‘ನಾಗೇಂದ್ರ’ ಬಿಜೆಪಿಗೆ ಕ್ರೆಡಿಟ್ಟು, ಕಾಂಗ್ರೆಸ್ಸಿಗೆ ಕ್ಯಾಶು’

ರಾಜ್ಯ

✍️ ಆರ್.ಟಿ.ವಿಠ್ಠಲಮೂರ್ತಿ

ಸಚಿವ ನಾಗೇಂದ್ರ ರಾಜೀನಾಮೆ‌ ಎಪಿಸೋಡಿನ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮುಗಿಬೀಳಲು ಸಿಎಂ ಡಿ.ಕೆ.ಶಿವಕುಮಾರ್ ಸಜ್ಜಾಗಿದ್ದಾರೆ.
ಅಂದ ಹಾಗೆ ವಾಲ್ಮೀಕಿ ಹಗರಣದ ಹೆಸರಿನಲ್ಲಿ ಸಚಿವ ನಾಗೇಂದ್ತ ಅವರ ವಿರುದ್ಧ ಬಿಜೆಪಿ ತಿರುಗಿ ಬಿತ್ತಲ್ಲ? ಹೀಗೆ ಅ ತಿರುಗಿ ಬಿದ್ದರೂ ಕಾಂಗ್ರೆಸ್ ಅದನ್ನು ನಿರಾಯಾಸವಾಗಿ ಎದುರಿಸಬಹುದಿತ್ತು.
ಯಾಕೆಂದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಂತೆಂತಹ ಹಗರಣಗಳ ಆರೋಪ ಬಂದು ರಣ ರಾದ್ಧಾಂತವಾದರೂ ಸಿದ್ದು-ಡಿಕೆಶಿ ನೇತೃತ್ವದ ಕಾಂಗ್ರೆಸ್ಸು ಅದಕ್ಕೆ ಕ್ಯಾರೇ ಎನ್ನಲಿಲ್ಲ. ಅದು ಸಿದ್ದರಾಮಯ್ಯ ವಿರುದ್ದದ ಮೂಡಾ ನಿವೇಶನಗಳ ಆರೋಪ ಇರಬಹುದು, ಲಕ್ಷ್ಮೀ ಹೆಬ್ಬಾಳ್ಕರ್ ನೋಡಿಕೊಳ್ಳುತ್ತಿದ್ದ ಖಾತೆಗೆ ಸಂಬಂಧಿಸಿದ ಗೃಹಲಕ್ಷ್ಮಿ ಹಣದ ಎಪಿಸೋಡೇ ಇರಬಹುದು, ಅಬ್ಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರ ವಿರುದ್ಧದ ಆರೋಪವೇ ಇರಬಹುದು.
ಇಂತಹ ಪವರ್ ಫುಲ್ಲು ಆರೋಪಗಳನ್ನು ಹಿಡಿದುಕೊಂಡು ಬಿಜೆಪಿ ಹೋರಾಡಿದರೂ ಕ್ಯಾರೇ ಎನ್ನದ ಕಾಂಗ್ರೆಸ್ಸು ನಾಗೇಂದ್ರ ವಿರುದ್ಧದ ಅರೋಪಕ್ಕೆ ಇದೇ ರೆಸ್ಪಾನ್ಸು ಕೊಡಬಹುದಿತ್ತು. ಆದರೆ ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು’ ಅನ್ನ ಎಂಬಂತೆ ನಾಗೇಂದ್ರ ಅವರ ವಿರುದ್ದದ ಬಿಜೆಪಿ ಹೋರಾಟವನ್ನು ಗಂಭೀರವಾಗಿ ತೆಗೆದುಕೊಂಡಂತೆ ನಟಿಸಿದ ಕಾಂಗ್ರೆಸ್ಸು ಸಚಿವ ನಾಗೇಂದ್ರ ಅವರ ಕೈಲಿ ರಾಜೀನಾಮೆ ಪಡೆಯಿತು. ಮತ್ತು ಅವರು ತೆರವು ಮಾಡಿದ ಜಾಗಕ್ಕೆ‌ ಮತ್ತೊಬ್ಬರನ್ನು ತರಲು ರೆಡಿ ಅಗುತ್ತಿದೆ. ಇಂಟರೆಸ್ಟಿಂಗ್ ಸಂಗತಿ ಎಂದರೆ, ಈ ಮಧ್ಯೆ ನಾಗೇಂದ್ರ ಅವರ ರಾಜೀನಾಮೆ ಎಪಿಸೋಡನ್ನು ಮುಂದಿಟ್ಟುಕೊಂಡು ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮುಗಿಬೀಳಲು ಅದು ಸಜ್ಜಾಗಿರುವುದು.

ಅಂದ ಹಾಗೆ ಅದು ಕುಮಾರಸ್ವಾಮಿ ವಿರುದ್ದ ಮುಗಿ ಬೀಳಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಡಿಕೆ ಸರ್ಕಾರಕ್ಕೆ ಪವರ್ ಫುಲ್ ಎದುರಾಳಿ ಎಂದರೆ ಕುಮಾರಸ್ವಾಮಿ. ಇವತ್ತು ಬಿಡದಿ ಟೌನ್ ಶಿಪ್ ವಿಷಯವೇ ಇರಬಹುದು,ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಲಾಗುತ್ತಿದೆ ಅಂತ ಅವರು ಆರೋಪಿಸಿದ್ದೇ ಇರಬಹುದು. ಒಟ್ಟಿನಲ್ಲಿ ಅವರು ಪ್ರಯೋಗಿಸುತ್ತಿರುವ ಅಸ್ತ್ರಗಳು ಡಿಕೆ ಸರ್ಕಾರಕ್ಕೆ ಸವಾಲಾಗಿ, ಮುಜುಗರವಾಗಿ ಕಾಡುತ್ತಿರುವುದು ನಿಜ. ಹೀಗಾಗಿ ನಾಗೇಂದ್ರ ರಾಜೀನಾಮೆ ಎಪಿಸೋಡನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ವಿರುದ್ಧ ಮುಗಿಬೀಳಲು ನಿರ್ಧರಿಸಿರುವ ಡಿಕೆ ಸರ್ಕಾರ ಇದಕ್ಕಾಗಿ ರಾಜಭವನದ ಕದ ತಟ್ಟಲಿದೆ.

ಅಂದ ಹಾಗೆ ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಪಾತ್ರವಿದ್ದು, ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಈ ಹಿಂದೆ ಎಸ್.ಐ.ಟಿ ಕೋರಿತ್ತಲ್ಲ? ಈ ಕೋರಿಕೆಯ ಫೈಲು ಈಗಲೂ ರಾಜ್ಯಪಾಲರ ಬಳಿ ಸೇಫಾಗಿದೆ.
ಹೀಗಾಗಿ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಕುಮಾರಸ್ವಾಮಿ ಅವರ ವಿರುದ್ಧದ ವಿಚಾರಣೆಗೆ ಅನುಮತಿ ನೀಡಬೇಕು ಅಂತ ಮತ್ತೊಮ್ಮೆ ರಾಜ್ಯಪಾಲರನ್ನು ಆಗ್ರಹಿಸುವುದು ಡಿಕೆ ಸರ್ಕಾರದ ಲೆಕ್ಕಾಚಾರ. ಹೀಗೆ ಕುಮಾರಸ್ವಾಮಿ ವಿರುದ್ದ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಆಗ್ರಹಿಸಲಿರುವ ಅದು ಮತ್ತೊಂದು ಕಡೆಯಿಂದ: ‘ಆರೋಪ ಬಂದ ಕೂಡಲೇ ನಾವು ನಾಗೇಂದ್ರ ಅವರ ರಾಜೀನಾಮೆ ಪಡೆದೆವು. ಈಗ ಕುಮಾರಸ್ವಾಮಿ ಕೂಡಾ ತಮ್ಮ ವಿರುದ್ಧದ ಅರೋಪಕ್ಕೆ ಪ್ರತಿಯಾಗಿ ರಾಜೀನಾಮೆ ಕೊಡಲಿ’ ಅಂತ ಜನರ ಮುಂದೆ ಹೇಳಲು ಸಜ್ಜಾಗುತ್ತಿದೆ.
ಇದು ಎಲ್ಲಿಗೆ ತಲುಪುತ್ತದೋ ಕಾದು ನೋಡಬೇಕು.

ಫೀಲ್ಡಿಗೆ ಇಳಿದ್ರು ಜಾರಕಿಹೊಳಿ

ಇನ್ನು ನಾಗೇಂದ್ರ ಅವರ ರಾಜೀನಾಮೆಯ ನಂತರ‌ ಕೈ ಪಾಳಯದಲ್ಲಿ ಮೈನರ್ ಸರ್ಜರಿಯ ಕಸರತ್ತು ಶುರುವಾಗಿದ್ದು, ಈ ಕಸರತ್ತಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎಂಟ್ರಿಯಾಗಿದ್ದಾರೆ. ಅಂದ ಹಾಗೆ ವಾಲ್ಮೀಕಿ ಹಗರಣದ ಹೆಸರಿನಲ್ಲಿ ನಾಗೇಂದ್ರ ತಲೆದಂಡವನ್ನು ಊಹಿಸಿದ್ದ ಕಾಂಗ್ರೆಸ್ ಪಾಳಯದಲ್ಲಿ ಸಚಿವ ಸಂಪುಟದ ಮೈನರ್ ಸರ್ಜರಿ ಹೇಗಿರಲಿದೆ ಎಂಬ ಕುತೂಹಲ ಕಾಣಿಸಿತ್ತು. ಇಂತಹ ಕುತೂಹಲಕ್ಕೆ‌ ಪೂರಕವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಳಯದಿಂದ ಎರಡು ಹೆಸರುಗಳು ರೇಸಿಗೆ ಬಂದಿದ್ದವು. ಈ ಪೈಕಿ ಒಂದು ಕುರುಬ ಸಮುದಾಯದ ಬಸವರಾಜ ಶಿವಣ್ಣನವರ್. ಮತ್ತೊಂದು ಹೆಸರು ಅನ್ನಪೂರ್ಣ ತುಕಾರಾಂ. ಈ ಪೈಕಿ ಅನ್ನಪೂರ್ಣ ತುಕಾರಾಂ ಅವರಿಗೆ ಮಂತ್ರಿಗಿರಿ ಕೊಟ್ಟರೆ‌ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗುತ್ತದೆ. ಯಾಕೆಂದರೆ ನಾಗೇಂದ್ರ ಅವರ ಜಾಗಕ್ಕೆ ಪರಿಶಿಷ್ಟ ಪಂಗಡದವರೇ ಬಂದಂತಾಗುತ್ತದೆ. ಅದೇ ರೀತಿ ಲೇಡೀಸ್ ಕೋಟಾ ಭರ್ತಿಯಾದಂತಾಗುತ್ತದೆ.

ಇನ್ನು ಖಾಲಿ ಉಳಿದಿರುವ ಮತ್ತೊಂದು ಸ್ಥಾನಕ್ಕೆ ಬಸವರಾಜ ಶಿವಣ್ಣನವರ್ ಅವರನ್ನು ತಂದರೆ‌ ಉತ್ತರ ಕರ್ನಾಟಕದ ಕುರುಬರಿಗೆ ಅವಕಾಶ ನೀಡಿದಂತಾಗುತ್ತದೆ ಎಂಬುದು ಸಿದ್ದರಾಮಯ್ಯ ಪಾಳಯದ ವಾದ.
ಆದರೆ ಇಂತಹ ವಾದಕ್ಕೆ ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೌಂಟರ್‌ ಕೊಟ್ಟಿದ್ದಾರೆ. ಕೆಲವೇ ಕಾಲದ ಹಿಂದೆ ಸಿದ್ದು ಬ್ರಿಗೇಡ್ ನ‌ ದಂಡನಾಯಕರಾಗಿದ್ದ ಸತೀಶ್ ಜಾರಿಹೊಳಿ ಈಗ ಇಂಡಿಪೆಂಡೆಂಟ್ ಬ್ರಿಗೇಡ್ ಸ್ಥಾಪಿಸಿಕೊಂಡಿದ್ದು, ಇದಕ್ಕೆ‌ ಪೂರಕವಾಗಿ ತಮ್ಮ ಬ್ರಿಗೇಡ್ ನ್ನು ಗಟ್ಟಿಗೊಳಿಸಲು ಹೊರಟಿದ್ದಾರೆ.
ಹೀಗಾಗಿಯೇ ಸಿದ್ಧು ಪಾಳಯದಿಂದ ಅನ್ನಪೂರ್ಣ ತುಕಾರಾಂ ಮತ್ತು ಬಸವರಾಜ ಶಿವಣ್ಣನವರ್ ಹೆಸರು ಪ್ರಸ್ತಾಪವಾದರೆ, ಜಾರಕಿಹೊಳಿ ಅವರು ಪರಿಶಿಷ್ಟ ಪಂಗಡದ ಕೋಟಾದಲ್ಲಿ ಕಂಪ್ಲಿ ಗಣೇಶ್ ಮತ್ತು ಕುರುಬರ ಕೋಟಾದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಮುಂದೆ ಬಿಟ್ಟಿದ್ದಾರೆ.
ಹೀಗೆ ಸಿದ್ದು ಪಾಳಯಕ್ಕೆ ಕೌಂಟರ್ ಆಗಿ ಜಾರಕಿಹೊಳಿ ಮುಂದೆ ಬಿಟ್ಟಿರುವ ಹೆಸರುಗಳು ರೇಸಿಗೆ ಬರುತ್ತಿದ್ದಂತೆಯೇ ಇತ್ತ ಮುಖ್ಯಮಂತ್ರಿ ಡಿಕೆಶಿ ಪಾಳಯ ಕೂಲ್ ಅಗಿ ಬಸವರಾಜ ಶಿವಣ್ಣನವರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರಿಗೆ ಬಲ ತುಂಬುತ್ತಿದೆ.
ಅರ್ಥಾತ್, ರಾಜ್ಯ ಕಾಂಗ್ರೆಸ್ ನಲ್ಲೀಗ ಬಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅದರ ಪರಿಣಾಮವಾಗಿ ಫೈಟೂ ಜೋರಾಗುತ್ತಿದೆ.

ಬಿಜೆಪಿಗೆ ಕ್ರೆಡಿಟ್ಟು ಕಾಂಗ್ರೆಸ್ಸಿಗೆ ಕ್ಯಾಶು

ಈ ಮಧ್ಯೆ ಸಚಿವ ನಾಗೇಂದ್ರ ರಾಜೀನಾಮೆ ಪ್ರಕರಣ ಕುತೂಹಲಕಾರಿ ಚರ್ಚೆಗಳಿಗೆ ಕಾರಣವಾಗಿದ್ದು ನಾಗೇಂದ್ರ ರಾಜೀನಾಮೆಯ ಕ್ರೆಡಿಟ್ಟು ಬಿಜೆಪಿಗೆ, ಕ್ಯಾಶು ಕಾಂಗ್ರೆಸ್ಸಿಗೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಯಾಕೆಂದರೆ ರಾಜೀನಾಮೆ ಪ್ರಕರಣದ ನಂತರ ವಾಲ್ಮೀಕಿ ಮತ ಬ್ಯಾಂಕಿನಲ್ಲಿ ನಾಗೇಂದ್ರ ಪರವಾಗಿ ಅನುಕಂಪದ ಅಲೆ ಸೃಷ್ಟಿಯಾಗಿದ್ದು, ತಮ್ಮ ಸಮುದಾಯದ ಪವರ್ ಫುಲ್ಲು ನಾಯಕರಾಗಿ ಬೆಳೆದು ನಿಂತ ನಾಗೇಂದ್ರ ಅವರಿಗೆ ಬಿಜೆಪಿ ಘಾಸಿ ಮಾಡಿದೆ ಎಂಬ ಸಿಟ್ಟು ಕಾಣಿಸಿಕೊಂಡಿದೆ. ಸಾಲದೆಂಬಂತೆ ವಾಲ್ಮೀಕಿ ನಾಯಕನ ಬಲಿಗೆ ಕಾರಣವಾಗಿ, ವಾಲ್ಮೀಕಿ ಕೋಟೆಯಲ್ಲೇ ಪಾದಯಾತ್ರೆ ಮಾಡುವ ಬಿಜೆಪಿಯ ಧೋರಣೆ ಅದರ ಅಸಮಾಧಾನಕ್ಕೆ ಕಾರಣವಾಗಿದೆ.

ಅಂದ ಹಾಗೆ ಈ ಹಿಂದೆ ಸಿದ್ದರಾಮಯ್ಯ ನಾಯಕತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆಗೆ ಗಣಿಧಣಿ ಜನಾರ್ಧನ ರೆಡ್ಡಿ ಗುರಿಯಾಗಿದ್ದರೇ ಹೊರತು ವಾಲ್ಮೀಕಿ ಸಮುದಾಯದ ಬಿ.ಶ್ರೀ ರಾಮುಲು ಅಲ್ಲ. ಹೀಗಾಗಿ ಸಿದ್ದು ನಾಯಕತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ತೆಗೆ ಅಭೂತಪೂರ್ವ ಯಶಸ್ಸು ದಕ್ಕಿತು. ಆದರೆ ಈಗ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ವಾಲ್ಮೀಕಿ ನಾಯಕ ನಾಗೇಂದ್ರ, ಅ ಮೂಲಕ ಕಾಂಗ್ರೆಸ್ಸು ಗುರಿಯಾಗಿರುವುದರಿಂದ ಅದು ವರ್ಕ್ ಔಟು ಆಗುವುದಿಲ್ಲ ಎಂಬುದು ರಾಜಕೀಯ ವಲಯಗಳ ಲೆಕ್ಕಾಚಾರ. ಪರಿಣಾಮ? ಬಿಜೆಪಿ ಪಾದಯಾತ್ರೆಯ ನಂತರ ಬಳ್ಳಾರಿ ಪಾಕೀಟಿನಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗುವಂತೆ ಮಾಡುತ್ತದೆಯೇ ಹೊರತು ಬಿಜೆಪಿ ಅಲ್ಲ ಎಂಬುದು ಅದರ ಲೆಕ್ಕಾಚಾರ.

ಇನ್ನು ಸಚಿವ ನಾಗೇಂದ್ರ ಅವರ ರಾಜೀನಾಮೆ ಎಪಿಸೋಡು ಕಾಂಗ್ರೆಸ್ ಪಾಲಿಗೆ ಟಾನಿಕ್ಕು. ಯಾಕೆಂದರೆ ಸಂಪುಟ ವಿಸ್ತರಣೆಯ ಕಸರತ್ತಿನ ನಂತರ ಬಂಡಾಯದ ಬಿಸಿ ಅನುಭವಿಸುತ್ತಿದ್ದ ಕಾಂಗ್ರೆಸ್ ಈಗ ನಾಗೇಂದ್ರ ಅವರ ಜಾಗವನ್ನು ಮತ್ತೊಬ್ಬರಿಗೆ ನೀಡಿ ಅತೃಪ್ತಿಯ ಬಿಸಿಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುತ್ತದೆ. ಅಲ್ಲಿಗೆ ನಾಗೇಂದ್ರ ವಿರುದ್ಧದ ಹೋರಾಟದ ಕ್ರೆಡಿಟ್ಟು ಬಿಜೆಪಿಗೆ, ಕ್ಯಾಶು ಕಾಂಗ್ರೆಸ್ಸಿಗೆ ಎಂಬಂತಾಗಿದೆ.

ಮೊದಲ ಬಂಡಾಯ ಸಭೆ

ಈ ಮಧ್ಯೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಮೌನವಾಗಿದ್ದ ಮೂವತ್ತಕ್ಕೂ ಹೆಚ್ಚು ಶಾಸಕರು ಈ ವಾರ ಸಭೆ ನಡೆಸಿ ತಮ್ಮ ಬೇಗುದಿ ತೋಡಿಕೊಳ್ಳಲು‌ ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ಹೀಗೆ ಸಭೆ ಸೇರುತ್ತಿರುವ ಶಾಸಕರಲ್ಲಿ ಬಹುತೇಕರು ಉತ್ತರ ಕರ್ನಾಟಕ ಭಾಗದವರು. ತಮ್ಮ ಗೆಲುವಿಗೆ ಸಿದ್ದರಾಮಯ್ಯ ಅವರ ಶಕ್ತಿ ಬೇಕೇ ಬೇಕು ಎಂಬ ಲೆಕ್ಕಾಚಾರದಲ್ಲಿರುವ ಈ ಶಾಸಕರು ಡಿಕೆ ಮುಖ್ಯಮಂತ್ರಿಯಾದ ಹೊಸತರಲ್ಲಿ ಮಂತ್ರಿಗಿರಿಗಾಗಿ ಲಾಬಿ ನಡೆಸಿದ್ದರು.

ಅದರೆ ಡಿಕೆ ಸರ್ಕಾರದಲ್ಲಿ ತಮಗೆ ಮಂತ್ರಿಗಿರಿ ಇರಲಿ, ಬೋರ್ಡು-ಕಾರ್ಪೊರೇಷನ್ನುಗಳ ಅಧ್ಯಕ್ಷಗಿರಿ ಸಿಗುವುದೂ ಕಷ್ಟ ಎಂಬುದು ಈ ಶಾಸಕರಿಗೆ ಅರ್ಥವಾಗಿದೆ. ಇದರಲ್ಲೇ ಹಲವು ಶಾಸಕರು ಮೊನ್ನೆ ಪುನ: ದಿಲ್ಲಿ ಯಾತ್ರೆ ನಡೆಸಿದ್ದರಲ್ಲದೆ ಪಕ್ಷದ ವರಿಷ್ಟರನ್ನು ಭೇಟಿ ಮಾಡಿ ತಮ್ಮ ಅಹವಾಲು ತೋಡಿಕೊಂಡಿದ್ದಾರೆ.
ಹೀಗೆ ಅಹವಾಲು ತೋಡಿಕೊಂಡರೂ ಅವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತು. ಅದೆಂದರೆ ತಮ್ಮ ಅಹವಾಲು ಕೂಡಾ ಧೂಳು ತಿಂದ ಫೈಲಿನೊಳಗೆ ಕೂರುತ್ತದೆ ಎಂಬುದು. ಇಷ್ಟಾದರೂ ಅವರು ವರಿಷ್ಟರನ್ನು ಏಕೆ ಭೇಟಿ ಮಾಡಿದ್ದಾರೆಂದರೆ, ಹೇಳುವುದನ್ನು ಹೇಳಿದ್ದೇವೆ. ಇನ್ನೇನಿದ್ದರೂ ನಮ್ಮ ದಾರಿ ನಮಗೆ ಅಂತ ಸಿಗ್ನಲ್ಲು ಕೊಡಯವುದು.

ಕಾಂಗ್ರೆಸ್ ಮೂಲಗಳ ಪ್ರಕಾರ: ‘ತಕ್ಷಣದ ದೃಷ್ಟಿಯಿಂದ ಇದು ಅಸಮಾಧಾನಿತರ ಸಭೆ. ಆದರೆ ಮುಂದಿನ ದಿನಗಳಲ್ಲಿ ಶುರುವಾಗಲಿರುವ ಬಂಡಾಯಕ್ಕೆ ಇದು ಮುನ್ಸೂಚನೆ.

ಲಾಸ್ಟ್ ಸಿಪ್

ರಾಜ್ಯ ರಾಜಕೀಯದ ಒಳವಲಯಗಳಲ್ಲಿ ಇಂಟರೆಸ್ಟಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಅದರ ಪ್ರಕಾರ: ‘ಮೊನ್ನೆ ಮೊನ್ನೆಯವರೆಗೆ ಶರಂಪರ ಬಡಿದಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನ ಇಬ್ಬರು ನಾಯಕರು ಈಗ ಆಳದಲ್ಲಿ ಒಂದಾಗಲು ಬಯಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಆಪ್ತರ ಮೂಲಕ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಸಂದೇಶ ರವಾನೆ ಮಾಡುವ ಸಂದರ್ಭದಲ್ಲೇ ಒಬ್ಬ ನಾಯಕರು ಮತ್ತೊಬ್ಬರಿಗೆ: ‘ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಅದು ತುಂಬಾ ಮುಖ್ಯ’ಅಂತ ಹೇಳಿ ಕಳಿಸಿದ್ದಾರಂತೆ.