ಜನನ ಮತ್ತು ಮರಣಗಳ ನೋಂದಣಿಗೆ ಸಂಬಂಧಿಸಿದ ಅಕ್ಟೋಬರ್ 1, 2026ರಿಂದ ನಿಯಮಗಳು ಬದಲಾಗಲಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆ, 2026ರ ಎಲ್ಲಾ ನಿಬಂಧನೆಗಳು ಅಂದಿನಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 2026ರ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದು, ರಾಷ್ಟ್ರಪತಿಯ ಅಂಕಿತದ ಬಳಿಕ ಅದು ಕಾನೂನಾಗಿದೆ. ತಡವಾಗಿ ಜನನ ಅಥವಾ ಮರಣ ನೋಂದಣಿ ಮಾಡುವ ಸಂದರ್ಭಗಳಲ್ಲಿ ಇನ್ನು ಮುಂದೆ ಹೆಚ್ಚಿನ ಪರಿಶೀಲನೆ ಮತ್ತು ಅಧಿಕಾರಿಗಳ ಆದೇಶ ಅಗತ್ಯವಾಗಲಿದೆ.
ಜನನ ಅಥವಾ ಮರಣ ಸಂಭವಿಸಿ ಒಂದು ವರ್ಷ ಕಳೆದ ಬಳಿಕ, ಎರಡು ವರ್ಷ ಪೂರ್ಣಗೊಳ್ಳುವ ಮುನ್ನ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಸಂಬಂಧಪಟ್ಟ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಯಿಂದ ಅಧಿಕಾರ ಪಡೆದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಆದೇಶ ಅಗತ್ಯವಾಗುತ್ತದೆ. ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಿದ ಬಳಿಕ ಮತ್ತು ನಿಗದಿತ ಶುಲ್ಕ ಪಾವತಿಸಿದ ನಂತರ ನೋಂದಣಿಗೆ ಅನುಮತಿ ನೀಡಬಹುದು.
ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಕ್ಕಿಂತ ಹೆಚ್ಚು ಸಮಯದ ಬಳಿಕ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಇನ್ನು ಮುಂದೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆಯಬೇಕು. ಮ್ಯಾಜಿಸ್ಟ್ರೇಟ್ ಕೂಡ ಜನನ ಅಥವಾ ಮರಣಕ್ಕೆ ಸಂಬಂಧಿಸಿದ ಮಾಹಿತಿಯ ನಿಖರತೆಯನ್ನು ಪರಿಶೀಲಿಸಿದ ಬಳಿಕ, ನಿಗದಿತ ಶುಲ್ಕದೊಂದಿಗೆ ನೋಂದಣಿಗೆ ಆದೇಶ ನೀಡಬಹುದು.ಈ ಬದಲಾವಣೆಗಳನ್ನು 1969ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯ ಸೆಕ್ಷನ್ 13ಕ್ಕೆ ತಿದ್ದುಪಡಿ ಮಾಡುವ ಮೂಲಕ ತರಲಾಗಿದೆ. ಜನನ ಮತ್ತು ಮರಣ ಘಟನೆಗಳನ್ನು ಸಮಯಕ್ಕೆ ಸರಿಯಾಗಿ ನೋಂದಾಯಿಸುವಂತೆ ಉತ್ತೇಜಿಸುವುದು ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ.
ಜನನ ಮತ್ತು ಮರಣ ನೋಂದಣಿ ಕಾನೂನುಬದ್ಧವಾಗಿ ಕಡ್ಡಾಯವಾಗಿದ್ದು, ಈ ಪ್ರಕ್ರಿಯೆಯ ಮೂಲಕ ನೀಡಲಾಗುವ ಪ್ರಮಾಣಪತ್ರವು ಜನನ ಅಥವಾ ಮರಣವನ್ನು ದೃಢೀಕರಿಸುವ ಪ್ರಮುಖ ಕಾನೂನು ದಾಖಲೆಯಾಗಿದೆ.
