ಹೈಕೋರ್ಟ್ ಗರಂ: ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀವಿ; ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್‌ಗೆ ಖಡಕ್ ಎಚ್ಚರಿಕೆ

ಕರಾವಳಿ

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ಮೂಲದ ಝೈಟ್ ಇಂಟೀರಿಯರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ಎಲೆಕ್ಟ್ರಿಕಲ್ ಗುತ್ತಿಗೆದಾರ ಸುನೀಲ್ ಕುಮಾರ್ ಪೈ ಅವರು ದೂರು ನೀಡಿದ್ದರು. ವಾಣಿಜ್ಯ ಕಟ್ಟಡದ ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಿದರೂ ಒಪ್ಪಂದದಂತೆ 60,39,046 ರೂ. ಪಾವತಿಸಿಲ್ಲ ಎಂದು ಆರೋಪಿಸಿದ್ದರು. ದೂರು ಆಧರಿಸಿ ಉಳ್ಳಾಲ ಠಾಣೆ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರು ಕಂಪನಿಯ ನಿರ್ದೇಶಕರು ಮತ್ತು ಸಿಬ್ಬಂದಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದರು. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ,ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರಿಗೆ ಛೀಮಾರಿ ಹಾಕಿದ ಹೈಕೋರ್ಟ್‌, 28 ವರ್ಷ ಸೇವೆ ಸಲ್ಲಿಸಿದ್ದೀರಿ ಎಂದು ಕಂಪನಿಯ ಬ್ಯಾಂಕ್‌ ಖಾತೆ ನಿರ್ಬಂಧಿಸಿದ್ದೀರಿ. ಈ ನ್ಯಾಯಾಲಯ ಅಮಾನತು ಆದೇಶ ಮಾಡಿದರೆ, ನಿಮ್ಮ ಪೊಲೀಸ್‌ ಸಮವಸ್ತ್ರ್ರವೇ ಇರುವುದಿಲ್ಲ. ಉಳಿದ ಸೇವಾ ಅವಧಿಯನ್ನು ಸರ್ವೀಸ್‌ ಮ್ಯಾಟರ್‌ ಮುಂದಿಟ್ಟುಕೊಂಡು ಕೋರ್ಟ್‌ಗೆ ಸುತ್ತಾಡುತ್ತಾ ಮುಗಿಸಬೇಕಾಗುತ್ತದೆ. ಸಮವಸ್ತ್ರ ಇಲ್ಲವಾದರೆ ಏನಾಗುತ್ತದೆ ಗೊತ್ತಲ್ಲ. ನೀವೇ ಹಾಲು-ಬಿಸ್ಕೆಟ್‌ ಹಾಕಿ ಪೋಷಿಸಿದ ನಿಮ್ಮ ಮನೆಯ ನಾಯಿ ಸಹ ನಿಮ್ಮನ್ನು ಮೂಸುವುದಿಲ್ಲ. ಮನೆ ಹತ್ತಿರ ಹೋದರೆ ನಾಯಿ, ನಿಮ್ಮನ್ನು ನೋಡಿ ಬೊಗಳುತ್ತದೆ. ಅಮಾನತು ಮಾಡಿ, ನಿಮ್ಮ ಪೊಲೀಸ್‌ ಕ್ಯಾಪ್‌, ಯೂನಿಫಾರಂ ಮೇಲಿನ ಸ್ಟಾರ್‌ ಇಳಿಸಲೇ ಎಂದು ಚಾಟಿ ಬೀಸಿದ್ದಾರೆ.