ಖಾಸಗಿ ಮೆಡಿಕಲ್ ಲಾಬಿಗೆ ಮಣಿದು ಘಟಕ ಸ್ಥಾಪಿಸಲು ಹಿಂದೇಟು ಹಾಕಿದ್ದ ಸರಕಾರ; ಇನ್ನಾದರೂ ಬಡ-ಮಧ್ಯಮ ವರ್ಗದವರ ನೆರವಿಗೆ ಧಾವಿಸುತ್ತಾ ಸರಕಾರ.?
ಖಾಸಗಿ ಮೆಡಿಕಲ್ ಕಾಲೇಜುಗಳ ಹಬ್ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ಆಸ್ಪತ್ರೆಗಳ ಬಲಪಡಿಸುವಿಕೆ ಗಗನಕುಸುಮವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಆರೋಗ್ಯ ರಂಗವನ್ನು ಬಲಪಡಿಸುವಂತೆ ಕಮ್ಯುನಿಸ್ಟ್ ಪಕ್ಷ, ಸಮಾನ ಮನಸ್ಕ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಇತ್ತೀಚೆಗೆ ಸುರತ್ಕಲ್ ನಲ್ಲಿ ಹೋರಾಟ ಸಮಿತಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕ, ಜಯದೇವ ಹೃದಯದ ಆಸ್ಪತ್ರೆ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ಪ್ರತಿಭಟನೆ ಕೂಡ ನಡೆಸಿತ್ತು. ಕಿದ್ವಾಯಿ ಹಾಗೂ ಜಯದೇವ ಘಟಕ ಆರಂಭಿಸಲು ಹಲವು ಸಮಯಗಳಿಂದ ಚರ್ಚೆ ನಡೆಯುತ್ತಿದ್ದರೂ ಖಾಸಗಿ ಆಸ್ಪತ್ರೆಗಳ ಲಾಬಿ, ಜಿಲ್ಲೆಯ ಪ್ರಭಾವಿ ಮುಖಂಡರು ಖಾಸಗಿ ಆಸ್ಪತ್ರೆಗಳ ಧಣಿಗಳೊಂದಿಗೆ ಕೈ ಜೋಡಿಸಿ ಸರಕಾರಿ ಮಟ್ಟದ ಆಸ್ಪತ್ರೆಗಳನ್ನು ಜಿಲ್ಲೆಯಲ್ಲಿ ತೆರೆಯಲು ಅಡ್ಡಿಯಾಗುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿತ್ತು.
ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಅಸಾಂಕ್ರಾಮಿಕ ರೋಗಗಳಾದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಗಳ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ದುಬಾರಿ ದರ ವಿಧಿಸಿ ದಂಧೆಯಾಗಿ ಪರಿವರ್ತಿಸಿದೆ. ಬಡ, ಮಧ್ಯಮ ವರ್ಗದವರು ಆಸ್ಪತ್ರೆಗೆ ಹೋಗಲು ಹೆದರುವಂತಹ ಪರಿಸ್ಥಿತಿ ಉಂಟಾಗಿದೆ. ಇದೀಗ ಸರಕಾರದ ಮಟ್ಟದಲ್ಲೂ ಇದು ಚರ್ಚೆಯಾಗಿದ್ದು, ಮಂಗಳೂರಿನ ಮೂಡುಶೆಡ್ಡೆಯ ಕ್ಷಯರೋಗಗಳ ಆಸ್ಪತ್ರೆಯ ಆವರಣದಲ್ಲಿ ಲಭ್ಯವಿರುವ ಜಾಗದಲ್ಲಿ ಜಯದೇವ ಹೈದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆ ಹಾಗೂ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಖಾಸಗಿ ಲಾಬಿಗೆ ಮಣಿದು ಜಯದೇವ ಘಟಕ ಸ್ಥಾಪನೆಗೆ ಹಿಂದೇಟು ಹಾಕಿದ ಸರಕಾರ ಇನ್ನಾದರೂ ಬಡವರ ನೆರವಿಗೆ ಧಾವಿಸಲಿ.
