ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ; ಪ್ರೀತಿಸುವ ನಾಟಕ, ಎಂಟು ಮಂದಿ ಕಾಮುಕರಿಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರ. ಆರೋಪಿಗಳ ಬಂಧನ

ರಾಷ್ಟ್ರೀಯ

ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನೆಪವೊಡ್ಡಿ 8 ಮಂದಿ ಕಾಮುಕರು ಅನೇಕ ಬಾರಿ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಅಲ್ವಾಲ್ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಸುಮಾರು ಎಂಟು ಮಂದಿ ಪುರುಷರು 16 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದಳು ಎಂದು ತಿಳಿದು ಬಂದಿದೆ.

ಮಚಾ ಬೊಲ್ಲಾರಮ್ ನಿವಾಸಿ ಮತ್ತು ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಬಾಲಕಿ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಜೆರ್ರಿ ವರುಣ್ ಎಂಬ ಯುವಕನ ಸಂಪರ್ಕಕ್ಕೆ ಬಂದಳು. ಕೆಲವು ತಿಂಗಳ ಹಿಂದೆ, ಆಕೆಗೆ ನಿದ್ರಾಜನಕ ಔಷಧವಿರುವ ಚಾಕೊಲೇಟ್ ನೀಡಿ, ತನ್ನ ಕಾರಿನೊಳಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಜೆರ್ರಿ ವರುಣ್ ಆಕೆಗೆ ಮತ್ತೊಬ್ಬ ಯುವಕ ರೋಮಲಾ ವರುಣ್ ಎಂಬಾತನನ್ನು ಪರಿಚಯಿಸಿದ್ದನು, ಈತ ಆಕೆಗೆ ಮದ್ಯ, ಸಿಗರೇಟ್ ಮತ್ತು ಗಾಂಜಾ ಪೂರೈಸಿದ್ದ ಮತ್ತು ಕೊಂಪಲ್ಲಿ ಪ್ರದೇಶದಲ್ಲಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹುಡುಗಿಯ ವರ್ತನೆಯ ಬಗ್ಗೆ ಅನುಮಾನಗೊಂಡ ಆಕೆಯ ತಂದೆ ಸೆಪ್ಟೆಂಬರ್ 8 ರಂದು ಆಕೆಯನ್ನು ಪ್ರಶ್ನಿಸಿದ್ದಾರೆ. ಮರುದಿನ ಆಕೆ ಮನೆಯಿಂದ ಹೊರಟು ಬೊಲ್ಲಾರಮ್ ರೈಲು ನಿಲ್ದಾಣ ತಲುಪಿದ್ದಾಳೆ. ‘ಅಲ್ಲಿ, ಅವಳು ನೀರಜ್ ಎಂಬ ವ್ಯಕ್ತಿಯನ್ನು ಭೇಟಿಯಾದಳು, ಅವನು ತನ್ನ ಸ್ನೇಹಿತ ವಿಕ್ಕಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾನೆ. ಬಳಿಕ ಇಬ್ಬರೂ ಅವಳಿಗೆ ನಶೆ ಬರಿಸುವ ವಸ್ತು ನೀಡಿ ಪ್ರತ್ಯೇಕವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿಕ್ಕಿ, ನಿಖಿಲ್ ಜೊತೆಯಾಗಿ ಆ ಹುಡುಗಿಯನ್ನು ದುಲಪಲ್ಲಿಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ, ಅಲ್ಲಿ ಇತರ ಇಬ್ಬರು ಪುರುಷರು ಅವರೊಂದಿಗೆ ಸೇರಿಕೊಂಡು OYO ಕೋಣೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಆಕೆಯನ್ನು ಬೊಲ್ಲಾರಮ್‌ನಲ್ಲಿರುವ ವಿಕ್ಕಿಯ ಮನೆಗೆ ಕರೆದೊಯ್ದು ಸೆಪ್ಟೆಂಬರ್ 9 ರ ರಾತ್ರಿ ಅಲ್ಲಿ ಬಂಧನದಲ್ಲಿರಿಸಲಾಗಿತ್ತು.

ಬಳಿಕ ಸಂತ್ರಸ್ತೆ ಆ ಮನೆಯಿಂದ ತಪ್ಪಿಸಿಕೊಂಡು ಮರುದಿನ ಬೊಲ್ಲಾರಮ್ ರೈಲು ನಿಲ್ದಾಣ ತಲುಪಿದಳು. ವಿಕ್ಕಿ ಮತ್ತು ಮತ್ತೊಬ್ಬ ಆರೋಪಿ ಗಣೇಶ್ ಆಕೆಯನ್ನು ತಡೆದು, ನಿದ್ರಾಜನಕ ಸೇವಿಸುವಂತೆ ಒತ್ತಾಯಿಸಿ ಮೆಡ್ಚಲ್ ರೈಲು ನಿಲ್ದಾಣಕ್ಕೆ ಕರೆದೊಯ್ದರು. ಅವರು ಆಕೆಯನ್ನು ಮಲ್ಕಾಜ್‌ಗಿರಿ ಕಡೆಗೆ ಹೋಗುವ ರೈಲಿಗೆ ಹತ್ತಿಸಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ, ಆರೋಪಿಗಳು ಆಕೆಯನ್ನು ಆಟೋರಿಕ್ಷಾದಲ್ಲಿ ಧೂಲ್‌ಪೇಟೆ ಕಡೆಗೆ ಕರೆದೊಯ್ಯುತ್ತಿದ್ದಾಗ, ಬಾಲಕಿ ಕೂಗಾಡಿದಳು. ಆಗ ಅವರು ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಮನೆಗೆ ಹಿಂತಿರುಗಿದ ಬಾಲಕಿ ತನ್ನ ಕುಟುಂಬದವರಿಗೆ ನಡೆದ ಘಟನೆಯನ್ನು ವಿವರಿಸಿದ್ದು, ನಂತರ ಪೊಲೀಸರಿಗೆ ದೂರು ನೀಡಲಾಗಿದೆ.

ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೆಪ್ಟೆಂಬರ್ 12 ರಂದು, ಜೆರ್ರಿ ವರುಣ್, ರೊಮಾಲಾ ವರುಣ್, ನೀರಜ್, ವಿಕ್ಕಿ, ನಿಖಿಲ್ ಮತ್ತು ಗಣೇಶ್ ಸೇರಿದಂತೆ ಎಂಟು ಜನರನ್ನು ವಶಕ್ಕೆ ಪಡೆಯಲಾಯಿತು. ಹಲ್ಲೆ ನಡೆದಿದ್ದ OYO ಸಂಸ್ಥೆಯ ಮಾಲೀಕರನ್ನೂ ಬಂಧಿಸಲಾಗಿದೆ.