ಬೆಳ್ಳಾರೆ: ವಿದ್ಯಾರ್ಥಿ ನಿಲಯಕ್ಕೆ ಅಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರ ಬಟ್ಟೆ ಕಳವು ಪ್ರಕರಣ: ಪುತ್ತೂರಿನ ರಾಮಚಂದ್ರ ಅರೆಸ್ಟ್

ಕರಾವಳಿ

ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ ಬಟ್ಟೆಗಳು ಕಳವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಕೆ. ರಾಮಚಂದ್ರ ಎಂಬಾತನನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 2 ರಂದು ಬೆಳಿಗ್ಗೆ ವಿದ್ಯಾರ್ಥಿನಿಯರು ಒಣಗಲು ಹಾಕಿದ್ದ ಬಟ್ಟೆಗಳು ಕಾಣೆಯಾಗಿರುವ ಸಂಗತಿ ಗಮನಕ್ಕೆ ಬಂದಿದ್ದು ಈ ವಿಚಾರವನ್ನು ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಸಿ ಸಿ ಕ್ಯಾಮರಾ ಪರಿಶೀಲಿಸಿದಾಗ ದಿನಾಂಕ: 02.09.2026 ರಂದು ಬೆಳಗ್ಗಿನ ಜಾವ ಅಪರಿಚಿತ ಯುವಕನೋರ್ವ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿಗಳು ಒಣಗಿಸಲು ಹಾಕಿದ ಬಟ್ಟೆಗಳಲ್ಲಿ ಕೆಲವು ಬಟ್ಟೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ.

ಈ ಬಗ್ಗೆ ಸೆಪ್ಟೆಂಬರ್ 5 ರಂದು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 54/2026 ಕಲಂ: 331(4),305 BNS-2023 ರಂತೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಪುತ್ತೂರು ಕೊಳ್ತಿಗೆ ನಿವಾಸಿ ಕೆ ರಾಮಚಂದ್ರ ಎಂಬಾತನನ್ನು ಸೆಪ್ಟೆಂಬರ್ 7 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಸೆಪ್ಟೆಂಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.