ರಾಜ್ಯದಲ್ಲಿ ಪ್ರಸವ ಮರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ: ಸ್ತ್ರೀ ಸಂಕುಲದ ಮೊಗದಲ್ಲಿ ನಗು

ರಾಜ್ಯ

ಲಕ್ಷಕ್ಕೆ 133 ರಿಂದ 58 ಕ್ಕೆ ತಗ್ಗಿದ ಸಾವು; ಹೊಸ ಸಮೀಕ್ಷೆಯಲ್ಲಿ ಬಹಿರಂಗ

ರಾಜ್ಯದಲ್ಲಿ ಹೆರಿಗೆ ಸಂದರ್ಭದಲ್ಲಿನ ತಾಯಂದಿರ ಸಾವಿನ ಪ್ರಮಾಣ ಇಳಿಮುಖವಾಗಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ತಾಯಿ ಮರಣ ಅನುಪಾತವು ಇಳಿಮುಖಗೊಂಡಿರುವುದು ಹೊಸ ಸಮೀಕ್ಷೆಯಿಂದ ಬಹಿರಂಗವಾಗಿದ್ದು ಸ್ತ್ರೀ ಸಂಕುಲದ ಮುಖದಲ್ಲಿ ನಗು ಮೂಡಿಸಿದೆ.

ಭಾರತದ ರಿಜಿಸ್ಟ್ರಾರ್ ಜನರಲ್ ಬಿಡುಗಡೆ ಮಾಡಿರುವ ಸ್ಯಾಂಪಲ್ ರಿಜಿಸ್ಟ್ರೇಷನ್ ವ್ಯವಸ್ಥೆಯ ಹೊಸ ವರದಿಯನ್ವಯ 2019-21 ನೇ ಸಾಲಿನಲ್ಲಿ ಪ್ರತಿ ಲಕ್ಷ ಹೆರಿಗೆಯಲ್ಲಿ 63 ರಷ್ಟಿದ್ದ ತಾಯಿ ಮರಣದ ಸಂಖ್ಯೆ 2020-22 ರಲ್ಲಿ 58 ಕ್ಕೆ ತಗ್ಗಿದೆ.

2011-2013 ರಲ್ಲಿ ಪ್ರತಿ ಲಕ್ಷ ಹೆರಿಗೆಗೆ 133 ತಾಯಂದಿರ ಮರಣ ಸಂಭವಿಸುತ್ತಿತ್ತು. ಅದು 2014-16 ರಲ್ಲಿ 108, 2015-2017 ರಲ್ಲಿ 97, 2016-2018 ರಲ್ಲಿ 92, 2017-2019 ರಲ್ಲಿ 83, 2018-20 ರಲ್ಲಿ 69, 2019-21 ರಲ್ಲಿ 63 ಹಾಗೂ 2020-22 ರಲ್ಲಿ 58 ಕ್ಕೆ ತಗ್ಗಿದೆ.

ಸದ್ಯ ಹೊರಬಿದ್ದಿರುವ ಈ ಸಮೀಕ್ಷೆಯು ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣಗಳಿಗೂ ಮುಂಚಿನದ್ದಾಗಿದೆ. ಬಳ್ಳಾರಿಯ ಬಾಣಂತಿಯರ ಸರಣಿ ಸಾವುಗಳು ಆರೋಗ್ಯ ಇಲಾಖೆ ಹೆರಿಗೆ ಸಾವಿನ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು ಬಾಣಂತಿಯರ ಮೇಲಿನ ನಿರಂತರ ನಿಗಾ, ಸಾಂಸ್ಥಿಕ ಚಿಕಿತ್ಸಾ ಕ್ರಮ ಮತ್ತಿತರ ಸಕಾರಾತ್ಮಕ ಕ್ರಿಯೆಗಳಿಗೆ ಅನುವು ಮಾಡಿಕೊಡುವುದರಿಂದ ಸಹಜವಾಗಿಯೇ ರಾಜ್ಯದಲ್ಲಿ ಹೆರಿಗೆ ಸಾವಿನ ಪ್ರಮಾಣದ ಇಳಿಕೆಯ ಟ್ರೆಂಡ್ ಮುಂದುವರಿಯಲಿದೆ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಧೃಡ ನಂಬಿಕೆ.