ಹೊಡಿ,ಬಡಿ ನಾಯಕರ ಮಾತಿನ ಶೂರತ್ವ ಚಪ್ಪಾಳೆ, ಶಿಳ್ಳೆಗೆ ಮಾತ್ರ ಸೀಮಿತವೇ..?
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ವಳಾಲು ಟೋಲ್ ಪ್ಲಾಝಾ ಅಧಿಕೃತವಾಗಿ ನವೆಂಬರ್ 26 ರಂದು ಟೋಲ್ ಶುಲ್ಕ ಸಂಗ್ರಹ ಆರಂಭಿಸಿದ್ದು, ರಾಷ್ಟ್ರೀಯ ಹೆದ್ದಾರಿ 75 ರ ಬಿ.ಸಿ.ರೋಡ್ ಅಡ್ಡಹೊಳೆ ನಡುವಿನ ಚತುಷ್ಪಥ ರಸ್ತೆಯ ಮಾರ್ಜಿನ್ ನಲ್ಲಿ ಟೋಲ್ ಪ್ಲಾಝಾ ಕಾರ್ಯಾರಂಭಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಒಂದು ಟೋಲ್ ನಿಂದ ಇನ್ನೊಂದು ಟೋಲ್ ಗೆ 60 ಕಿಮೀ ಅಂತರ ಬೇಕಾಗಿದೆ. ಈಗಾಗಲೇ ವಳಾಲು ಟೋಲ್ ಗೇಟ್ ಅಧಿಕೃತವಾಗಿ ಆರಂಭಗೊಂಡಿರುವುದರಿಂದ ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಯಮ ಬಾಹಿರ ಆದಂತಾಗಿದೆ.

ಅಕ್ರಮ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಕಾಂಗ್ರೆಸ್ ಧುರೀಣರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಕೂಡ ಇತ್ತೀಚೆಗೆ ನಡೆದಿತ್ತು. ಕಾಂಗ್ರೆಸ್ ಯುವ ನಾಯಕರೊಬ್ಬರು ಬ್ರಹ್ಮರಕೂಟ್ಲು ಟೋಲ್ ಗೇಟ್ ಪ್ರತಿಭಟನೆಯಲ್ಲಿ ವಳಾಲು ಟೋಲ್ ಗೇಟ್ ಆರಂಭವಾಗಲಿ, ಜೆಸಿಬಿ, ಟಿಪ್ಪರ್ ತಂದು ರಾತ್ರೋರಾತ್ರಿ ಬ್ರಹ್ಮರಕೂಟ್ಲು ಟೋಲ್ ಗೇಟ್ ಪುಡಿ ಪುಡಿ ಮಾಡುತ್ತೇವೆ ಎಂದು ವಿರಾವೇಷದ ಭಾಷಣ ಮಾಡಿದ್ದರು. ಕಾಂಗ್ರೆಸ್ ಮುಖಂಡ ಶೆಟ್ಟರೊಬ್ಬರ ಜೆಸಿಬಿ, ಟಿಪ್ಪರ್ ತಂದು ಅಕ್ರಮ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಮಾಡುತ್ತೇವೆ ಎಂದು ಗುಡುಗಿದ್ದರು. ಯಾವ ಕೇಸ್ ಗೂ ಜಗ್ಗಲ್ಲ.. ಎಂದು ಭಾಷಣ ಬಿಗಿದರು. ಶಿಳ್ಳೆ, ಚಪ್ಪಾಳೆ ಪಡೆದು ಅಲ್ಲಿಂದ ತೆರಳಿದ್ದರು.

ಆದರೆ ಇದೀಗ ವಳಾಲು ಟೋಲ್ ಗೇಟ್ ಅಧಿಕೃತವಾಗಿ ಆರಂಭಗೊಂಡಿರುವುದರಿಂದ ಮಾತಿನ ಶೂರರು, ಹೊಡಿ ಬಡಿಯ ಧರಣಿ ನಾಯಕರು ಯಾವುದೇ ಸೊಲ್ಲೆತ್ತದೆ ಮೌನಕ್ಕೆ ಶರಣಾಗಿದ್ದಾರೆ. ಜಿಲ್ಲೆಯಲ್ಲಿ ಟೋಲ್ ಗೇಟ್ ಮಾಫಿಯಾ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ನಿರ್ದಿಷ್ಟ ಮಾನದಂಡವಿಲ್ಲದೆ ಮನ ಬಂದಂತೆ ಅಲ್ಲಲ್ಲಿ ಟೋಲ್ ಗೇಟ್ ನಿರ್ಮಾಣವಾಗುತ್ತಿದೆ. ಕಮ್ಯುನಿಸ್ಟ್ ಮುಖಂಡರ ನೇತೃತ್ವದಲ್ಲಿ ನ್ಯಾಯಯುತ ಹೋರಾಟದ ಮೂಲಕ ಅಕ್ರಮ ಟೋಲ್ ಗೇಟ್ ಮುಚ್ಚಿಸಿ ಯಶಸ್ವಿಯಾಗಿದ್ದರು. ಬ್ರಹ್ಮರಕೂಟ್ಲು ಅಕ್ರಮ ಟೋಲ್ ಗೇಟ್ ತೆರವಿಗೆ ಮುಂಚೂಣಿ ನಾಯಕತ್ವವಹಿಸಿರುವ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹೊಡಿ ಬಡಿ ರೀತಿಯ ಹೇಳಿಕೆ ಮೂಲಕ ಗಮನ ಸೆಳೆದಿದ್ದರು. ಆದರೆ ಇದೀಗ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡಬೇಕಿದೆ. ಮಾತಿನ ಶೂರರು ತಾವು ಹೇಳಿದ ಮಾತನ್ನು ಮರೆತಿದ್ದರಾ..? ಚಪ್ಪಾಳೆ, ಶಿಳ್ಳೆಗೆ ಮಾತ್ರ ಸೀಮಿತವಾ..?
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸುವ ಹೆಸರಿನಲ್ಲಿ ಆರಂಭವಾದ ರಾಜಕೀಯ ಕಸರತ್ತು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಟೋಲ್ ಗೇಟ್ ಬಂದ್ ಮಾಡಿಸುವುದಾಗಿ ಬಿಲ್ಡಪ್ ನೀಡಿದ್ದ ಪಟಾಲಂ ಇದೀಗ ತೆರವು ಯಾವಾಗ?” ಎಂಬ ಪ್ರಶ್ನೆಗೆ ಉತ್ತರ ನೀಡಲಾಗದ ಸ್ಥಿತಿಗೆ ತಲುಪಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

ಬ್ರಹ್ಮರಕೂಟ್ಲು ಟೋಲ್ ಗೇಟ್ ಇನ್ನೂ ಅಲ್ಲೇ ಇದೆ. ಹೀಗಿರುವಾಗ ಜನರ ಸರಳ ಪ್ರಶ್ನೆ ಒಂದೇ.? “ಇಷ್ಟೆಲ್ಲಾ ಬಿಲ್ಡಪ್, ಪ್ರತಿಭಟನೆ, ಬ್ಯಾನರ್ ಮತ್ತು ರಾಜಕೀಯ ಕಸರತ್ತುಗಳ ಬಳಿಕ ಟೋಲ್ ಗೇಟ್ ತೆರವು ಯಾವಾಗ.?” ಹೋರಾಟದ ನಾಯಕರು ಫಲಿತಾಂಶ ತೋರಿಸಲಿ. ಇಲ್ಲವಾದರೆ ಇದು ಟೋಲ್ ತೆರವು ಹೋರಾಟವಲ್ಲ, ಪುಕ್ಕಟೆ ಪ್ರಚಾರದ ರಾಜಕೀಯ ನಾಟಕ ಎಂಬ ಟೀಕೆಗೆ ಉತ್ತರವೇನು.?
