ತಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ನೂರಾರು ಜನರಿಗೆ ಲಕ್ಷಾಂತರ ರೂ. ವಂಚಿಸಿದ್ದ ದಂಪತಿಯನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಜಾಲದ ಕಿರಣ್ ಕುಮಾರ್ ಹಾಗೂ ಆರತಿ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ.
ಚಿಕ್ಕಜಾಲದಲ್ಲಿ ‘ಕಾಳಿಕಾ ಎಂಟರ್ ಪ್ರೈಸಸ್’ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ, ತಮ್ಮ ಕಂಪನಿ ಮೂಲಕ ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಸಂಪಾದಿಸಬಹುದು ಎಂದು ದಂಪತಿ ಜಾಹೀರಾತು ಪ್ರಕಟಿಸಿದ್ದರು. ಅಲ್ಲದೆ ಈ ಬಗ್ಗೆ ಚಿಕ್ಕಜಾಲ ಹಾಗೂ ದೇವನಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ಕರಪತ್ರಗಳನ್ನು ಹಂಚಿದ್ದರು. ಇನ್‌ಸ್ಟಾಗ್ರಾಂ, ಫೇಸ್ ಬುಕ್ ಹಾಗೂ ವಾಟ್ಸಪ್ ಮೂಲಕ ಸಹ ಜನರಿಗೆ ಆರೋಪಿಗಳು ಗಾಳ ಹಾಕಿದ್ದರು. ಮನೆಯಲ್ಲಿ ಅಗರಬತ್ತಿ, ಡ್ರೈಫ್ರೂಟ್ಸ್ ಪ್ಯಾಕಿಂಗ್ ಹೀಗೆ ತರಹೇವಾರಿ ಬ್ಯುಸಿನೆಸ್ ಬಗ್ಗೆ ಕಿರಣ್ ಗ್ಯಾಂಗ್ ಪ್ರಚಾರ ಮಾಡಿತ್ತು.
ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಶೇ.30 ರಿಂದ 40 ರಷ್ಟು ಲಾಭ ಕೊಡುವುದಾಗಿ ಹೇಳಿದ್ದರು. ಈ ನಾಜೂಕಿನ ಮಾತಿಗೆ ಮರುಳಾಗಿ ನೂರಾರು ಜನರು ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಕಾಳಿಕಾ ಕಂಪನಿ ವಿರುದ್ಧದ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಗೃಹ ಇಲಾಖೆ ವಹಿಸುವ ಸಾಧ್ಯತೆಗಳಿವೆ.
