ಸೂರಲ್ಪಾಡಿ: ಮಸೀದಿಯಲ್ಲಿ ಪ್ರಾರ್ಥನೆಗೆ ತೆರಳಿದ್ದ ಸಂದರ್ಭ ಆಟೋ ರಿಕ್ಷಾದಲ್ಲಿದ್ದ ನಗದು ಕಳವು ಪ್ರಕರಣ: ಬಜಪೆ ಪೊಲೀಸರಿಂದ ಆರೋಪಿ ಧನೇಶ್ ಬಂಧನ

ಕರಾವಳಿ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ ಮಸೀದಿ ಮುಂದೆ ಸೆಪ್ಟೆಂಬರ್ 18 ರಂದು ಶುಕ್ರವಾರ ಮದ್ಯಾಹ್ನ 1-00 ಗಂಟೆಗೆ ಸಾರ್ವಜನಿಕರೊಬ್ಬರು ತನ್ನ ಆಟೋ ರಿಕ್ಷಾ ನಿಲ್ಲಿಸಿ ಅದರ ಡ್ಯಾಶ್ ಬೋರ್ಡ್ ನಲ್ಲಿ 26,000 ರೂಪಾಯಿ ಹಣವನ್ನು ಇಟ್ಟು ಲಾಕ್ ಮಾಡಿ ಪ್ರಾರ್ಥನೆ ಮಾಡಲು ಮಸೀದಿಗೆ ತೆರಳಿದ್ದು, ಪ್ರಾರ್ಥನೆ ಮುಗಿಸಿ ವಾಪಸ್ಸು ಬಂದು ನೋಡಿದಾಗ ಆಟೋ ರಿಕ್ಷಾದ ಡ್ಯಾಶ್ ಬೋರ್ಡ್ ನಲ್ಲಿದ್ದ ಹಣ ಕಳವು ಆಗಿತ್ತು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 154/2026 ಕಲಂ 303(2) BNS -2023 ರಂತೆ ಪ್ರಕರಣ ದಾಖಲು ಮಾಡಲಾಗಿತ್ತು. ಆರೋಪಿಯ ಮುಖ ಚಹರೆ ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಪ್ರಕರಣದ ಆರೋಪಿ ಕುಂಟಿಕಾನ ನಿವಾಸಿ ಧನೇಶ್ ಪಿ ಎಂಬಾತನನ್ನು ಪೊಲೀಸರು ಸೆಪ್ಟೆಂಬರ್ 22 ರಂದು ವಶಕ್ಕೆ ಪಡೆದಿದ್ದು, ಆರೋಪಿ ಬಳಿಯಿದ್ದ 6,000 ರೂಪಾಯಿ ನಗದು ಹಣ ಮತ್ತು ಸುಮಾರು 25,000 ರೂಪಾಯಿ ಮೌಲ್ಯದ KA 19 HJ 6254 ನೇ ನಂಬ್ರದ ಹೊಂಡಾ ಕಂಪೆನಿಯ ಬೈಕ್ ನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಆರೋಪಿ ಕಳ್ಳತನ ಮಾಡಿದ ಹಣದಲ್ಲಿ 15,000 ರೂಪಾಯಿ ಹಣವನ್ನು ಪೋಸ್ಟ್ ಆಫೀಸ್ ನಲ್ಲಿ PPF ಕಟ್ಟಿರುವುದಾಗಿ ತಿಳಿಸಿದ್ದು, ತನಿಖೆ ಪ್ರಗತಿಯಲ್ಲಿರುತ್ತದೆ. ಆರೋಪಿತನ ಮೇಲೆ ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣಾ ಅಕ್ರ 146/2025 ಕಲಂ 303(2) BNS ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆ ಅಕ್ರ 34/2026 ಕಲಂ 303(2) BNS ರಂತೆ ಪ್ರಕರಣಗಳು ಸಹ ದಾಖಲಾಗಿರುತ್ತದೆ. ದಸ್ತಗಿರಿ ಮಾಡಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.