ಮೂರೂ ಪಕ್ಷಗಳಿಗೂ ಚುನಾವಣೆಯಲ್ಲಿ ಗೆಲುವು ಖಚಿತ ಎಂಬ ಸ್ಥಿತಿ ಸದ್ಯಕ್ಕಿಲ್ಲ.!
ಮೂರೂ ಪಕ್ಷಗಳಿಗೆ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂಬ ಸ್ಥಿತಿ ಸದ್ಯ ಇಲ್ಲ. ಗುಪ್ತಚರ ವರದಿಯೂ ಇದನ್ನೇ ಹೇಳುತ್ತಿದೆ. ಹೀಗಾಗಿ ಫಲಿತಾಂಶ ಪ್ರಕಟವಾಗುವವರೆಗೆ ಮೂರೂ ಪಕ್ಷಗಳಿಗೆ ಪ್ರತೀ ಕಣವೂ ಚಿಂತೆಯೇ!
ಚುನಾವಣೆಯ ಸಂಬಂಧ ಗುಪ್ತದಳದ ಪ್ರಾಥಮಿಕ ವರದಿ ಮೂರೂ ಪಕ್ಷಗಳ ನಿದ್ದೆಗೆಡಿಸಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಸದ್ಯ ಬಿಜೆಪಿ 60, ಕಾಂಗ್ರೆಸ್ 58 ಹಾಗೂ ಜೆಡಿಎಸ್ 30 ಸ್ಥಾನ ಗೆಲ್ಲುವುದು ಖಚಿತ; ಉಳಿದ 76 ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಗೆಲುವು ಸಾಧಿಸಿದವರದೇ ಸರಕಾರ ಎಂದು ಗುಪ್ತದಳದ ಪ್ರಾಥಮಿಕ ವರದಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.ಬಿಜೆಪಿಯತ್ತ ಕರಾವಳಿ- ಮಲೆನಾಡು, ಉತ್ತರ ಕರ್ನಾಟಕದಲ್ಲಿ ವಿಜಯ ಸಾಧಿಸಿದರೆ,ಕಾಂಗ್ರೆಸ್ ಹಳೇ ಮೈಸೂರು, ಕಲ್ಯಾಣ ಕರ್ನಾಟಕಗಳಲ್ಲಿ ಪ್ರಬಲ್ಯ ಮೆರೆಯಬಹುದು.ಜೆಡಿಎಸ್ ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕ, ಮುಂಬಯಿ ಕರ್ನಾಟಕದಲ್ಲಿ ಮತದಾರರು ಒಲವು ತೋರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಿದೆ.
ಬಿಜೆಪಿಯ ಜನಸಂಕಲ್ಪ, ಕಾಂಗ್ರೆಸ್‌ನ ಪ್ರಜಾಧ್ವನಿ, ಜೆಡಿಎಸ್‌ನ ಪಂಚರತ್ನ ಯಾತ್ರೆಗಳ ಅನಂತರ ಕೆಲವು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಬದಲಾವಣೆ ಹಾಗೂ ಸ್ಥಳೀಯ ಹಂತದ ಪರಿಸ್ಥಿತಿ ಬದಲಾಗಿದೆ ಎನ್ನಲಾಗಿದೆ. ಇದೆಲ್ಲವೂ ನವೆಂಬರ್‌ನಿಂದ ಜನವರಿ ವರೆಗಿನ ಗುಪ್ತಚರ ಮಾಹಿತಿ ಎಂದು ತಿಳಿದು ಬಂದಿದೆ. ಉತ್ತರದಲ್ಲಿ ಕಾಂಗ್ರೆಸ್ ಕಮಲ ಸಮಬಲ: 8 ಕ್ಷೇತ್ರಗಳು ಈಗ ನೀಡಿರುವುದು ಪ್ರಾಥಮಿಕ ಹಂತದ ವರದಿಯಾಗಿದ್ದು, ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆಯಾದ ಅನಂತರ 50ರಿಂದ 60 ಕ್ಷೇತ್ರಗಳ ಚಿತ್ರಣ ಬದಲಾಗುವ ಸಾಧ್ಯತೆಯಿದೆ. ಚುನಾವಣೆ ಸಮಯದ ಪಕ್ಷಾಂತರ ಯಾವುದೇ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಲಾಭ ತರುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೂರೂ ಪಕ್ಷಗಳು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ ಎಂದು ಹೇಳುತ್ತಿವೆ. ಆದರೆ ಬಿಜೆಪಿ 30ರಿಂದ 40, ಕಾಂಗ್ರೆಸ್ 25ರಿಂದ 35 ಹಾಗೂ ಜೆಡಿಎಸ್ 45ರಿಂದ 50 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ ಎಂಬುದು ವರದಿಯಲ್ಲಿದೆ ಎನ್ನಲಾಗಿದೆ.ಯಾತ್ರೆ, ಸಮಾವೇಶಗಳಲ್ಲಿ ನಮ್ಮದೇ ಅಧಿಕಾರ ಎಂದು ಮೂರೂ ಪಕ್ಷಗಳ ನಾಯಕರು ಹೇಳುತ್ತಿದ್ದಾರಾದರೂ ಯಾರಿಗೂ ಸ್ಪಷ್ಟ ಬಹುಮತದ ಭರವಸೆ ಇಲ್ಲ. ಈಗಿನ ಪ್ರಕಾರ ಮ್ಯಾಜಿಕ್ ನಂಬರ್ ತಲುಪಲು 3 ಪಕ್ಷಗಳೂ ಬೆವರು ಹರಿಸಬೇಕಾಗುತ್ತದೆ. ಬಿಜೆಪಿ- ಜೆಡಿಎಸ್‌ನಲ್ಲಿ ಟಿಕೆಟ್ ಹಂಚಿಕೆ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ. ಆದರೆ ಕಾಂಗ್ರೆಸ್‌ಗೆ ಅದೇ ದೊಡ್ಡ ತಲೆನೋವಾಗಬಹುದು ಎಂಬ ವಾಖ್ಯಾನಗಳಿವೆ.
