ಬಂಟ್ವಾಳ: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು

ಕರಾವಳಿ

ಬಂಟ್ವಾಳದಲ್ಲಿ ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಕೋಕಾ ಕಾಯ್ದೆಯಡಿ ಬಂಧಿತರಾಗಿದ್ದ ಎಂಟು ಮಂದಿ ಆರೋಪಿಗಳಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ವಿಶೇಷ (ಕೋಕಾ) ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಬ್ದುಲ್ ರಹ್ಮಾನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ಬಂಧಿತರಾಗಿದ್ದ ಭರತ್ ಕುಮ್ಡೇಲ್ ಸೇರಿದಂತೆ ಎಂಟು ಮಂದಿ ಆರೋಪಿಗಳಿಗೆ ಜಾಮೀನು ನೀಡಲಾಗಿದೆ.

ಆರೋಪಿಗಳಾದ ಭರತ್ ಕುಮ್ಡೇಲು, ಪ್ರದೀಪ್, ರಂಜಿತ್, ಶಿವಪ್ರಸಾದ್, ಅಭಿನ್ ರೈ, ಸಾಹಿತ್, ಸಚಿನ್ ಹಾಗೂ ತೇಜಾಕ್ಷ ಇವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಾಂಗ ಬಂಧನದಲ್ಲಿದ್ದ ಒಂದರಿಂದ 13 ರವರೆಗಿನ ಆರೋಪಿಗಳನ್ನು ಮಂಗಳವಾರ ತಾಂತ್ರಿಕ ಸಮಸ್ಯೆಯ ಕಾರಣ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಜಾಮೀನಿನ ಮೇಲಿದ್ದ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ರಿಮಾಂಡ್ ಅವಧಿಯನ್ನು ಅಕ್ಟೋಬರ್ 15ರ ವರೆಗೆ ವಿಸ್ತರಿಸಿದೆ.

ಇದೇ ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದ ಆರೋಪಿಗಳ ಪರವಾಗಿ ವಕೀಲರು ವಕಾಲತ್ತು ಮತ್ತು ಹೈಕೋರ್ಟ್ ಆದೇಶ ಪ್ರತಿಗಳನ್ನು ಸಲ್ಲಿಸಿದ್ದು, ಅವರಿಗೆ ಅಕ್ಟೋಬರ್ 15ರೊಳಗೆ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಮರು ಜಾರಿ ಮಾಡಲು ನ್ಯಾಯಾಲಯ ಸೂಚಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ‘ಕಜೆ ಲಾ ಛೇಂಬರ್ಸ್’ ನ ಮಹೇಶ್ ಕಜೆ, ಸಿ.ವಿ ಕೇಶವ ಮೂರ್ತಿ, ಪ್ರಸಾದ್ ಕುಮಾರ್ ರೈ, ಹಾಗೂ ಪಿ.ಜೆ. ರಾಘವೇಂದ್ರ ವಾದಿಸಿದ್ದರು.