ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ, ಆಡಳಿತರೂಢ ಪಕ್ಷದ ಶಾಸಕರಿಗೆ ಈಗ ಟೆನ್ಷನ್ ಶುರು ಆಗಿದೆ.! 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಈಗಲೇ ಅಸಲಿ ಕಸರತ್ತು ಪ್ರಾರಂಭವಾಗಿದೆ. ಕಾರಣ, ಪಕ್ಷದ ಒಳಗೆ ಸಿದ್ಧವಾಗುತ್ತಿರುವ ಆಂತರಿಕ ವರದಿ. ರಾಜ್ಯ ರಾಜಕಾರಣದಲ್ಲಿ ಈಗ ಸುನಿಲ್ ಕನುಗೋಳು ರವರ ವರದಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ಮೂರು ವರ್ಷಗಳ ಆಡಳಿತದ ಬೆನ್ನಲ್ಲೇ ಬಂದಿರುವ ಈ ಆಂತರಿಕ ಸಮೀಕ್ಷಾ ವರದಿ, ಹಾಲಿ ಶಾಸಕರ ನಿದ್ದೆಗೆಡಿಸಿದೆ. ವರದಿ ಪ್ರಕಾರ, ಕೆಲವು ಹಾಲಿ ಶಾಸಕರ ಕಾರ್ಯವೈಖರಿ ಬಗ್ಗೆ ನಕಾರಾತ್ಮಕ ಅಂಶಗಳು ಕೇಳಿಬಂದಿದ್ದು, ಮುಂದಿನ ಚುನಾವಣೆಯಲ್ಲಿ ಇವರ ಗೆಲುವು ಕಷ್ಟ ಎಂಬ ಸುಳಿವು ಸಿಕ್ಕಿದೆಯಂತೆ.
ಇದೇ ಕಾರಣಕ್ಕೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. “ಕ್ಷೇತ್ರದ ಕಡೆ ಗಮನ ಕೊಡಿ, ಜನರ ಮಧ್ಯೆ ಇರಿ, ಇಲ್ಲವಾದರೆ 2028ರಲ್ಲಿ ಟಿಕೆಟ್ ಸಿಗುವುದು ಸುಲಭವಲ್ಲ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ಹೈಕಮಾಂಡ್ ನೀಡಿರುವ ಸೂಚನೆಗಳು ಬಹಳ ಸ್ಪಷ್ಟವಾಗಿವೆ.
ಶಾಸಕರು ದೆಹಲಿ, ಬೆಂಗಳೂರಿನಲ್ಲೇ ಠಿಕಾಣಿ ಹಾಕದೆ, ತಮ್ಮ ಕ್ಷೇತ್ರದಲ್ಲಿ ಬೀಡುಬಿಡಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ಮಣಿಸಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ಬರುವ ಫಲಿತಾಂಶವೇ 2028ರ ಅಗ್ನಿಪರೀಕ್ಷೆಗೆ ದಿಕ್ಸೂಚಿ ಎಂದು ಪರ್ಮಾನು ಹೊರಡಿಸಿದ್ದಾರೆ. ‘ಜನರ ಕೆಲಸ ಮಾಡಿ, ಇಲ್ಲವೇ ಟಿಕೆಟ್ ಕಳೆದುಕೊಳ್ಳಲು ಸಿದ್ಧರಾಗಿ’ ಎಂಬ ಸಂದೇಶ ಈಗ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಆಂತರಿಕ ವರದಿಯ ಈ ಬಿಸಿ, ಶಾಸಕರನ್ನು ಎಷ್ಟರ ಮಟ್ಟಿಗೆ ಎಚ್ಚರಿಸಲಿದೆ ಮತ್ತು 2028ರ ಕದನದಲ್ಲಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
