ಪಡಿತರ ಕೆವೈಸಿ: ಆಧಾರ್ ಅಪ್ಡೇಟ್ ಗಾಗಿ ಆಧಾರ್ ಕೇಂದ್ರಗಳಲ್ಲಿ ನೂಕುನುಗ್ಗಲು. ಬೆಳ್ಳಂಬೆಳಿಗ್ಗೆ 6:00 ರಿಂದಲೇ ಸರತಿಸಾಲು.

ಕರಾವಳಿ

ಪಡಿತರ ಚೀಟಿಯ ಕೆವೈಸಿಗಾಗಿ ಅಕ್ಟೋಬರ್ 20 ಕೊನೆಯ ದಿನವಾಗಿದ್ದು, ಪಡಿತರ ಅಂಗಡಿಗಳಲ್ಲಿ ದಿನದಿಂದ ದಿನಕ್ಕೆ ಸರತಿ ಸಾಲು ಹೆಚ್ಚುತ್ತಿದೆ. ಮತ್ತೊಂದೆಡೆ ಪಡಿತರ ಕೆವೈಸಿಗಾಗಿ ಹಲವರ ಆಧಾರ್ ಅಪ್ಡೇಟ್ ಮಾಡಬೇಕಾಗಿರುವ ಕಾರಣ ಬೆರಳೆಣಿಕೆಯ ಆಧಾರ್ ಕೇಂದ್ರಗಳಲ್ಲಿ ನೂಕುನುಗ್ಗಲು ಹೆಚ್ಚಾಗಿದೆ. ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಕೆವೈಸಿಗಾಗಿ ಜನರು ತಮ್ಮ ಮನೆಗಳಿಗೆ ಬೀಗ ಹಾಕಿ ಕುಟುಂಬದ ಸದಸ್ಯರ ಜೊತೆಗೆ ಪಡಿತರ ಅಂಗಡಿಗಳಲ್ಲಿ ಸೇರುತ್ತಿದ್ದಾರೆ. ಪಡಿತರ ಅಂಗಡಿಗಳಲ್ಲಿ ದಿನಕ್ಕೆ 30 ರಿಂದ 40 ಕುಟುಂಬಗಳ ಕೆವೈಸಿ ನಡೆಸಲಾಗುತ್ತಿದೆ. ಅಂಗಡಿಗಳ ಮುಂದೆ ದಿನನಿತ್ಯ 150 ರಿಂದ 200 ಜನರು ಕೆವೈಸಿಗಾಗಿ ಬರುತ್ತಾರೆ. ಬೆಳಗ್ಗೆಯಿಂದ ಸಂಜೆ ತನಕವೂ ಬಿಸಿಲು, ಮಳೆಯನ್ನು ಲೆಕ್ಕಿಸದೆ ಕೆವೈಸಿ ಮಾಡಬೇಕಾದ ಅನಿವಾರ್ಯತೆಯಿದೆ.

ಆಧಾರ್ ಅಪ್ಡೇಟ್, ಸರ್ವರ್ ಇಲ್ಲದೆ ಕೆವೈಸಿಯೂ ಇಲ್ಲ.
ಪಡಿತರ ಚೀಟಿ ಕೆವೈಸಿಗಾಗಿ ಕುಟುಂಬ ಸಮೇತರಾಗಿ ಪಡಿತರ ಅಂಗಡಿಗಳಿಗೆ ಬಂದರೂ ಕೆಲವು ಸದಸ್ಯರ ಆಧಾರ್ ಕಾರ್ಡ್ ಅಪ್ಡೇಟ್ ಸಮಸ್ಯೆಯಿಂದ ಕೆವೈಸಿ ಮಾಡಲಾಗುತ್ತಿಲ್ಲ. ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದ ಬೆಳಗ್ಗೆಯಿಂದ ಅನ್ನ ನೀರು ಇಲ್ಲದೆ ಸಂಜೆ ತನಕವೂ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಇನ್ನೂ ಸಮಸ್ಯೆ ಹೆಚ್ಚಾಗಿದ್ದು, ಕೆವೈಸಿ ಮಾಡಿಸಿಕೊಳ್ಳಲು ಸರ್ಕಾರ ಗಡುವು ವಿಧಿಸಿರುವ ಕಾರಣ ಪಡಿತರ ಅಂಗಡಿಗಳಲ್ಲಿ ಒತ್ತಡ ಹೆಚ್ಚಾಗಿದೆ‌. ಕೆವೈಸಿಯಿಂದ ಪಡಿತರ ಅಂಗಡಿಗಳಲ್ಲಿ ಅಕ್ಕಿ ವಿತರಣೆಗೂ ಸಮಸ್ಯೆ ಉಂಟಾಗಿದೆ‌.

ಆಧಾರ್ ಕೇಂದ್ರಗಳಲ್ಲೂ ನೂಕುನುಗ್ಗಲು:
ಪಡಿತರ ಕೆವೈಸಿಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಅನಿವಾರ್ಯವಾದ ಕಾರಣ ತಾಲೂಕಿನ ಬೆರಳೆಣಿಕೆಯ ಆಧಾರ್ ಕೇಂದ್ರಗಳಲ್ಲಿ ಬೆಳಗ್ಗೆ 6 ಘಂಟೆಗೆ ಸರತಿ ಸಾಲಿನಲ್ಲಿ ನಿಂತು ಕೂಪನ್ ಪಡೆಯಬೇಕಾಗಿದೆ. ಕೆಲವರು ವಾರಗಟ್ಟಲೆ ಆಧಾರ್ ಕಾರ್ಡ್ ಅಪ್ಡೇಟ್ ಗಾಗಿ ಆಧಾರ್ ಕಾರ್ಡ್ ಕೇಂದ್ರಗಳಿಗೆ ಅಲೆದಾಡಿ ಅಪ್ಡೇಟ್ ಮಾಡಿಸಿಕೊಂಡಿದ್ದಾರೆ‌. ಒಂದು ಆಧಾರ್ ಕೇಂದ್ರದಲ್ಲಿ ದಿನಕ್ಕೆ 20 ರಿಂದ 25 ಜನರ ಆಧಾರ್ ಕಾರ್ಡ್ ಮಾತ್ರ ಅಪ್ಡೇಟ್ ಮಾಡಲಾಗುತ್ತಿದೆ. ಇದರಿಂದಾಗಿ ಬೆಳಗ್ಗೆ 6 ಘಂಟೆಗೆ ಸಣ್ಣಪುಟ್ಟ ಮಕ್ಕಳೊಂದಿಗೆ, ವೃದ್ಧರೊಂದಿಗೆ ವಾಹನ ಬಾಡಿಗೆ ಮಾಡಿಕೊಂಡು ಬಂದು ಕಾಯಬೇಕಾಗಿದೆ. ಕೆಲವರು ಬಂದು ಕೂಪನ್ ಸಿಗದೆ ವಾಪಸ್ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.

ಬೆರಳೆಣಿಕೆ ಆಧಾರ್ ಕೇಂದ್ರ: ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಆಧಾರ್ ಕೇಂದ್ರಗಳು ಕಾರ್ಯಚರಿಸುತ್ತಿದೆ. ಬ್ಯಾಂಕ್ ಆಫ್ ಬರೋಡ ಬೆಳ್ತಂಗಡಿ ಶಾಖೆಯಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲಾಗುತ್ತಿದೆ. ಇನ್ನುಳಿದಂತೆ ಬೆಳ್ತಂಗಡಿ ಅಂಚೆ ಕಚೇರಿ ಸೇರಿದಂತೆ ಗುರುವಾಯನಕೆರೆ, ವೇಣೂರು, ಕೊಯ್ಯೂರು, ಧರ್ಮಸ್ಥಳ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದ ದಿನಕ್ಕೆ 5-10 ಅಪ್ಡೇಟ್‌ ಮಾಡುವುದು ಕಷ್ಟಸಾಧ್ಯವಾಗಿದೆ. ತಾಲೂಕಿನ 81 ಗ್ರಾಮಗಳ ಜನರು ಆಧಾರ್ ಅಪ್ಡೇಟ್ ಗಾಗಿ ಲಭ್ಯವಿರುವ ಕೇಂದ್ರಗಳಲ್ಲಿ ಮುಗಿಬೀಳುವ ಕಾರಣ ಬ್ಯಾಂಕ್, ಅಂಚೆ ಕಚೇರಿಯ ದೈನಂದಿನ ಕೆಲಸಕಾರ್ಯಗಳಿಗೆ ಅಡ್ಡಿ ಉಂಟಾಗಿದೆ.

ಪಡಿತರ ಚೀಟಿಯ ಕೆವೈಸಿಗಾಗಿ ಇನ್ನೂ ಕೇವಲ ಒಂದು ವಾರ ಮಾತ್ರ ಉಳಿದಿದ್ದು, ಆಧಾರ್ ಕಾರ್ಡ್ ಅಪ್ಡೇಟ್ ತೀವ್ರ ಸ್ವರೂಪದ ಸಮಸ್ಯೆಯಾಗಿದ್ದು, ಆಧಾರ್ ಕಾರ್ಡ್ ಅಪ್ಡೇಟ್ ಗಾಗಿ ಇನ್ನಷ್ಟು ಆಧಾರ್ ಕೇಂದ್ರಗಳನ್ನು ತೆರೆಯುವುದು ಅನಿವಾರ್ಯವಾಗಿದೆ‌. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಇನ್ನಷ್ಟು ಆಧಾರ್ ಕೇಂದ್ರಗಳನ್ನು ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸದಿದ್ದರೆ ಪಡಿತರ ಚೀಟಿ ಕೆವೈಸಿಯಿಂದ ತಾಲೂಕಿನ 40% ಕ್ಕೂ ಹೆಚ್ಚು ಜನರು ಹೊರಗುಳಿಯುವ ಸಾಧ್ಯತೆಯಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ‌.