ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 76 ವರ್ಷದ ವೃದ್ಧ ಮಹಿಳೆಯನ್ನು ಬೆದರಿಸಿ ದರೋಡೆ ನಡೆಸಿದ ಪ್ರಕರಣ ಆಗಸ್ಟ್ 3 ರಂದು ನಡೆದಿತ್ತು. ವೃದ್ಧ ಮಹಿಳೆ ಮನೆಯಲ್ಲಿದ್ದ ಸಂದರ್ಭ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದಿದ್ದ ಆಗುಂತಕರು ಏಕಾಏಕಿ ಮನೆಯ ಬಾಗಿಲನ್ನು ಬಡಿದಿದ್ದು ಈ ಸಂದರ್ಭ ಪರಿಚಯದವರು ಇರಬೇಕೆಂದು ಮನೆಯ ಬಾಗಿಲು ತೆರೆದ ಸಂದರ್ಭ
ಮನೆಯ ಮೆಟ್ಟಿಲಿನ ಬಳಿ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದು, ಮನೆ ಬಾಗಿಲನ್ನು ತೆಗೆದು ಅವರನ್ನು ವಿಚಾರಿಸುತ್ತಿದ್ದಾಗಲೇ ಮನೆ ಬಾಡಿಗೆಗೆ ಎಂದು ಮಾತನಾಡುತ್ತಾ ಆರೋಪಿಗಳು ಬಾಗಿಲನ್ನು ಬಲವಂತವಾಗಿ ದೂಡಿ, ಮನೆಯೊಳಗೆ ನುಗ್ಗಿ ವೃದ್ಧ ಮಹಿಳೆಯನ್ನು ಕೆಳಕ್ಕೆ ಬೀಳಿಸಿ, ಅವರ ಮೇಲೆ ಹಲ್ಲೆ ನಡೆಸಿ, ಆಕೆಯ ಬಳಿಯಿದ್ದ ಒಂದು ಚಿನ್ನದ ಸರ ಹಾಗೂ ಬಳೆಯನ್ನು ಬಲವಂತವಾಗಿ ದೋಚಿಕೊಂಡು ಪರಾರಿಯಾಗಿರುತ್ತಾರೆ. ಸುಲಿಗೆ ಮಾಡಲಾದ ಚಿನ್ನಾಭರಣಗಳ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ರೂ.3.00 ಲಕ್ಷ ಆಗಿರುತ್ತದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 88/2026, ಕಲಂ 332, 309(6) ಜೊತೆಗೆ 3(5) ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಾಗಿರುತ್ತದೆ.
ಮಧ್ಯಾಹ್ನದ ಹೊತ್ತಿಗೆ ನಡೆದಿದ್ದ ಪ್ರಕರಣ ಸ್ಥಳೀಯವಾಗಿ ಭೀತಿಯ ವಾತಾವರಣವನ್ನು ಸೃಷ್ಟಿಸಿತ್ತು. ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ನಡೆಸಿದ ತನಿಖೆಯ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅಗಸ್ಟ್ 7 ರಂದು ಮಂಗಳೂರಿನ ಮರೋಳಿ ಎಂಬಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳು ಉರ್ವ ಮಠದಕಣಿಯ ನಿವಾಸಿ ಬಾಲ ಸುಬ್ರಹ್ಮಣ್ಯ, ಮಣ್ಣಗುಡ್ಡ ನಿವಾಸಿ ಶ್ಯಾಂ ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಲಿಗೆ ಮಾಡಲಾದ ಸಂಪೂರ್ಣ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ ಬೈಕ್ ನ್ನು ಸ್ವಾಧೀನ ಪಡಿಸಲಾಗಿದೆ. ಪ್ರಕರಣ ವರದಿಯಾದ ಕೇವಲ 3 ದಿನಗಳೊಳಗಾಗಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳ ಪೈಕಿ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಸುಲಿಗೆ ಪ್ರಕರಣಗಳು, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತವೆ.
