ಮುಲ್ಕಿ: ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನದ ಕಳವು ಪ್ರಕರಣ: ಕುಖ್ಯಾತ ಅಂತರ ಜಿಲ್ಲಾ ಆರೋಪಿಗಳ ಬಂಧನ

ಕರಾವಳಿ

ಆರೋಪಿಗಳಿಂದ 17.20 ಲಕ್ಷ ರೂ. ಮೌಲ್ಯದ ಸ್ವತ್ತು ವಶ; ಉಳ್ಳಾಲ, ಪಡುಬಿದ್ರೆ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದಲ್ಲೂ ಭಾಗಿ

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ಒಡೆದು, ಗರ್ಭಗುಡಿಯಲ್ಲಿದ್ದ ಬೆಲೆಬಾಳುವ ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ದೈವದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಅ.ಕ್ರ 65/2026 ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗಾಗಿ ವಿಶೇಷ ಪೊಲೀಸರ ತಂಡವನ್ನು ರಚಿಸಿ, ಆರೋಪಿಗಳ ಬೆನ್ನಬಿದ್ದ ಪೊಲೀಸರು ದಿನಾಂಕ 06-09-2026 ರಂದು ಆರೋಪಿ ಜಾಹೀದ್ ಸಿನಾನ್ ಮತ್ತು ಯಾಸೀನ್ ಎಂಬಾತನ್ನು ಮುಲ್ಕಿ ಕಾರ್ನಾಡು ಎಂಬಲ್ಲಿ ಹಾಗೂ ದಿನಾಂಕ 07-09-2026 ರಂದು ಆರೋಪಿ ಮಹಮದ್ ಅಫ್ರಿದಿ ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್ ಎಂಬಾತನನ್ನು ದಾವಣಗೆರೆಯಲ್ಲಿ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೆಜಮಾಡಿಯ ಜಾಹೀದ್ ಸಿನಾನ್, ಕಾರ್ಕಳ ತಾಲೂಕಿನ ಯಾಸಿನ್, ದಾವಣಗೆರೆಯ ಗೋಕುಲ ನಗರದ ಮಹಮದ್ ಅಫ್ರಿದಿ, ಮತ್ತು ದಾವಣಕೆರೆಯ ಎಸ್.ಕೆ. ಅಬ್ದುಲ್ ಜುಮ್ಮಾನ್ ಈ ಕಳವು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಆರೋಪಿಗಳಿಂದ ಕಳವು ಮಾಡಲಾದ ಸುಮಾರು 4 ಕೆ.ಜಿ. 521 ಗ್ರಾಂ ತೂಕದ ಬೆಳ್ಳಿ ಹಾಗೂ 34.820 ಗ್ರಾಂ ತೂಕದ ಚಿನ್ನ, ಒಟ್ಟು ಅಂದಾಜು 11,20,000. ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಾರು ಸೇರಿದಂತೆ ಸುಮಾರು 6,00,000. ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಒಟ್ಟು 17,20,000. ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಆರೋಪಿ ಜಾಹೀದ್ ಸಿನಾನ್ ಎಂಬಾತನ ವಿರುದ್ಧ ಈ ಹಿಂದೆ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀ ಶೀಕಾಂತ್.ಕೆ ರವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಮುಲ್ಕಿ ಠಾಣಾ ಪಿ.ಎಸ್.ಐ ರಾಘವೇಂದ್ರ ನಾಯಕ್ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ, ಕಳವು ಮಾಡಲಾದ ಹಾಗೂ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.