ಡಿಕೆಶಿ ನಾಯಕತ್ವಕ್ಕೆ ‘ಮಾಡು ಇಲ್ಲವೇ ಮಡಿ’ ಚುನಾವಣೆ.!
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಚುನಾವಣೆಯ ಕಾವು ಏರುತ್ತಿದೆ. ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ. ಸುಧಾಕರ್ ನಿಧನದಿಂದ ತೆರವಾದ ಹಿರಿಯೂರು ಕ್ಷೇತ್ರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉಪ ಚುನಾವಣೆ ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಒಂದೊಮ್ಮೆ ಜೆಡಿಎಸ್ ಭದ್ರಕೋಟೆಯಾಗಿದ್ದ ಹಿರಿಯೂರಿನಲ್ಲಿ ಈಗ ಕಾಂಗ್ರೆಸ್ಸಿಗರದ್ದೇ ದರ್ಬಾರ್.. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದರೂ ವಿಧಾನ ಪರಿಷತ್ ಫಲಿತಾಂಶ ಮುಖ್ಯಮಂತ್ರಿ ಡಿಕೆಶಿ ವರ್ಚಸ್ಸಿಗೆ ದೊಡ್ಡ ಪೆಟ್ಟು ನೀಡಿತ್ತು. ಈಗ ಕಾಂಗ್ರೆಸ್ ಸರಕಾರ ಇರುವುದರಿಂದ ಶತಾಯಗತಾಯ ಕಾಂಗ್ರೆಸ್ ಹಿರಿಯೂರು ಗೆಲ್ಲಲೇಬೇಕಿದೆ. ಒಂದು ವೇಳೆ ಹಿರಿಯೂರು ಫಲಿತಾಂಶದಲ್ಲಿ ಏರುಪೇರು ಆದರೂ ಅದು ಮುಖ್ಯಮಂತ್ರಿ ಡಿಕೆಶಿ ಬುಡಕ್ಕೆ ಬರುವುದಂತೂ ಗ್ಯಾರಂಟಿ. ಒಂದು ವೇಳೆ ಎನ್ ಡಿಎ ಮೈತ್ರಿಕೂಟದ ಪರವಾಗಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ದೊರೆತರೆ ಕಾಂಗ್ರೆಸ್ಸಿನ ಶಕುನಿ ಗುಂಪೊಂದು ಡಿಕೆಶಿ ಗೆ ಮರ್ಮಾಘಾತ ನೀಡಲು ರೆಡಿಯಾಗಿದೆಯಾ..?ರಾಜಕಾರಣದ ಇಂಟರೆಸ್ಟಿಂಗ್ ಸ್ಟೋರಿ ಇದು.
ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿ ಇಳಿದ ಮೇಲೆ ರಾಜ್ಯದಲ್ಲಿ ಜೆಡಿಎಸ್ ಫೀನಿಕ್ಸ್ ನಂತೆ ಎದ್ದೇಳಿ ಕುಳಿತಿದೆ. ಕುಮಾರಸ್ವಾಮಿ ಒನ್ ಮ್ಯಾನ್ ಶೋ ಜೆಡಿಎಸ್ ಪಕ್ಷಕ್ಕೆ ಬೂಸ್ಟ್ ಕೊಡುತ್ತಿದೆ. ಇತ್ತ ಕರ್ನಾಟಕವನ್ನು ಬಿಜೆಪಿ ಮರೆತು ಬಿಡುವುದು ಒಳ್ಳೆಯದು ಎಂದು ನಿದ್ರೆಗೆ ಜಾರಿದ್ದ ವಿಜಯೇಂದ್ರ ಕ್ಯಾಂಪ್ ಕೂಡ ಮನಸ್ಸು ಮಾಡಿದರೆ ಗೆಲ್ಲಬಹುದು ಅನ್ನುವ ಹುಮ್ಮಸ್ಸಿಗೆ ಬಂದು ತಲುಪಿದೆ. ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ತಲ್ಲಣದಿಂದ ಇಲ್ಲಿ ಬಿಜೆಪಿ -ಜೆಡಿಎಸ್ ಖುಷ್ ಆಗಿದೆ. ಹಿರಿಯೂರು ಚುನಾವಣೆ ಜೊತೆಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಗೆಲ್ಲುವ ಮಾಸ್ಟರ್ ಪ್ಲ್ಯಾನ್ ಸಿದ್ಧಗೊಳಿಸಿ ಚುನಾವಣಾ ಚಾಣಾಕ್ಷ ಅಮಿತ್ ಷಾ ಅವರನ್ನು ವಿಜಯೇಂದ್ರ -ಕುಮಾರಸ್ವಾಮಿ ಭೇಟಿ ಮಾಡಿ ಬಂದಿದ್ದಾರೆ. ಇಬ್ಬರು ನಾಯಕರ ಮಾತುಕತೆಯಿಂದ ಅಮಿತ್ ಷಾ ಕೂಡ ಪುಲ್ ಖುಷ್ ಆಗಿದ್ದಾರಂತೆ. ಆರು ತಿಂಗಳ ಮೊದಲು ಇಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಠಕ್ಕರ್ ಕೊಡುವುದು ಹೇಗೆ ಅನ್ನುವ ಚಿಂತೆಯಲ್ಲಿದ್ದ ಷಾ ಗೆ ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಕಂಬೈನ್ ಆಗಿ ಧೀರತೆಯಿಂದ ಚುನಾವಣೆ ಎದುರಿಸಲು ಸಜ್ಜಾಗಿರುವುದು ಸಮಾಧಾನ ಕೊಟ್ಟಿದೆಯಂತೆ.

ಇದೀಗ ಹಿರಿಯೂರು ಕ್ಷೇತ್ರಕ್ಕೆ ಬಿಜೆಪಿಯಿಂದಲೋ, ಜೆಡಿಎಸ್ ಯಿಂದಲೋ ಅಭ್ಯರ್ಥಿ ಹಾಕಿದರೆ ಗೆಲ್ಲುವ ಚಾನ್ಸ್ ಯಾರಿಗೆ ಹೆಚ್ಚು ಅನ್ನುವ ಲೆಕ್ಕಾಚಾರದಲ್ಲಿ ಅಮಿತ್ ಷಾ ಮುಳುಗಿದ್ದಾರೆ. ಅದಕ್ಕಾಗಿ ಸರ್ವೇಗೂ ಮುಂದಾಗಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ -ವಿಜಯೇಂದ್ರ ಅವರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಇಂಚಿಂಚೂ ಮಾಹಿತಿ ಪಡೆದುಕೊಂಡಿದ್ದಾರೆ.
ಹಿರಿಯೂರಿನಲ್ಲಿ 2023 ರಲ್ಲಿ ಕಾಂಗ್ರೆಸ್ ವಿಜಯದ ಪತಾಕೆ ಹಾರಿಸಿದರೂ, ಈ ಕ್ಷೇತ್ರದ ಹಿನ್ನೆಲೆ ನೋಡಿದಾಗ ಅದು ಜೆಡಿಎಸ್ ಪಕ್ಷದ ಭದ್ರಕೋಟೆ. 2018 ರಲ್ಲಿ ಇಲ್ಲಿ ಬಿಜೆಪಿ ಕೂಡ ವಿಜಯ ದುಂದುಭಿ ಬಾರಿಸಿತ್ತು. ಇಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿಕೂಟ ಗ್ರೌಂಡ್ ಲೆವೆಲ್ ನಲ್ಲಿ ಒಟ್ಟಾಗಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಮುಟ್ಟಿ ನೋಡುವ ರೀತಿಯ ಫಲಿತಾಂಶ ಕೊಡಬಹುದು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲೂ ಹಿರಿಯೂರು ಉಳಿಸಿಕೊಳ್ಳುವ ಬಗ್ಗೆ ಚಿಂತೆ ಎದುರಾಗಿದೆ. ಡಿಕೆಶಿ ಗೂ ಕೂಡ ಇದೊಂದು ಸವಾಲಿನ ಕ್ಷೇತ್ರವಾಗಿ ಈ ಚುನಾವಣೆ ಮಾರ್ಪಟ್ಟಿದೆ.

ಅಂದ ಹಾಗೆ ಹಿರಿಯೂರು ಒಂದೊಮ್ಮೆ ಜೆಡಿಎಸ್ ಪಕ್ಷದ ಭದ್ರಕೋಟೆ. ಆದರೆ ಈಗಿನ ಸನ್ನಿವೇಶದಲ್ಲಿ ಜೆಡಿಎಸ್ ಪ್ರಾಬಲ್ಯ ಹಿರಿಯೂರಿನಲ್ಲಿ ಮೊದಲಿನ ಹಾಗೆ ಇಲ್ಲದಿರುವುದರಿಂದ ಬಿಜೆಪಿ ಗೆ ಟಿಕೆಟ್ ಫಿಕ್ಸ್ ಆಗಿ ಜೆಡಿಎಸ್ ಸ್ಟ್ರಾಂಗ್ ಸರ್ಪೋರ್ಟ್ ನೀಡಿದರೆ ಹಿರಿಯೂರಲ್ಲಿ ಬಿಜೆಪಿ ಅರಳಬಹುದು ಅನ್ನುವ ಫಿನ್ ಟು ಫಿನ್ ಡೀಟೈಲ್ಸ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಣಾಕ್ಷ ಅಮಿತ್ ಷಾ ಮುಂದಿಟ್ಟಿದ್ದಾರೆ.
ಇನ್ನು ಕುಮಾರಸ್ವಾಮಿ ಅಮಿತ್ ಷಾ ನಡುವೆ ನಡೆದಿರುವ ಗೌಪ್ಯ ಮೀಟಿಂಗ್ ನಲ್ಲಿ ಹಿರಿಯೂರಿನ ಸಮಗ್ರ ಚುನಾವಣಾ ಇತಿಹಾಸವನ್ನು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಜಯೇಂದ್ರ ನೀಡಿರುವ ರೀಪೋರ್ಟ್ ಗೆ ಕೌಂಟರ್ ಕೊಡುವ ರೀತಿಯಲ್ಲಿ 2018 ರಲ್ಲಿ ಬಿಜೆಪಿ ಇಲ್ಲಿ ಗೆದ್ದರೂ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದಲ್ಲ. ಕೆಲ ಜೆಡಿಎಸ್ ಮುಖಂಡರು ಬಿಜೆಪಿ ಜೊತೆ ಸಾಥ್ ಕೊಟ್ಟ ಕಾರಣ ಬಿಜೆಪಿಗೆ ಗೆಲುವಾಗಿದೆ. ಹಿರಿಯೂರಿನಲ್ಲಿ ಈಗಲೂ ಜೆಡಿಎಸ್ ಪ್ರಾಬಲ್ಯ ಗಟ್ಟಿಯಾಗಿದೆ. ಹಿರಿಯೂರಿನಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಸರಿಸಮಾನವಾಗಿ ಒಕ್ಕಲಿಗರ ಒಂದು ಗುಂಪು ಜೆಡಿಎಸ್ ಜೊತೆ ಸಂಪೂರ್ಣವಾಗಿ ನಿಂತಿದೆ. ಜೆಡಿಎಸ್ ಗೆ ಟಿಕೆಟ್ ಕೊಟ್ಟು ಬಿಜೆಪಿ ನಮಗೆ ಬೆಂಬಲಿಸಿದರೆ ಹಿರಿಯೂರಿನಲ್ಲಿ ಕಾಂಗ್ರೆಸ್ ಮಕಾಡೆ ಮಲಗಿಸುವ ಕೆಲಸ ಸಾಧ್ಯ ಅನ್ನುವ ಮೆಸೇಜ್ ರವಾನಿಸಿದ್ದಾರೆ.

ಇವಿಷ್ಟೇ ಅಲ್ಲ. ಇನ್ನೊಂದು ಸಿಕ್ರೇಟ್ ಮೆಸೇಜ್ ಅನ್ನು ಅಮಿತ್ ಷಾ ಮುಂದೆ ಕುಮಾರಸ್ವಾಮಿ ರಿವೀಲ್ ಮಾಡಿದ್ದಾರೆ. ಒಂದು ವೇಳೆ ಹಿರಿಯೂರಿನಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಡಿಕೆಶಿ ಜೊತೆ ಮುನಿಸಿಕೊಂಡಿರುವ ಕಾಂಗ್ರೆಸ್ಸಿನ ಒಂದಿಷ್ಟು ಗುಂಪು ಪರೋಕ್ಷವಾಗಿ ನಮಗೆ ಬೆಂಬಲ ನೀಡಲಿದೆ. ಅಲ್ಲದೇ ಖುದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮಗೆ ಬೆಂಬಲ ನೀಡಲಿದ್ದಾರೆ ಅನ್ನುವ ಅಚ್ಚರಿಯ ಮಾತುಗಳನ್ನು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇತ್ತೀಚಿನ ದಿನಗಳಲ್ಲಿ ನಮ್ಮೊಂದಿಗೆ ಒಳ್ಳೆಯ ಬಾಂಧವ್ಯ ದಲ್ಲಿ ಇದ್ದು, ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ವರ್ಚಸ್ಸಿದೆ. ಅಲ್ಲಿರುವ ಕಾಡುಗೊಲ್ಲ ಸಮುದಾಯ ಸಿದ್ದರಾಮಯ್ಯ ಅವರನ್ನು ಫಾಲೋ ಮಾಡುತ್ತಿದೆ. ಸಿದ್ದರಾಮಯ್ಯ ಇಂತಹವರಿಗೆ ಓಟು ಹಾಕಿ ಹೇಳಿದರೆ ಸಾಕು, ಆ ಸಮುದಾಯ ಕಣ್ಣುಮುಚ್ಚಿ ಓಟು ಹಾಕುತ್ತದೆ. ಆ ಸಮುದಾಯದ ನಡುವೆ ಅವರು ಅಷ್ಟೊಂದು ಪ್ರಭಾವಿಯಾಗಿದ್ದಾರೆ. ನಮ್ಮ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಈಝಿಯಾಗಿ ಗೆಲ್ಲಬಹುದು ಅನ್ನುವ ರಹಸ್ಯ ಅಮಿತ್ ಷಾ ಮುಂದಿಟ್ಟಿದ್ದಾರೆ. ಅಮಿತ್ ಷಾ ಅವರು ಕೂಡ ಬಿಜೆಪಿಗೆ ಟಿಕೆಟ್ ಅನ್ನುವ ಹಠಕ್ಕೂ ಬಿದ್ದಂತೆ ಕಾಣುತ್ತಿಲ್ಲ. ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್ ಗೆ ಲಗಾಮು ಹಾಕಲು ಯಾವ ಪಕ್ಷದ ಅಭ್ಯರ್ಥಿ ಗೆ ಸಾಧ್ಯ ಅನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ. ಈ ಚುನಾವಣೆಯಲ್ಲಿ ಒಂದು ವೇಳೆ ಎನ್ ಡಿಎ ಮೈತ್ರಿಕೂಟ ಗೆದ್ದರೆ 2028 ರ ದಾರಿ ಸುಲಭವಾಗಲಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಕಾಂಗ್ರೆಸ್ ಗೂ ಇದು ಮಾಡು ಇಲ್ಲವೇ ಮಡಿ ಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಡಿಕೆಶಿ ನಾಯಕತ್ವ ಸ್ಟ್ರಾಂಗ್ ಪಕ್ಕಾ. ಒಂದು ವೇಳೆ ಕಾಂಗ್ರೆಸ್ ಸೋತರೆ 2028 ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕತ್ವವೂ ಬದಲಾಗಬಹುದು. ಕಾಂಗ್ರೆಸ್ ಗಿಂತ ಇದು ಡಿಕೆಶಿ ಗೆ ಮಾಡು ಇಲ್ಲವೇ ಮಡಿ ಚುನಾವಣೆ.
