ಬಿಜೆಪಿಯ ಹಿಂದುತ್ವ V/s ಡಿಕೆಶಿಯ ಬಂಧುತ್ವ; ಹರಿಪ್ರಸಾದ್ ಸಿಟ್ಟಿನ ಮೂಲ, ಫೀಲ್ಡಿಗೆ ಇಳೀತಾರೆ ಸಿದ್ದು

ರಾಜ್ಯ

ಸಂಪುಟ ವಿಸ್ತರಣೆ ಸಧ್ಯಕ್ಕಿಲ್ಲ; ಅಸಮಾಧಾನವಾಗಿದ್ರೆ ಓಪನ್ನಾಗಿ ಹೇಳ್ರೀ. ಯಾಕೆ ಮುಚ್ಚಿಟ್ಟುಕೊಳ್ತೀರಿ.?

✍️. ಆರ್.ಟಿ.ವಿಠ್ಠಲಮೂರ್ತಿ

ಕಳೆದ ವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಬಂದಿದ್ದಾರೆ.ಹೀಗೆ ಬಂದ ಅವರ ಜತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಒನ್ ಟು ಒನ್ ಮಾತನಾಡಿದ್ದಾರೆ. ಅಂದ ಹಾಗೆ ರಾಜ್ಯ ಬಿಜೆಪಿಯ ವಿಷಯದಲ್ಲಿ ಸ್ವಲ್ಪ ಕಿರಿ ಕಿರಿ ಮಾಡಿಕೊಂಡಿದ್ದರೂ ವಿಜಯೇಂದ್ರ ಅವರು ತಮ್ನನ್ನು ಭೇಟಿ ಮಾಡಿದಾಗ ಅಮಿತ್ ಶಾ ಖುಷಿಯಾಗಿಯೇ ಮಾತನಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬಳ್ಳಾರಿ ಚಲೋ ಯಾತ್ರೆಯ ಬಗ್ಗೆ ಅವರಿಗೆ ತಲುಪಿದ್ದ ಫೀಡ್ ಬ್ಯಾಕೇ ಮುಖ್ಯ ಕಾರಣ. ಬಹುತೇಕ ನಾಯಕರು ಕೈ ಕೊಟ್ಟರೂ ವಿಜಯೇಂದ್ರ ಪಟ್ಟು ಬಿಡದೆ ಯಾತ್ರೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ ಅಂತ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಂತಹ ನಾಯಕರು ಅಮಿತ್ ಶಾ ಅವರಿಗೆ ಫೀಡ್ ಬ್ಯಾಕು ಕೊಟ್ಟಿದ್ದಾರೆ.
ಹೀಗಾಗಿಯೇ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಈ ಯಾತ್ರೆಯ ಬಗ್ಗೆ ವಿಜಯೇಂದ್ರ ಅವರು ವಿವರ ಕೊಟ್ಟಾಗ: ‘ತುಂಬ ಸಂತೋಷ ಅಧ್ಯಕ್ಷರೇ, ಪಕ್ಷ ಸಂಘಟನೆಯ ವಿಷಯದಲ್ಲಿ ನೀವು ತೋರಿಸುತ್ತಿರುವ ಆಸಕ್ತಿ ನಮಗೆ ಸಮಾಧಾನ ತಂದಿದೆ. ಇಂತಹ ಹೋರಾಟಗಳನ್ನು ಹೆಚ್ಚು ಮಾಡಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ನಾವು ಸಂಪೂರ್ಣ ಸಜ್ಜಾಗಿರಬೇಕು ಅಂತ ಅಮಿತ್ ಶಾ ಹೇಳಿದ್ದಾರೆ.

ಅವರ ಮಾತಿನಿಂದ ಖುಷಿಯಾದ ವಿಜಯೇಂದ್ರ: ‘ಸಾರ್, ನಿಮ್ಮ ಮಾರ್ಗದರ್ಶನ ನಮಗೆ ಶಕ್ತಿ. ನಿಮ್ಮ ಸೂಚನೆಯಂತೆ ಕೆಲಸ ಮಾಡುತ್ತೇನೆ’ ಎಂದರಂತೆ. ಯಾವಾಗ ಅವರು ಈ ಮಾತು ಹೇಳಿದರೋ? ಆಗ ಅಮಿತ್ ಶಾ ಅವರು: ‘ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ನಿಮ್ಮ ತಂದೆ ಯಡಿಯೂರಪ್ಪನವರು ಎಷ್ಟು ಶ್ರಮಿಸಿದರು ಅನ್ನುವುದು ಎಲ್ಲರಿಗೂ ಗೊತ್ತು. ನೀವು ಕೂಡಾ ಅದೇ ರೀತಿ ಕೆಲಸ ಮಾಡಿ. ರಾಜ್ಯಾಧ್ಯಕ್ಷರಾಗಿ ನೀವು ಮುಂದುವರಿಯಬೇಕು ಅನ್ನುವುದು ನಮ್ಮ ಅಪೇಕ್ಷೆ’ ಎಂದು ನೇರವಾಗಿ ಹೇಳಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ? ಇದಾದ ನಂತರ ವಿಜಯೇಂದ್ರ ಪುಲ್ಲು ಖುಷಿಯಾಗಿ ವಾಪಸ್ಸಾಗಿದ್ದಾರೆ.

ಅಂದ ಹಾಗೆ ವಿಜಯೇಂದ್ರ ಅವರ ವಿರೋಧಿ ಬಣ ಇತ್ತೀಚೆಗೆ ಹೊಸ ಅಜೆಂಡಾದೊಂದಿಗೆ ಕೆಲಸ ಮಾಡುತ್ತಿತ್ತು. ಅದರ ಪ್ರಕಾರ: ‘ವಿಜಯೇಂದ್ರ ಪಕ್ಷಾಧ್ಯಕ್ಷರಾಗಿದ್ದಷ್ಟು ದಿನ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಒಂದು ಸವಾಲೇ ಅಲ್ಲ. ಯಾಕೆಂದರೆ ಡಿ.ಕೆ.ಶಿವಕುಮಾರ್ ಅವರನ್ನು ನೈತಿಕ ನೆಲೆಯಲ್ಲಿ ಕಟ್ಟಿ ಹಾಕಲು ವಿಜಯೇಂದ್ರ ಅವರಿಗೆ ಸಾಧ್ಯವಿಲ್ಲ. ಹೀಗಾಗಿ ನೈತಿಕ ನೆಲೆಗಟ್ಟಿನಲ್ಲಿ ಬಲಿಷ್ಟರಾದ ನಾಯಕರು ರಾಜ್ಯ ಬಿಜೆಪಿಯ ಅಧ್ಯಕ್ಷರಾಗಬೇಕು. ಇಲ್ಲದಿದ್ದರೆ ಡಿ.ಕೆ.ಶಿವಕುಮಾರ್ ಸೇಫ್’ ಎಂಬುದು ಈ ಅಜೆಂಡಾ. ಆದರೆ ವಿರೋಧಿಗಳ ಈ ಅಜೆಂಡಾ ಚಾಲ್ತಿಯಲ್ಲಿರುವಾಗಲೇ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದು ತಮ್ಮ ಖುರ್ಚಿಯ ಕಾಲಿಗೆ ಫೆವಿಕಾಲ್ ಹಚ್ಚಿ ಹೋಗಿರುವುದು ವಿಜಯೇಂದ್ರ ಅವರಿಗೆ ಸಮಾಧಾನ ತಂದಿದೆ

ಬಿಜೆಪಿಯ ಹಿಂದುತ್ವ ಡಿಕೆಶಿಯ ಬಂಧುತ್ವ
ಈ ಮಧ್ಯೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಡುತ್ತಿರುವ ಹೆಜ್ಜೆ ಕರ್ನಾಟಕದ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರಿಗೆ ಒಂದು ಸವಾಲಿನಂತೆ ಕಾಣುತ್ತಿದೆ. ಯಾಕೆಂದರೆ ಹಿಂದುತ್ವದ ಪ್ರಯೋಗ ಶಾಲೆ ಅನ್ನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಗೆ ಮೊನ್ನೆ ತಮ್ಮ ಬ್ರಿಗೇಡಿನೊಂದಿಗೆ ನುಗ್ಗಿದ ಡಿಕೆಶಿ, ಹಿಂದುತ್ವದ ಲ್ಯಾಬಿನಲ್ಲಿದ್ದ ಪರಿಕರಗಳು ಮತ್ತು ಕೆಮಿಕಲ್ ಬಾಟಲುಗಳಿಗೆ ರಪ್ಪಂತ ದೊಣ್ಣೆಯಿಂದ ಬಡಿದಿದ್ದಾರೆ. ಅರ್ಥಾತ್, ಹಲವು ದಶಕಗಳಿಂದ ಆ ಭಾಗದ ಜನರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ತುಳು ಭಾಷೆಗೆ ರಾಜ್ಯ ಬಾಷೆಯ ಸ್ಥಾನಮಾನ ಕೊಡುವ ಬಗ್ಗೆಯೇ ಇರಬಹುದು ಮತ್ತು ಕರಾವಳಿ ಜಿಲ್ಲೆಗಳನ್ನು ಪ್ರವಾಸೋದ್ಯಮದ ಹಬ್ ಮಾಡುವುದೇ ಇರಬಹುದು. ಒಟ್ಟಿನಲ್ಲಿ ತಮ್ಮ ಜಿಲ್ಲೆಗೆ ಬಂದು ತಮಗೆ ಶಕ್ತಿ ತುಂಬುವ ಬಗ್ಗೆ ಡಿಕೆಶಿ ಮಾತನಾಡಿದ ನಂತರ ಬಿಜೆಪಿ ಪರವಾಗಿರುವ ಸಂಘಟನೆಗಳ ಕಾರ್ಯಕರ್ತರು ಡಿಕೆ ಕೆಲಸವನ್ನು ಪ್ರಶಂಸಿಸಿ, ಬಿಜೆಪಿ ನಾಯಕರ ವಿರುದ್ಧವೇ ಗುಡುಗುತ್ತಿದ್ದಾರೆ.

‘ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ಅವರ ತನಕ ಪಕ್ಷದ ನಾಲ್ಕು ಮಂದಿ ಮುಖ್ಯಮಂತ್ರಿಗಳಾದರು. ನಮ್ಮ ಜಿಲ್ಲೆಯ ಸಂಸದರಾಗಿದ್ದ ನಳೀನ್ ಕುಮಾರ್ ಕಟೀಲ್ ಅವರು ನಾಲ್ಕು ವರ್ಷಗಳ ಕಾಲ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಆದರೆ ಇವರೆಲ್ಲ ಇದ್ದು ಮೆರೆದಾಡುದರೂ ತುಳು ಭಾಷೆಗೆ ಎರಡನೇ ರಾಜ್ಯಭಾಷೆಯ ಸ್ಥಾನಮಾನ ಕೊಡಿಸಲು ಮನಸ್ಸು ಮಾಡಲಿಲ್ಲ. ಅಭಿವೃದ್ದಿಯ ವಿಷಯದಲ್ಲಿ ಡಿಕೆ ತೋರಿಸಿದ ಕನ್ ಸರ್ನು ತೋರಿಸಲಿಲ್ಲ’ ಅಂತ ಈ ಕಾರ್ಯಕರ್ತರು ಮಾಡುತ್ತಿರುವ ಟೀಕೆ ಸಹಜವಾಗಿಯೇ ಪಕ್ಷ ಮತ್ತು ಪರಿವಾರದ ನಾಯಕರ ಚಿಂತೆಗೆ ಕಾರಣವಾಗಿದೆ. ಅಷ್ಟೇ ಅಲ್ಲ. ಹಿಂದುತ್ವದ ಪ್ರಯೋಗ ಶಾಲೆಗೆ ನುಗ್ಗಿ ಡಿಕೆ ಮಾಡಿದ ಹಾವಳಿಯಿಂದ ನಾಲ್ಕೈದು ಪರ್ಸೆಂಟ್ ಮತ ಪಲ್ಲಟವಾಗಬಹುದು ಅಂತ ಚಿಂತಿಸುವಂತೆ ಮಾಡಿದೆ.

ಇನ್ನು ಕಸ್ತೂರಿ ರಂಗನ್ ವರದಿಯ ಬಗ್ಗೆ ಅತಂಕದಲ್ಲಿರುವ ಮಲೆನಾಡಿಗೆ ನುಗ್ಗಿ ಅವರಲ್ಲಿ ಸಣ್ಣ ನೆಮ್ಮದಿ ಮೂಡಿಸಿರುವ ಡಿಕೆ, ಹಿಂದುತ್ವದ ಎರಡನೇ ಪ್ರಯೋಗ ಶಾಲೆ ಅನ್ನಿಸಿಕೊಂಡ ಕೊಡಗು ಜಿಲ್ಲೆಗೆ ಇದೇ ರೀತಿ ನುಗ್ಗಿದರೆ, ಹಿಂದುತ್ವದ ಪರಿಕಲ್ಪನೆಗೆ ಬಂಧುತ್ವದ ಬಣ್ಣ ಬಳಿದರೆ ಏನಾಗಬಹುದು? ಎಂಬುದು ಬಿಜೆಪಿ ಮತ್ತು ಪರಿವಾರದ ಮತ್ತೊಂದು ಚಿಂತೆ.

ಹರಿಪ್ರಸಾದ್ ಸಿಟ್ಟಿನ ಮೂಲ
ಇನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಂಡದಂತ ಕೋಪ ಬಂದಿದೆ. ಇದಕ್ಕೆ ಸಿಎಂ ಡಿಕೆಶಿ ತೋರುತ್ತಿರುವ ಅನಾದರ ಮತ್ತು ಅಸಹಕಾರವೇ ಮುಖ್ಯ ಕಾರಣ. ಅಂದ ಹಾಗೆ ತಾವು ಅಧ್ಯಕ್ಷರಾದ ನಂತರ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಿರುವ ಬಿ.ಕೆ.ಹರಿಪ್ರಸಾದ್: ‘ರಾಜ್ಯದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಬದಲಿಸಬೇಕು ಅಂತ ಬಹಿರಂಗವಾಗಿಯೇ ಹೇಳಿದ್ದರು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡಾ ಇದಕ್ಕೆ ಸಹಮತ ವ್ತಕ್ತಪಡಿಸಿದ್ದರು. ಅದರೆ ಇದಾಗಿ ನೂರು ದಿನ ಕಳೆದರೂ ಈ ಹಿಂದೆ ನೇಮಕಗೊಂಡಿದ್ದವರು ರಾಜೀನಾಮೆ ಕೊಟ್ಟಿಲ್ಲ. ಡಿಕೆಶಿ ಕೇಳುತ್ತಿಲ್ಲ. ಇದು ಹರಿಪ್ರಸಾದ್ ಅವರ ಸಿಟ್ಟಿಗೆ ಮೊದಲ ಕಾರಣ. ತಾವು ಕೆಪಿಸಿಸಿ ಅಧ್ಯಕ್ಷರಾದಾಗ ಪಟ್ಟು ಹಿಡಿದು ನಿಗಮ-ಮಂಡಳಿಗಳಿಗೆ ಬೆಂಬಲಿಗರ ಪಡೆಯನ್ನೇ ತಂದು ಕೂರಿಸಿದ್ದ ಡಿಕೆಶಿ, ಈಗ ಹೊಸಬರಿಗೆ ಅವಕಾಶ ಕೊಡಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂಬುದು ಹರಿಪ್ರಸಾದ್ ಅವರ ಕೋಪ.

ಇದೇ ರೀತಿ ಬಿಡಿಎ ಸೇರಿದಂತೆ ಹಲವು ನಿಗಮ-ಮಂಡಳಿಗಳಲ್ಲಿ ಡಿಕೆ ಕೃಪೆಯಿಂದ ಒಂದೇ ಸಮುದಾಯದ ಜನ ದಂಡು-ದಂಡಾಗಿ ಕುಳಿತಿದ್ದಾರೆ. ಹೀಗಾದರೆ ಅಹಿಂದ ವರ್ಗಗಳಿಗೆ ನಾವು ಕೊಡುವ ಪ್ರಾತಿನಿಧ್ಯವೇನು? ಎಂಬುದು ಹರಿಪ್ರಸಾದ್ ಅವರ ಆಮಾಧಾನ. ಈ ಮಧ್ಯೆ ಪಕ್ಷ ಸಂಘಟನೆಗೆ ಸರ್ಕಾರದ ಕಡೆಯಿಂದ ಹರಿದು ಬರುವ ಸಂಪನ್ಮೂಲದ ಪೈಪ್ ಲೈನು ಕಟ್ ಆಗಿರುವುದು ಹರಿಪ್ರಸಾದ್ ಅವರ ಅಸಮಾಧಾನಕ್ಕೆ ಮತ್ತೊಂದು ಕಾರಣ. ಅಂದ ಹಾಗೆ ಸಿದ್ದರಾಮಯ್ಯ ಅವರು ಸಿಎಂ ಅಗಿದ್ದ ಕಾಲದಲ್ಲಿ ಸರ್ಕಾರದ ಪೈಪ್ ಲೈನಿಗೆ ಬರುತ್ತಿದ್ದ ಎಂಟು ಪರ್ಸೆಂಟು ನೀರಿನಲ್ಲಿ ಬಹುತೇಕ ಭಾಗ ಕೆಪಿಸಿಸಿಗೆ ಹೋಗುತ್ತಿತ್ತು.

ಆದರೆ ಈಗ ಸರ್ಕಾರಕ್ಕೆ ಹೋಗುವ ಎಂಟು ಪರ್ಸೆಂಟು ನೀರಿನಲ್ಲಿ ಸ್ವಲ್ಪವೂ ಕೆಪಿಸಿಸಿಯ ಪೈಪ್ ಲೈನಿಗೆ ಬರುತ್ತಿಲ್ಲ. ಇದಕ್ಕೆ ಸರ್ಕಾರದ ಪೈಪ್ ಲೈನಿಗೆ ಬರುವ ನೀರು ಸೆಂಟ್ರಲೈಸ್ಡ್ ಆಗಿರುವುದೇ ಮುಖ್ಯ ಕಾರಣ ಎಂಬುದು ಹರಿಪ್ರಸಾದ್ ಸಿಟ್ಟು. ಹಾಗೆ ನೋಡಿದರೆ ತಾವು ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದ ಖರ್ಚು-ವೆಚ್ಚಗಳನ್ನು ತಮ್ಮದೇ ಮೂಲಗಳಿಂದ ಭರಿಸಿದ್ದ ಹರಿಪ್ರಸಾದ್, ಈ ವಿಷಯದಲ್ಲಿ ಸರ್ಕಾರದ ಪೈಪ್ ಲೈನಿನ‌ ಕಡೆ ತಿರುಗಿಯೂ ನೋಡಿರಲಿಲ್ಲವಂತೆ. ‘ಜೀಸಿ’ ವಾಲ್ವು ಓಪನ್ ಮಾಡಿದರೆ ನೀರು ಹರಿಯುತ್ತದೆ ಅಂತ ಆಫರು ಬಂದರೂ: ‘ಇದು ನನ್ನ ಕಾರ್ಯಕ್ರಮ. ಇದಕ್ಕೆ ‘ಜೀಸಿ’ ವಾಲ್ವು ಓಪನ್ ಮಾಡುವ ಅಗತ್ಯವಿಲ್ಲ ಅಂತ ಹರಿಪ್ರಸಾದ್ ಖಡಕ್ಕಾಗಿ ಹೇಳಿದ್ದರಂತೆ.
ಆದರೆ ಪಕ್ಷ ಕಟ್ಟುವ ಕಾರ್ಯ ತಮಗೊಬ್ಬರಿಗಷ್ಟೇ ಸಂಬಂಧಿಸಿದ್ದಲ್ಲವಲ್ಲ? ಹೀಗಾಗಿ ಈ ವಿಷಯದಲ್ಲಿ ಸರ್ಕಾರದ ಪೈಪ್ ಲೈನು ಕೆಪಿಸಿಸಿ ಪೈಪ್ ಲೈನಿಗೆ ಲಿಂಕ್ ಆಗಬೇಕು ಎಂಬುದು ಹರಿಪ್ರಸಾದ್ ನಿರೀಕ್ಷೆ.

ಇದನ್ನು ಹೊರತುಪಡಿಸಿದರೆ ಅವರ ಸಿಟ್ಟಿರುವುದು ಶಿಷ್ಟಾಚಾರದ ಬಗ್ಗೆ ಸರ್ಕಾರಕ್ಕೆ ನೂರು ದಿನ ಭರ್ತಿಯಾದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮಕ್ಕೆ ಡಿಕೆಶಿ ನೇರವಾಗಿ ತಮಗೆ ಆಹ್ವಾನ ನೀಡಲಿಲ್ಲ. ನಾಳೆ ಅವರನ್ನು ಬಿಟ್ಟು ತಾವು ಕೆಪಿಸಿಸಿ ಕಾರ್ಯಕ್ರಮ ನಡೆಸಿದರೆ ಏನು ಮೆಸೇಜು ಹೋಗುತ್ತದೆ? ಎಂಬುದು ಹರಿಪ್ರಸಾದ್ ವಾದ. ಇದನ್ನೇ ಅವರು ವರಿಷ್ಟರ ಗಮನಕ್ಕೆ ತಂದಾಗ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಬೆಂಗಳೂರಿಗೆ ಬಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಆದರೆ ಇದು ಎಷ್ಟು ದಿನ ಬಾಳಿಕೆ ಬರುತ್ತದೋ ಗೊತ್ತಿಲ್ಲ.

ಫೀಲ್ಡಿಗೆ ಇಳೀತಾರೆ ಸಿದ್ದು
ಈ ಮಧ್ಯೆ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಮಾತುಗಳನ್ನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ರಾಹುಲ್ ಗಾಂಧಿ ಅವರ ಮನವಿಯಿಂದ ಹಿಡಿದು ರಾಜ್ಯದ ವಿವಿಧ ಭಾಗಗಳಿಂದ ಕೇಳಿ ಬರುತ್ತಿರುವ ಆಗ್ರಹವೂ ಮುಖ್ಯ ಕಾರಣ.

ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ, ಅಲ್ಲಿಗೆ ಬರುವ ಸ್ಥಳೀಯ ನಾಯಕರು, ಕಾರ್ಯಕರ್ತರು ನೇರವಾಗಿಯೇ ಸಿದ್ದರಾಮಯ್ಯ ಅವರ ಬಳಿ ತಮ್ಮ ನೋವು ಹೇಳಿಕೊಳ್ಲುತ್ತಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಮಾತನಾಡಿ ನಮ್ಮನ್ನೇಕೆ ಅನಾಥರನ್ನಾಗಿ ಮಾಡುತ್ತೀರಿ? ಅಂತ ಪ್ರಶ್ನಿಸುತ್ತಿದ್ದಾರೆ.
ಇದೇ ರೀತಿ ಮೊನ್ನೆ ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಇಂತಹ ಪ್ರಶ್ನೆಗಳು ಎದುರಾದಾಗ: ‘ಆಯ್ತು ಬಿಡ್ರಿ, ನೋಡೋಣ’ ಅಂತ ಸಿದ್ದರಾಮಯ್ಯ ಮುಗುಮ್ಮಾಗಿ ಹೇಳಿದ್ದಾರೆ. ಅವರು ಈ ಮಾತನಾಡಿದ್ದೇ ತಡ. ಗರ ಬಡಿದಂತೆ ಮೌನವಾಗಿದ್ದ ಸಿದ್ದು ಕ್ಯಾಂಪಿನಲ್ಲಿ ಲವಲವಿಕೆ ಕಾಣಿಸಿಕೊಂಡಿದೆ.

ಸಂಪುಟ ವಿಸ್ತರಣೆ ಸಧ್ಯಕ್ಕಿಲ್ಲ
ಇನ್ನು ಡಿಕೆ ಸಂಪುಟಕ್ಕೆ ಮೈನರ್ ಸರ್ಜರಿ ಮಾಡುವ ನಿರ್ಧಾರದಿಂದ ಕಾಂಗ್ರೆಸ್ ವರಿಷ್ಟರು ಹಿಂದೆ ಸರಿದಿದ್ದಾರೆ. ಇದಕ್ಕೆ ಡಿಕೆ, ಸಿದ್ದು,ಖರ್ಗೆ ನಡುವಣ ಪೈಪೋಟಿಯೇ ಕಾರಣ. ಮೂಲಗಳ ಪ್ರಕಾರ: ಮೈನರ್ ಸರ್ಜರಿಯ ಮೂಲಕ ಯಾರು ಸಂಪುಟಕ್ಕೆ ಸೇರಬೇಕು ಎಂಬ ವಿಷಯದಲ್ಲಿ ಈ ಮೂವರು ನಾಯಕರ ಅಭಿಪ್ರಾಯ ತಾಳೆ ಅಗುತ್ತಿಲ್ಲ.

ಉದಾಹರಣೆಗೆ ಸಿದ್ದರಾಮಯ್ಯ ಅವರನ್ನು ತೆಗೆದುಕೊಂಡರೆ; ‘ಸಂಪುಟಕ್ಕೆ ಬಸವರಾಜ ಶಿವಣ್ಣನವರ್ ಮತ್ತು ಅನ್ನಪೂರ್ಣ ತುಕಾರಾಂ ಸೇರಬೇಕು. ಜಮೀರ್ ಅಹ್ಮದ್ ಖಾನ್ ಮಂತ್ರಿ ಮಂಡಲದಲ್ಲಿರಬಾರದು’ ಎನ್ನುತ್ತಿದ್ದಾರೆ.

ಇನ್ನು ಖರ್ಗೆಯವರು: ‘ಸಂಪುಟಕ್ಕೆ ಕನೀಜ್ ಪಾತಿಮಾ ಬರಕಿ ಎಂದರೆ ಡಿಕೆ ಮಾತ್ರ: ‘ಲಕ್ಷ್ಮಿ ಹೆಬ್ಬಾಳ್ಕರ್ ಬರಲಿ’ ಎನ್ನುತ್ತಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯದಲ್ಲಿರುವುದು ವರಿಷ್ಟರ ತಲೆನೋವಿಗೆ ಕಾರಣ. ಹೀಗಾಗಿಯೇ ಮೈನರ್ ಸರ್ಜರಿ ಸಧ್ಯಕ್ಕೆ ಬೇಡ ಎಂದು ನೇರವಾಗಿ ಹೇಳಿದ್ದಾರೆ.

ಲಾಸ್ಟ್ ಸಿಪ್
ಡಿಕೆ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಮ್ಮ ಕೆಲಸವಾಗುತ್ತಿಲ್ಲ. ನಮಗೆ ಪ್ರಾಮಿನೆನ್ಸು ಸಿಗುತ್ತಿಲ್ಲ ಅಂತ ತಮ್ಮ ಬಳಿ ದೂರು ತರುತ್ತಿರುವ ಶಾಸಕರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಪ್ಪಿಯೂ ಸಮಾಧಾನ ಹೇಳುತ್ತಿಲ್ಲವಂತೆ. ಬದಲಿಗೆ: ‘ನನ್ನ ಬಳಿ ಹೇಳಿದ್ರೆ ಏನ್ರೀ ಪ್ರಯೋಜನ? ನಿಮಗೆ ಅಸಮಾಧಾನವಾಗಿದ್ರೆ ಓಪನ್ನಾಗಿ ಹೇಳ್ರೀ. ಯಾಕೆ ಮುಚ್ಚಿಟ್ಟುಕೊಳ್ತೀರಿ?ಎನ್ನುತ್ತಿದ್ದಾರಂತೆ.