ಹಿಂದುತ್ವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಶೂನ್ಯ ಎಂದು ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ ಹಾಗೂ ಮೋದಿ ಅವರು ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಶುಕ್ರವಾರ ಚೆನ್ನೈನ ಥಿಂಕ್ಎಡು ಕಾನ್ಕ್ಲೇವ್ನಲ್ಲಿ ‘ದಿ ಗ್ಲೋಬಲ್ ಹೈ ಟೇಬಲ್: ಕ್ಯಾನ್ ಇಂಡಿಯಾ ಬಿ ಎ ವಿಶ್ವಗುರು’ ಎಂಬ ವಿಷಯ ಕುರಿತು ಮಾತನಾಡಿದ ಸ್ವಾಮಿ ಮೋದಿ, ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದರು.
ಸುಪ್ರೀಂ ಕೋರ್ಟ್ ನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವಾಗ ಅವರು ತಮ್ಮ ಸ್ನೇಹಿತ ಎಸ್ ಗುರುಮೂರ್ತಿ ಅವರನ್ನು ಅರ್ಜಿ ಸಲ್ಲಿಸಲು ಕರೆದೊಯ್ದಿದ್ದರು. ಮಂದಿರ ನಿರ್ಮಾಣಕ್ಕೆ ಮಂಜೂರಾದ ಭೂಮಿಯನ್ನು ವಾಪಸ್ ಕೊಡಬೇಕೆಂದು ಪ್ರಧಾನಿ ಮೋದಿ ಬಯಸಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು. ಮಾಜಿ ಪ್ರಧಾನಿ ನರಸಿಂಹರಾವ್ ಅವರ ಅಧಿಕಾರಾವಧಿಯಲ್ಲಿ ಭೂಮಿಯನ್ನು ರಾಷ್ಟ್ರೀಕರಣಗೊಳಿಸಲಾಯಿತು ಎಂದರು.
ಮೋದಿಯವರೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿಲ್ಲ ಎಂದು ಹೇಳಿದ ಸ್ವಾಮಿ, ಚೀನಾ ಮತ್ತು ಆರ್ಥಿಕ ನೀತಿಗಳ ಕುರಿತಾದ ಪ್ರಧಾನಿಯವರ ನೀತಿಗಳನ್ನು ವಿರೋಧಿಸುವುದಾಗಿ ಹೇಳಿದರು. ವಿಶ್ವಗುರುವಿನ ಪರಿಕಲ್ಪನೆಯಲ್ಲಿ, ಗಡಿ ಸಮಸ್ಯೆಗಳ ಬಗ್ಗೆ ಚೀನಾಕ್ಕೆ ಮಿಲಿಟರಿ ಪ್ರತಿಕ್ರಿಯೆ ನೀಡಿದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಹೇಳಿದರು. ವಿಶ್ವಗುರುವಾಗಲು ಬುದ್ಧಿವಂತಿಕೆ ಅಗತ್ಯ ಎಂದರು.
“ಗುರುಗಳು, ಸಾಧುಗಳು ಮತ್ತು ಸನ್ಯಾಸಿಗಳು ಆರು ವಿಭಿನ್ನ ರೀತಿಯ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ. ಅವುಗಳೆಂದರೆ ಅರಿವು,ಭಾವನಾತ್ಮಕ, ಸಾಮಾಜಿಕ, ನೈತಿಕ, ಪರಿಸರ ಮತ್ತು ಆದ್ಯಾತ್ಮಿಕತೆಯಾಗಿರುತ್ತದೆ. ಆಧುನಿಕ ತಂತ್ರಜ್ಞಾನಗಳನ್ನು ರೂಪಿಸುವ ಶತಮಾನಗಳ ಮೊದಲು ಭಾರತ ಇತರ ದೇಶಗಳಿಗಿಂತ ಮುಂದಿತ್ತು ಎಂದು ಸ್ವಾಮಿ ಹೇಳಿದರು.
