ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಕೊನೆಗೂ ಅಧಿಕೃತ ಚಾಲನೆ ಸಿಕ್ಕಿದೆ. ಸುಪ್ರೀಂ ಕೋರ್ಟ್ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಹಿರಿಯ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಮಹತ್ವದ ಆದೇಶ ಹೊರಡಿಸಿದೆ. ಐಜಿಪಿ ಎನ್. ಶಶಿಕುಮಾರ್ ಅವರಿಗೆ ಈ ಮಹತ್ವದ ತನಿಖಾ ತಂಡದ ನೇತೃತ್ವ ವಹಿಸಲಾಗಿದೆ. ಇವರೊಂದಿಗೆ ತನಿಖಾ ಕಾರ್ಯದಲ್ಲಿ ಕೈಜೋಡಿಸಲು ದಕ್ಷ ಹಾಗೂ ಅನುಭವಿ ಅಧಿಕಾರಿಗಳ ದಂಡನ್ನೇ ನಿಯೋಜಿಸಲಾಗಿದೆ.
ತಂಡದಲ್ಲಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಮಂಗಳೂರು ನಗರ ಪೊಲೀಸ್ ಕಮಿಷನರ್, ನಿಶಾ ಜೇಮ್ಸ್ (IPS) ರಾಜ್ಯ ಗುಪ್ತದಳ, ಲೋಕೇಶ್ ಜಗಲಸಾರ್ (ಸಿಐಡಿ ಎಸ್.ಪಿ.)
ವೆಂಕಟೇಶ್ ಪ್ರಸನ್ನ (ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ) ರವರನ್ನು ನೇಮಕ ಮಾಡಲಾಗಿದೆ.
ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಅವರು ಸುದೀರ್ಘ ಕಾನೂನು ಹೋರಾಟ ನಡೆಸಿ, ಅವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹಿಂದಿನ ತನಿಖಾ ವೈಫಲ್ಯಗಳನ್ನು ಗಂಭೀರವಾಗಿ ಪರಿಗಣಿಸಿತ್ತು. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಹೊಸ ಎಸ್ಐಟಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ನ್ಯಾಯಪೀಠ, ಇಡೀ ತನಿಖಾ ಪ್ರಕ್ರಿಯೆಯನ್ನು ಕೇವಲ ಮೂರು ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿತ್ತು.
ಸುಪ್ರೀಂ ಕೋರ್ಟ್ನ ಈ ಕಟ್ಟುನಿಟ್ಟಿನ ಆದೇಶದ ಫಲವಾಗಿ ಇದೀಗ ರಾಜ್ಯ ಸರ್ಕಾರ ಎಸ್ಐಟಿ ಅಖಾಡಕ್ಕಿಳಿಸಿದ್ದು, ನೈಜ ಅಪರಾಧಿಗಳಿಗೆ ಕಾನೂನಿನ ಶಿಕ್ಷೆಯಾಗಲಿದೆಯೇ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಗರಿಗೆದರಿದೆ. 2012ರ ಅಕ್ಟೋಬರ್ನಲ್ಲಿ ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಬಿಐ ವಿಶೇಷ ನ್ಯಾಯಾಲಯವು 2023ರಲ್ಲಿ ಆತನನ್ನು ದೋಷಮುಕ್ತಗೊಳಿಸಿತು. ತದನಂತರ, 2024ರಲ್ಲಿ ಪ್ರಕರಣದ ಮರು ಸಿಬಿಐ ತನಿಖೆ ಕೋರಿ ಸೌಜನ್ಯ ಅವರ ತಾಯಿ ಕುಸುಮಾವತಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಆಗಸ್ಟ್ 20, 2024 ರಂದು ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
