಕಂತಾಗಿ 5 ಲಕ್ಷ ರೂ. ಪಡಕೊಂಡಿದ್ದರು.

2ನೇ ಕಂತಿನ 5.50 ಲಕ್ಷ ರೂ. ಪಡಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಉಪವಿಭಾಗಾಧಿಕಾರಿಯು ಹಣವನ್ನು ಮನೆಯಲ್ಲಿ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಕಾವ್ಯಾರಾಣಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ರವಿಕುಮಾರ್, ಮಡಿಕೇರಿ ಡಿವೈಎಸ್‌ಪಿ ದಿನಕರಶೆಟ್ಟಿ, ಇನ್‌ಸ್ಪೆಕ್ಟರ್‌ ವೀಣಾ ನಾಯಕ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.