ಕರಾವಳಿಯಲ್ಲಿ ‘ಬಡ್ಡಿ’ ಮಕ್ಕಳದ್ದೇ ಗೂಂಡಾ ದರ್ಬಾರ್..!

ಕರಾವಳಿ

ರಕ್ತಬೀಜಾಸುರರ ಅಟ್ಟಹಾಸಕ್ಕೆ ಬಡ, ಮಧ್ಯಮ ಕುಟುಂಬಗಳೇ ಬರ್ಬಾದ್

“ಸಾಲ ಮಾಡಿಯಾದರೂ ತುಪ್ಪ ತಿನ್ನು” ಇದು ಹಳೆಯ ಗಾದೆ ಮಾತು. ಆದರೆ ಬಡ, ಮಧ್ಯಮ ವರ್ಗದ ಕುಟುಂಬದ ಸ್ಥಿತಿಗತಿ ಇದಕ್ಕಿಂತ ಭಿನ್ನ. ದುಡಿಮೆಯ ಹಣ ಕುಟುಂಬ ಸಾಕುವುದೇ ಕಷ್ಟವಾಗುತ್ತದೆ. ಇಂದಿನ ಮಿತಿಮೀರಿದ ದರ ಏರಿಕೆ ನಡುವೆ ಕುಟುಂಬದ ಬೇಕು ಬೇಡವನ್ನು ಪೂರೈಸುವುದು ಯಜಮಾನನಿಗೆ ದೊಡ್ಡ ಸವಾಲು. ಇದರ ನಡುವೆ ಸ್ಕೂಲ್ ಫೀಸ್, ಅನಾರೋಗ್ಯ ಸಂಭವಿಸಿದರೆ ಆಸ್ಪತ್ರೆಗೆ ಹಾಕುವ ಕಾಸು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಇಂತಹ ಕುಟುಂಬದ ಸ್ಥಿತಿ ದೈನೇಸಿ ಹಂತಕ್ಕೆ ತಲುಪುತ್ತದೆ. ಆಗ ಅನಿವಾರ್ಯವಾಗಿ ಸಾಲದ ಮೊರೆ ಹೋಗಬೇಕಾಗುತ್ತದೆ. ಇಂತಹ ಕುಟುಂಬಕ್ಕೆ ಆಸರೆ ಆಗುವ ದೃಷ್ಟಿಯಲ್ಲಿ ಹುಟ್ಟಿಕೊಂಡ ಫೈನಾನ್ಸ್ ಹಾವಳಿಗೆ ಈ ಕುಟುಂಬ ಜೋತು ಬಿದ್ದರೆ ಕಥೆ ಮುಗಿಯಿತು. ಮುಂದೆ ಪಡಬಾರದ ಪಾಡು. ಇದಕ್ಕೆ ಜ್ವಲಂತ ಉದಾಹರಣೆ ಮಂಗಳೂರಿನಲ್ಲಿ ಅಣಬೆಗಳಂತೆ ಹುಟ್ಟಿಕೊಂಡಿರುವ ಕೆಲವು ಫೈನಾನ್ಸ್ ಸುಲಿಗೆಕೋರರು.

ಕರಾವಳಿಯಲ್ಲಿ ಉಂಡೆನಾಮ ಇಕ್ಕುವ ಖದೀಮರ ಸಂಖ್ಯೆ ಒಂದು ಕಡೆ ಜಾಸ್ತಿಯಾದರೆ, ಮತ್ತೊಂದು ಕಡೆ ಫೈನಾನ್ಸ್ ಸುಲಿಗೆಕೋರರು ಬಡ, ಮಧ್ಯಮ ವರ್ಗದ ಕುಟುಂಬವನ್ನೇ ಬರ್ಬಾದ್ ಮಾಡುತ್ತಿದ್ದಾರೆ. ಬ್ಯಾಂಕ್ ಸಾಲ ತೀರಿಸಲಾಗದೆ ಹಲವರು ಮಂಗಳೂರಿನಲ್ಲಿ ನೇಣಿಗೆ ಶರಣಾದ ಇತಿಹಾಸವೇ ಕಣ್ಣ ಮುಂದೆ ಇದ್ದರೆ ಇದೀಗ ಫೈನಾನ್ಸ್ ಸಾಲ ವಸೂಲಿನ ಹೆಸರಿನಲ್ಲಿ ಗೂಂಡಾಗಿರಿಗೆ ಇಳಿದವರ ಸಂಖ್ಯೆಗೇನೂ ಕೊರತೆಯಿಲ್ಲ. ಇದೀಗ ಮಂಗಳೂರಿನಲ್ಲಿ ಗೂಂಡಾ ದರ್ಬಾರ್ ನಡೆಸುತ್ತಿರುವ ಫೈನಾನ್ಸ್ ಹಾವಳಿ ಭಾರೀ ಸುದ್ದಿ ಮಾಡುತ್ತಿದೆ.

ಮಂಗಳೂರಿನಲ್ಲಿ ಕಾರ್ಯಾಚರಿಸುವ ಫೈನಾನ್ಸ್ ವೊಂದು ಬಡ ಹಾಗೂ ಮಧ್ಯಮ ವರ್ಗದವರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಸಣ್ಣ ಮೊತ್ತದ ಸಾಲವನ್ನು ನೀಡಿ ಬಡ್ಡಿ, ಚಕ್ರಬಡ್ಡಿಯನ್ನು ಹಾಕಿ ಸಾಲ ತೀರದ ಹಾಗೆ ಮಾಡುತ್ತದೆ. ಸಾಲ ತೀರಿಸಲು ಕಷ್ಟವಾದಾಗ ಅಥವಾ ಕಂತು ಕಟ್ಟಲು ಸಾಧ್ಯವಾಗದೇ ಇದ್ದಾಗ ಗೂಂಡಾ ಪಡೆಯನ್ನು ಕಳುಹಿಸಿ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವ ಜಾಲ ರಾಜಾರೋಷವಾಗಿ ಕಾರ್ಯಾಚರಿಸುತ್ತಿದೆ. ಸಣ್ಣ ಮೊತ್ತ ಸಾಲ ತೆಗೆದು ಅಸಲು ಕಟ್ಟಿದರೂ ಬಡ್ಡಿ, ಚಕ್ರಬಡ್ಡಿಯ ಸುಲಿಗೆ ಸಿಲುಕಿ ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ಕೆಲವರಂತೂ ಆತ್ಮಹತ್ಯೆ ಸುಲಿಗೆ ಸಿಲುಕುವ ಸಾಧ್ಯತೆ ಇದೆ.

ಈ ಬಡ್ಡಿ ದಂಧೆಕೋರರು ದೂರ ದೂರದ ಊರಿಗೆ ತೆರಳಿ ಮಧ್ಯಮ ವರ್ಗದವರನ್ನೇ ಕ್ಯಾಚ್ ಹಾಕಿಕೊಂಡು ಅವರಿಗೆ ಸಾಲ ನೀಡುತ್ತಾರೆ. ಮಧ್ಯಮ ವರ್ಗದ ಕುಟುಂಬದ ಸ್ಥಿತಿ ನಿಮಗೂ ತಿಳಿದಿದೆ. ಬಡಪಾಯಿಗಳು ಕುಟುಂಬವನ್ನು ಮುನ್ನೆಡೆಸಲು ದೈನೇಸಿ ಸ್ಥಿತಿಗೆ ತಲುಪುತ್ತಾರೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ಸಾಲದ ರೂಪದಲ್ಲಿ ದುಡ್ಡು ಸಿಕ್ಕಿದರೂ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಿದ ಹಾಗೆ. ಫೈನಾನ್ಸ್ ರೂಪದಲ್ಲಿ ಸಾಲ ಪಡೆದುಕೊಂಡರೆ ಕಥೆ ಮುಗಿಯಿತು. ಸಾಲದ ಮೂರುಪಟ್ಟು ದುಡ್ಡು ಪಾವತಿಸಬೇಕಾಗುತ್ತದೆ. ಒಂದು ವೇಳೆ ದುಡ್ಡು ಕಟ್ಟಲು ಸಮಯ ತೆಗೆದುಕೊಂಡರೆ ಗೂಂಡಾಗಳ ಅಟ್ಟಹಾಸ. ಜೀವಮಾನದಲ್ಲಿ ಕೇಳದ ಬೈಗುಳ ಕೇಳಬೇಕಾಗುತ್ತದೆ. ಧಮ್ಕಿ, ಅಸಹ್ಯ ಮಾತುಗಳು ಮಾಮೂಲು..ಇದೆಂತಹ ದುರಂತ ಅಲ್ಲವೇ..

ಕನಿಷ್ಠ ಇಪ್ಪತ್ತು ಸಾವಿರ ಸಾಲ ಕೊಡುವಾಗ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ ಸಹಿತ ಸಕಲ ದಾಖಲೆಗಳನ್ನು ತೆಗೆದುಕೊಳ್ಳುತ್ತಾರೆ. ಜಾಮೀನುದಾರ ಕೂಡ ಕೊಡಬೇಕಾಗುತ್ತದೆ. ಪ್ರತಿ ತಿಂಗಳು ಬಡ್ಡಿ, ಅಸಲು ಸೇರಿ ಕಂತು ಕಟ್ಟಬೇಕಾಗುತ್ತದೆ. ಒಂದು ವೇಳೆ ಕಂತು ಕಟ್ಟಲು ಸ್ವಲ್ಪ ಲೇಟಾದರೂ ಇವರ ಅಸಹ್ಯ ಬೈಗುಳದ ಮಾತುಗಳನ್ನು ಕೇಳಬೇಕಾಗುತ್ತದೆ. ತನ್ನದೇ ಆದ ಗೂಂಡಾ ಪಡೆಗಳ ಮೂಲಕ ಹಿಂಸೆಯೂ ನೀಡಲಾಗುತ್ತದೆ. ಇಂತಹ ರಕ್ತ ಬೀಜಾಸುರರ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ಕಾನೂನು ಇಲ್ಲಿ ಇಲ್ಲವೇ.?

ಈ ಹಿಂದೆ ತಮಿಳಿನ ಅಣ್ಣಾಚಿಗಳು ಊರು ಊರಿಗೆ ತೆರಳಿ ಸಾಲ ಕೊಡುತ್ತಿದ್ದರು. ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಹಾಕಿ ವಸೂಲಿ ಮಾಡುತ್ತಿದ್ದರು. ಅಣ್ಣಾಚಿಗಳ ದರ್ಬಾರ್ ಗೆ ಬ್ರೇಕ್ ಬೀಳುತ್ತಿದ್ದಂತೆ ಕೆಲ ಲೋಕಲ್ ಗಳು ಫೈನಾನ್ಸ್ ಹೆಸರಿನಲ್ಲಿ ಇಂತಹ ದಂಧೆಯನ್ನು ಸಾರಾಗವಾಗಿ ನಡೆಸುತ್ತಿದ್ದಾರೆ. ಯಾವ ಕಾನೂನು, ಕಟ್ಟಳೆ ಇಲ್ಲದೆ ಬಡ, ಮಧ್ಯಮವರ್ಗದವರನ್ನು ಪೂರ್ತಿ ದೋಚಿ ತಾವು ಮಾತ್ರ ಐಶಾರಾಮಿ ಕಾರು, ಕೈಗೆ, ಕುತ್ತಿಗೆಗೆ ದುಬಾರಿ ಆಭರಣ ಧರಿಸಿ ತಿರುಗಾಡುತ್ತಿದ್ದಾರೆ. ಸಾಲ ವಸೂಲಿಗಾಗಿ ಗೂಂಡಾ ಪಡೆಯನ್ನು ಸಾಕುತ್ತಿದ್ದಾರೆ. ಇಂತಹ ರಿಪಬ್ಲಿಕ್ ಸೃಷ್ಟಿಸಿರುವ ಬಡ್ಡಿ ಮಕ್ಕಳ ಅಟ್ಟಹಾಸಕ್ಕೆ ಕಡಿವಾಣ ಇಲ್ಲವೇ..?

ಮಂಗಳೂರಿನಲ್ಲಿ ಇದೀಗ ಸಾಲಗಾರರನ್ನು ಪೀಡಿಸುವ ಗೂಂಡಾಪಡೆಗಳ ಅಟ್ಟಹಾಸದ ಕ್ಲಿಪ್ ಗಳು ವೈರಲ್ ಆಗುತ್ತದೆ. ತೀರಾ ಹೇಸಿಗೆ ರೂಪದ ಪದಪುಂಜ ಬಳಸಿ ಧಮ್ಕಿ ಹಾಕುವ ಸುಲಿಗೆಕೋರರ ಅಟ್ಟಹಾಸಕ್ಕೆ ಸಾಲಗಾರರು ಹೈರಣಾಗಿದ್ದಾರೆ. ಇಲ್ಲಿನ ಕಾನೂನುಗಳನ್ನು ಮೀರಿ ವರ್ತಿಸುವ ರಕ್ತ ಬೀಜಾಸುರರಿಗೆ ಕಾನೂನಿನ ಪಾಠ ಕಲಿಸಿ ಕೊಡುವ ಕೆಲಸ ಪೊಲೀಸರು ಮಾಡಬೇಕಾಗಿದೆ. ಇಲ್ಲವಾದರೆ ಹಲವಾರು ಕುಟುಂಬಗಳು ಬೀದಿಗೆ ಬೀಳುವುದಂತೂ ಗ್ಯಾರಂಟಿ.