ಹಿರಿಯ ನಾಗರಿಕರ ರಕ್ಷಣೆ, ಭದ್ರತೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ, ಅವರ ಆಸ್ತಿಯಲ್ಲಿ ವಾಸಿಸುತ್ತಿರುವ ಮಕ್ಕಳು ಅಥವಾ ಇತರರನ್ನು ತೆರವುಗೊಳಿಸಲು ‘ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಹಾಗೂ ಕಲ್ಯಾಣ ಕಾಯ್ದೆ- 2007’ ರಡಿಯಲ್ಲಿ ರಚಿಸಲಾದ ನ್ಯಾಯಾಧಿಕರಣಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಅತ್ಯಂತ ಪ್ರಮುಖ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು, ಪುತ್ರ ಮತ್ತು ಸೊಸೆಯನ್ನು ಮನೆಯಿಂದ ತೆರವುಗೊಳಿಸುವಂತೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿ ಈ ಮಹತ್ವದ ಆದೇಶ ಹೊರಡಿಸಿದೆ. ಹಿರಿಯ ನಾಗರಿಕರಿಗೆ ಸಮಯೋಚಿತ ರಕ್ಷಣೆ ಮತ್ತು ಆಸರೆ ನೀಡುವುದೇ 2007 ರ ಕಾಯ್ದೆಯ ಮುಖ್ಯ ಉದ್ದೇಶವಾಗಿದ್ದು, ಅದನ್ನು ಈಡೇರಿಸಲು ತೆರವು ಆದೇಶ ಸೂಕ್ತ ಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಪ್ರಕರಣವು ಲಖನೌದ ವಿಕಾಸ್ ನಗರದ ನಿವಾಸಿ ರವಿಕಾಂತ್ ಗುಪ್ತಾ ಎಂಬುವರ ಸ್ವಯಾರ್ಜಿತ ಆಸ್ತಿಗೆ ಸಂಬಂಧಿಸಿದ್ದಾಗಿದೆ. ವಯೋವೃದ್ಧ ತಾಯಿಯನ್ನು ಮನೆಯಿಂದ ಹೊರಹಾಕಿ ವೃದ್ಧಾಶ್ರಮಕ್ಕೆ ಕಳುಹಿಸಲಾದ ಕುಟುಂಬ ವಿವಾದದ ಬೆನ್ನಲ್ಲೇ, ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಮಗ ಹಾಗೂ ಸೊಸೆಗೆ ಮನೆಯನ್ನು ಖಾಲಿ ಮಾಡುವಂತೆ ಆದೇಶಿಸಿದ್ದರು. ಆದರೆ, ಈ ಕಾಯ್ದೆಯಡಿ ಆಸ್ತಿಯಿಂದ ತೆರವುಗೊಳಿಸುವ ನಿರ್ದಿಷ್ಟ ಅಧಿಕಾರ ಅಧಿಕಾರಿಗಳಿಗಿಲ್ಲ ಎಂದು ವಾದಿಸಿ ಮಗ ಹೈಕೋರ್ಟ್ ಮೆಟ್ಟಿಲೇರಿದ್ದಾಗ, ಹೈಕೋರ್ಟ್ ತೆರವು ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕಾಯ್ದೆಯಲ್ಲಿ ‘ತೆರವು’ ಎಂಬ ನಿರ್ದಿಷ್ಟ ಪದವಿಲ್ಲದಿದ್ದರೂ, ಹಿರಿಯ ನಾಗರಿಕರ ಆಸ್ತಿ, ಭದ್ರತೆ ಮತ್ತು ಪೋಷಣೆಯ ಹಕ್ಕನ್ನು ಎತ್ತಿಹಿಡಿಯಲು ಈ ಕಠಿಣ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.
ಒಂದು ನಾಗರಿಕ ಸಮಾಜದ ಮೌಲ್ಯವನ್ನು ಅದು ತನ್ನ ಹಿರಿಯ ನಾಗರಿಕರಿಗೆ ನೀಡುವ ಗೌರವ ಮತ್ತು ಭದ್ರತೆಯ ಆಧಾರದ ಮೇಲೆ ಅಳೆಯಲಾಗುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯು ಕೇವಲ ಹಣಕಾಸಿನ ಜೀವನಾಂಶ ಕೊಡಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತಿಳಿಸಿದೆ. ತಮ್ಮದೇ ಆಸ್ತಿಯಲ್ಲಿ ಪ್ರೀತಿ-ಗೌರವ ಸಿಗದೆ, ಭದ್ರತೆಗೆ ಧಕ್ಕೆಯಾದಾಗ ಅಥವಾ ಮಕ್ಕಳು ಆಸ್ತಿಯನ್ನು ಕಬಳಿಸಲು ಯತ್ನಿಸಿದಾಗ ಆಡಳಿತಾಧಿಕಾರಿಗಳು ತೆರವು ಆದೇಶ ಹೊರಡಿಸುವುದು ಕಾನೂನುಬದ್ಧವಾಗಿದೆ. ಈ ತೀರ್ಪು ತಮ್ಮ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಂದ ಕಿರುಕುಳ ಅನುಭವಿಸುತ್ತಿರುವ ಲಕ್ಷಾಂತರ ವೃದ್ಧ ಪೋಷಕರಿಗೆ ದೊಡ್ಡ ಮಟ್ಟದ ಕಾನೂನು ರಕ್ಷಣೆ ಮತ್ತು ಆಸರೆಯನ್ನು ಒದಗಿಸಿದೆ.
