ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡುವ ಯೋಜನೆ; ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆ, ಇಲಾಖೆಯ ಕಾರ್ಯಕ್ಷಮತೆಯನ್ನು ಬಲಪಡಿಸುವ ಉದ್ದೇಶ

ರಾಜ್ಯ

ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡುವ ಯೋಜನೆ ಬಗ್ಗೆ ಗೃಹ ಸಚಿವರು ಮಹತ್ವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ ಹಾಗೂ ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪೊಲೀಸ್ ಆಧುನೀಕರಣ ಸಮಿತಿಯನ್ನು ರಚಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಅಪರಾಧಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳು, ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ, ಸೈಬರ್ ಅಪರಾಧಗಳ ಹೆಚ್ಚಳ ಹಾಗೂ ಹೊಸ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮೂಲಸೌಕರ್ಯ, ಸಂವಹನ ವ್ಯವಸ್ಥೆ, ಸೈಬರ್ ಸಾಮರ್ಥ್ಯ, ತರಬೇತಿ, ಪೊಲೀಸ್ ವಸತಿ ಮತ್ತು ಸಿಬ್ಬಂದಿ ಕಲ್ಯಾಣ ಸೇರಿದಂತೆ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಪ್ರಸ್ತುತ ಮೂಲಸೌಕರ್ಯ ಮತ್ತು ಉಪಕರಣಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ತುರ್ತು ಅಗತ್ಯಗಳನ್ನು ಗುರುತಿಸಿ, ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಬಹುದಾದ ಆಧುನೀಕರಣ ಯೋಜನೆಯನ್ನು ರೂಪಿಸಲು ಸಮಿತಿಯನ್ನು ರಚಿಸಲಾಗಿದೆ.

ತುರ್ತು ಪ್ರತಿಕ್ರಿಯೆ ನೀಡುವ ವ್ಯವಸ್ಥೆ, ನಿಯಂತ್ರಣ ಕೊಠಡಿಗಳು ಹಾಗೂ 112 ಸೇವೆಗಳ ಉನ್ನತೀಕರಣ ಸಾಧ್ಯತೆಗಳನ್ನು ಸಮಿತಿ ಪರಿಶೀಲಿಸಲಿದೆ. ವಿಧಿವಿಜ್ಞಾನ ಪ್ರಯೋಗಾಲಯದ ಬಲವರ್ಧನೆ, ಇಲಾಖೆಯ ವಾಹನಗಳು ಹಾಗೂ ಇತರೆ ಚಾಲನೆಯಲ್ಲಿರುವ ಸೌಲಭ್ಯಗಳ ಅಗತ್ಯತೆಗಳನ್ನೂ ಅಧ್ಯಯನ ಮಾಡಲಿದೆ. ಪೊಲೀಸ್ ಇಲಾಖೆಯಲ್ಲಿ ಎಐ ಬಳಕೆಯ ಸಾಧ್ಯತೆಗಳು, ಇಲಾಖೆಯ ವಿವಿಧ ಕಾರ್ಯಗಳ ಗಣಕೀಕರಣ, ಹಾರ್ಡ್‌ವೇರ್ ಮತ್ತು ಸಂಪರ್ಕ ಸಾಧನಗಳ ಅವಶ್ಯಕತೆ, ನಾಗರಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪೊಲೀಸ್ ತರಬೇತಿ ಅಕಾಡೆಮಿಗಳ ಸ್ಥಾಪನೆ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಆಧುನಿಕ ಪರಿಕರಗಳು ಹಾಗೂ ವ್ಯವಸ್ಥೆಗಳ ಅಳವಡಿಕೆ ಕುರಿತೂ ಸಮಿತಿ ಪರಿಶೀಲನೆ ನಡೆಸಲಿದೆ. ಮುಂದಿನ ವರ್ಷಗಳಲ್ಲಿ ಆದ್ಯತೆ ಆಧಾರಿತ ಆರ್ಥಿಕತೆಗೆ ಸುಸಜ್ಜಿತವಾದ ಸಮಗ್ರ ಪೊಲೀಸ್ ಆಧುನೀಕರಣ ಯೋಜನೆಯನ್ನು ರೂಪಿಸುವುದು ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ.