ಮುಮ್ತಾಜ್ ಅಲಿ ಸುಸೈಡ್ ಪ್ರಕರಣ; ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ.!

ಕರಾವಳಿ

ಮಾಜಿ ಶಾಸಕ ಮೊಹಿದ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು; ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಡುವೆಯೇ ಮಂಗಳೂರಿನ ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಅಂಶ ಬಯಲಾಗಿದೆ.

ಹೈ ಪ್ರೊಫೈಲ್ ಉದ್ಯಮಿಗಳ ಪೈಕಿ ಓರ್ವರು ಮುಮ್ತಾಜ್ ಅಲಿ ಬಳಗದಲ್ಲೇ ಕಾಣಿಸಿಕೊಂಡವರಾಗಿದ್ದು, ಅವರ ಕುಟುಂಬದವರೊಂದಿಗೆ ನಿಕಟ ಸಂಬಂಧ ಹೊಂದಿದವರಾಗಿದ್ದಾರೆ. ಇನ್ನೊಬ್ಬ ಉದ್ಯಮಿ ಕೂಡ ಇದೇ ಬಳಗದಲ್ಲಿ ಕಾಣಿಸಿಕೊಂಡವರು, ಮುಮ್ತಾಜ್ ಅಲಿ ಮೃತರಾದ ಸಂದರ್ಭ ಈ ಹಾಜಿ ಯ ಬಗ್ಗೆ ಗುಸು ಗುಸು ಕೇಳಿ ಬಂದಿತ್ತು. ಮುಮ್ತಾಜ್ ಅಲಿಯವರಿಗೆ ಸಂಬಂಧಿಸಿದ ವಿಡಿಯೋ, ಆಡಿಯೋ ಗಳನ್ನು ಮಂಗಳೂರಿನ ಪ್ರತಿಷ್ಠಿತ ಉದ್ಯಮಿಗಳಿಗೆ ರವಾನೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ನಂತರವೇ ಮುಮ್ತಾಜ್ ಅಲಿ ಮಾನಸಿಕವಾಗಿ ಹೆಚ್ಚು ಕುಗ್ಗಲು ಕಾರಣ ಅನ್ನುವ ಮಾಹಿತಿ ಇತ್ತು. ಈ ಪ್ರಕರಣದಲ್ಲಿ ನೇರ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಪರೋಕ್ಷವಾಗಿ ಕೆಲವು ಉದ್ಯಮಿಗಳ ಪಾತ್ರವೂ ಇದೆ ಅನ್ನುವ ಮಾಹಿತಿ ಹರಿದಾಡುತ್ತಿತ್ತು. ಇದೀಗ ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿ ಕೆಲವು ಹೈ ಪ್ರೊಫೈಲ್ ಉದ್ಯಮಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಮೊದಲ ಪ್ರಯತ್ನವಾಗಿ ಇಬ್ಬರನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಮೊಬೈಲ್ ಗಳಲ್ಲಿ ಇನ್ನಷ್ಟು ರೋಚಕ ಕಹಾನಿಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಇನ್ನೂ ಕೆಲವು ಸ್ವಯಂಘೋಷಿತ ಕಾಕಗಳ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.