ಐಎಎಸ್, ಭಾರತ ರತ್ನ, ಪದ್ಮಶ್ರೀ ಅಂತಹ ಉನ್ನತ ಪ್ರಶಸ್ತಿ, ಪದವಿ ಪಡೆದರೂ ಅನುಮಾನ.!
SIR ಕರಾಳ ಮುಖದ ದರ್ಶನ ರಾಜ್ಯದಲ್ಲೂ ಬೆಳಕಿಗೆ ಬರುತ್ತಿದೆ. SIR ಜಾರಿಯಾದರೆ ತಪ್ಪೇನು..? ಪಾಕಿಸ್ತಾನ, ಬಾಂಗ್ಲಾದೇಶದ ನುಸುಳುಕೋರರ ಪತ್ತೆಯಾಗುತ್ತದೆ ಅನ್ನುವ ಕಥೆ ಕಟ್ಟಿ ಜಾರಿಗೆ ಬಂದ SIR ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದ ಹೆಮ್ಮೆಯ ಪುತ್ರರನ್ನೇ ಅನುಮಾನದ ದೃಷ್ಟಿಯಿಂದ ನೋಡುವ ಹಂತಕ್ಕೆ ಬಂದು ನಿಂತಿದೆ ಅನ್ನುವುದು ಸುಳ್ಳಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದಲ್ಲಿ ನಡೆದ ಕೆಲವೊಂದು ಘಟನಾವಳಿಗಳೇ ಇದಕ್ಕೆ ಸಾಕ್ಷಿ.
ಡಿಸಿಯಾಗಿದ್ದವರನ್ನೇ ಅನುಮಾನಿಸಿದ ಚುನಾವಣಾ ಆಯೋಗ, 40 ವರ್ಷ ಮತ ಹಾಕಿದ ವ್ಯಕ್ತಿಗೆ ನೀವು ಯಾರು? ಎಂದು ಕೇಳುವ ಪರಿಸ್ಥಿತಿ .. SIR ನ ಒಂದೊಂದು ಕರಾಳ ಮುಖಗಳು ಬೆಳಕಿಗೆ ಬರುತ್ತಿದೆ. SIR ಅಂದರೆ ಕೇವಲ ದಾಖಲೆ ಕೊಟ್ಟು ಸರಿಪಡಿಸುವ ಪ್ರಕ್ರಿಯೆ ಎಂದು ಅಷ್ಟಕ್ಕೆ ಸೀಮಿತಗೊಳಿಸಿ ನೋಡುವುದು ತಪ್ಪು. ಇದು ಪ್ರಜಾಪ್ರಭುತ್ವದಲ್ಲಿ ಮತದಾರರನ್ನೇ ಅನುಮಾನಿಸಿ ನೋಡುವ ಪ್ರಕ್ರಿಯೆ ಕೂಡ ಹಾಗಿದೆ ಅಂದರೆ ತಪ್ಪಲ್ಲ.

ಕಳೆದ 35 ವರ್ಷಗಳಿಂದ ಸರಕಾರಿ ಸೇವೆಯಲ್ಲಿ ಕೆಲಸ ಮಾಡಿ ಜಿಲ್ಲಾಧಿಕಾರಿ ಆಗಿ ಜನಪರ ಕೆಲಸ ಮಾಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ ಇಬ್ರಾಹಿಂ ಅವರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿದೆ. 2002 ರ ಮತದಾರ ಪಟ್ಟಿಯಲ್ಲಿ ನಮೂದಾಗಿರುವ ಸಣ್ಣ ವ್ಯತ್ಯಾಸದ ಕಾರಣಕ್ಕೆ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆ ಚುನಾವಣಾ ಆಯೋಗಕ್ಕೆ ಅನುಮಾನ ಮೂಡಿದೆ. ನೋಟಿಸಿನಲ್ಲಿ ಸರಕಾರಿ ನೌಕರರಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ ಹಾಗೆಯೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ತಿದ್ದುಪಡಿಗೆ ಸಂಬಂಧಿಸಿ ತಪ್ಪು ಮಾಹಿತಿ, ಸುಳ್ಳು ಘೋಷಣೆ ನೀಡುವುದು ಜೈಲು ಶಿಕ್ಷೆ ಮತ್ತು ದಂಡ ಪಾವತಿಯ ಅಪರಾಧ ಅನ್ನುವ ರೀತಿಯ ಎಚ್ಚರಿಕೆ ನೀಡಿದೆ.

ಇದು ನಿವೃತ್ತ ಐಎಎಸ್ ಅಧಿಕಾರಿ ಎ.ಬಿ ಇಬ್ರಾಹಿಂ ಒಬ್ಬರ ಕಥೆಯಲ್ಲ. ಲಕ್ಷಾಂತರ ಮಂದಿ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಭಾರತೀಯ ಪ್ರಜೆಯಾಗಿ, ದೇಶಕ್ಕೆ ಹೆಮ್ಮೆ ತಂದ ಹಲವು ಮಹಾನ್ ಸಾಧಕರನ್ನು ಚುನಾವಣಾ ಆಯೋಗ SIR ಹೆಸರಿನಲ್ಲಿ ಅವಮಾನಿಸುವ ಪ್ರಕ್ರಿಯೆ ನಡೆಯುತ್ತಿದೆ. ಪದ್ಮಶ್ರೀ ಪುರಸ್ಕೃತ ಜಿಲ್ಲೆಯ ಹೆಮ್ಮೆಯ ಪುತ್ರ ಹರೇಕಳ ಹಾಜಬ್ಬರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ನಾಗರಿಕ ಸಮಾಜದಲ್ಲಿ ದೊಡ್ಡ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟಿಸ್ ಹಿಂಪಡೆದಿತ್ತು. ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೂ SIR ನೋಟಿಸ್ ಬಂದಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ಪಡೆದಿದ್ದ ಪ್ರೊ. ಸಿ.ಎನ್.ಆರ್. ರಾವ್ ಅವರು ದೇಶದ ಅತ್ಯಂತ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಪಂಚದಾದ್ಯಂತ 88ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಇಂತಹವರನ್ನು ಚುನಾವಣಾ ಆಯೋಗ ಅನುಮಾನದ ದೃಷ್ಟಿಯಿಂದ ನೋಡುವುದು ಎಷ್ಟರಮಟ್ಟಿಗೆ ಸರಿ. ಒಂದು ವೇಳೆ ಇವರ ದಾಖಲೆಯಲ್ಲಿ ಅನುಮಾನ ಇದ್ದಿದ್ದರೆ ಭಾರತ ರತ್ನ, ಪದ್ಮಶ್ರೀ ಅಂತಹ ಉನ್ನತ ಪ್ರಶಸ್ತಿ ನೀಡುವ ಅಗತ್ಯವಾದರೂ ಏನಿತ್ತು. ಇದು ಕೇವಲ ವ್ಯಕ್ತಿಗತವಾಗಿ ಅವರನ್ನು ಅನುಮಾನಿಸುವುದು ಅಲ್ಲ. ದೇಶದ ಹೆಮ್ಮೆಯ ಪ್ರಶಸ್ತಿಯನ್ನೇ ನಿಕೃಷ್ಟಗೊಳಿಸುವ ಪ್ರಕ್ರಿಯೆ ಅಲ್ಲವೇ.

ಈ ಮಧ್ಯೆ ಮತದಾರರ ಮನೆ ಮನೆಗೆ ತೆರಳಿ ಅವರ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸುವ ಜವಾಬ್ದಾರಿ ಹೊಂದಿರುವ ಬಿಎಲ್ ಒ (BLO) ಅವರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ. ಮೂಡಬಿದ್ರೆ ತಾಲೂಕಿನ ಬಿ ಎಲ್ ಒ ಅಲಂಗಾರು ನಿವಾಸಿ ವಿದ್ಯಾ ಎಂಬವರಿಗೆ ನೋಟಿಸ್ ನೀಡಲಾಗಿದೆ .
