ಉದ್ಯೋಗ ಬಿಡಿ, ಇಲ್ಲದಿದ್ದರೆ ಸಾಯಲು ರೆಡಿಯಾಗಿ.! ಕಾಶ್ಮೀರಿ ಪಂಡಿತರಿಗೆ ಉಗ್ರರ ಬೆದರಿಕೆ

ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಕ್ತಪಾತದ ಭೀತಿ ಶುರುವಾಗಿದೆ. ಕಣಿವೆ ರಾಜ್ಯದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ವಿರುದ್ಧ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾದ ಅಂಗ ಸಂಸ್ಥೆಯಾದ ‘ಯುನೈಟೆಡ್ ಲಿಬರೇಷನ್ ಕೌನ್ಸಿಲ್’ ಮೂಲಕ ಜೀವ ಬೆದರಿಕೆ ನೀಡಿದೆ. ಉದ್ಯೋಗಕ್ಕೆ ತಕ್ಷಣ ರಾಜೀನಾಮೆ ನೀಡಿ, ಇಲ್ಲದಿದ್ದರೆ ಸಾಯಲು ತಯಾರಾಗಿ ಎಂದು ಉಗ್ರರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಕಳೆದೊಂದು ತಿಂಗಳಲ್ಲಿ 5-6 ಬಾರಿ ಇಂಥ ಬೆದರಿಕೆ ಸಂದೇಶಗಳು ಬಂದಿದ್ದು, ಸುಮಾರು 7000 ಕಾಶ್ಮೀರಿ ಪಂಡಿತರು ಆತಂಕದಲ್ಲಿದ್ದಾರೆ.

ಈ ನಡುವೆ ಉದ್ಯೋಗಿಗಳ ವೈಯಕ್ತಿಕ ಮಾಹಿತಿಯೂ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ ಎನ್ನಲಾಗಿದ್ದು, ಭದ್ರತಾ ಪರಿಶೀಲನೆ, ಎಫ್‌ಐಆರ್ ದಾಖಲಿಸುವುದು ಹಾಗೂ ಪಂಡಿತ ಉದ್ಯೋಗಿಗಳಿಗೆ ಹೆಚ್ಚಿನ ರಕ್ಷಣೆ ನೀಡುವಂತೆ ಆಗ್ರಹಗಳು ಕೇಳಿಬಂದಿವೆ. ಲಷ್ಕರ್-ಇ-ತೊಯ್ಬಾ ಜೊತೆ ಸಂಪರ್ಕ ಹೊಂದಿದೆ ಎನ್ನಲಾದ ಯುನೈಟೆಡ್ ಲಿಬರೇಶನ್ ಕೌನ್ಸಿಲ್ ಹೆಸರಿನಲ್ಲಿ ಹೊರಬಂದಿರುವ ಹೊಸ ಬೆದರಿಕೆ ಪತ್ರಗಳು ಕಾಶ್ಮೀರ ಕಣಿವೆಯಲ್ಲಿರುವ ಸುಮಾರು 7 ಸಾವಿರ ಕಾಶ್ಮೀರಿ ಪಂಡಿತರಿಗೆ ಆತಂಕ ಮೂಡಿಸಿವೆ.

ಖಾಸಗಿ ದೂರವಾಣಿ ಸಂಖ್ಯೆಗಳು, ಮನೆ ವಿಳಾಸಗಳು ಹಾಗೂ ವಾಹನ ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿದೆ ಎನ್ನಲಾಗಿದ್ದು, ಉದ್ಯೋಗ ತೊರೆಯಬೇಕು, ಇಲ್ಲವಾದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. 1990ರ ದಶಕದಲ್ಲೂ ಇದೇ ರೀತಿಯ ವಿಧಾನವನ್ನು ಅವರು ಅನುಸರಿಸುತ್ತಿದ್ದರು. ಆಗ ಇಂಟರ್ನೆಟ್ ಇರಲಿಲ್ಲ. ಹೆಸರುಗಳ ಪಟ್ಟಿಯನ್ನು ಟೈಪ್ ಮಾಡಿ ಗೋಡೆಗಳ ಮೇಲೆ ಅಂಟಿಸುತ್ತಿದ್ದರು.

ಸೆಪ್ಟೆಂಬರ್ 1ರಂದು ಬಂದಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರ ಭದ್ರತಾ ಪರಿಸ್ಥಿತಿ ಕುರಿತು ಕಾಶ್ಮೀರಿ ಪಂಡಿತರ ಸಂಘಟನೆಗಳು ಹಾಗೂ ಕಣಿವೆಯಲ್ಲಿ ಕುಟುಂಬಗಳನ್ನು ಹೊಂದಿರುವ ಸಮುದಾಯದ ಸದಸ್ಯರೊಂದಿಗೆ ಮಾಹಿತಿ ಸಂಗ್ರಹಿಸಲಾಗಿದೆ. ಕಾಶ್ಮೀರಿ ಪಂಡಿತರ ಸಂಘಟನೆ (KPA) ಮತ್ತು ಆಲ್ ಇಂಡಿಯಾ ಕಾಶ್ಮೀರಿ ಸಮಾಜ (AIKS) ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿವೆ. ಆದರೆ, ಕಣಿವೆಯಲ್ಲಿ ಕುಟುಂಬಗಳನ್ನು ಹೊಂದಿರುವ ಕೆಲವು ಕಾಶ್ಮೀರಿ ಪಂಡಿತರು ಇತ್ತೀಚಿನ ದಿನಗಳಲ್ಲಿ ಇಂತಹ ಬೆದರಿಕೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ