ಅಪ್ರಾಪ್ತ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ,ಅರೋಪಿಗೆ 15 ವರ್ಷಗಳ ಕಠಿಣ ಶಿಕ್ಷೆ ಹಾಗೂ 50,000 ಸಾವಿರ ದಂಡ

ಕರಾವಳಿ

ಅಪ್ರಾಪ್ತ ವಯಸ್ಸಿನ ಸೊಸೆಯ ಮೇಲೆ ಲೈಂಗಿಕ ಅಪರಾಧ ಎಸಗಿದ ವ್ಯಕ್ತಿಗೆ 15 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 50,000 ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ತೀರ್ಪು ನೀಡಿ,ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ.

ಶಾಲೆಗೆ ಹೋಗಿದ್ದ ಸಂತ್ರಸ್ತ ವಿದ್ಯಾರ್ಥಿನಿ ಸ್ನೇಹಿತೆ ಜೊತೆ ಮನೆಗೆ ಮರಳುತ್ತಿದ್ದಾಗ 2021ರ ಆ.9ರಂದು ಆಕೆಯ ಮಾವ, ಅವರಿಬ್ಬರನ್ನು ಹಿಂಬಾಲಿಸಿದ್ದ. ದಾರಿಯಲ್ಲಿ ಸಂತ್ರಸ್ತೆಯ ಸ್ನೇಹಿತೆಯನ್ನು ನಿಂದಿಸಿ ಆಕೆಯನ್ನು ಕಳುಹಿಸಿದ್ದ. ನಂತರ ಆರೋಪಿ ಸಂತ್ರಸ್ತೆಯನ್ನು ತಡೆದು ಬಲವಂತವಾಗಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಅಪರಾಧ ಎಸಗಿದ್ದ. ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ.

ಸಂತ್ರಸ್ತೆಯನ್ನು ಬಲವಂತವಾಗಿ ಕರೆದೊಯ್ಯುವುದನ್ನು ಗಮನಿಸಿದ್ದ ಆಕೆಯ ಸ್ನೇಹಿತೆ, ಆಕೆಯ ಮನೆಯವರಿಗೆ ಮಾಹಿತಿ ನೀಡಿದ್ದಳು.
ಮಗಳ ಮೇಲೆ ಲೈಂಗಿಕ ಅಪರಾಧ ನಡೆದಿರುವುದು ಮನಗಂಡ ತಾಯಿ ದೂರು ದಾಖಲಿಸಿದ್ದರು. 2021ರ ಆ.15 ರಂದು ಅಪರಾಧಿಯನ್ನು ಬಂಧಿಸಲಾಗಿತ್ತು. ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ತನಿಖೆ ನಡೆಸಿದ್ದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ವೆಂಕಟರಮಣ ಸ್ವಾಮಿ ವಾದಿಸಿದ್ದರು.

ಕ್ರಿಮಿನಲ್ ಬೆದರಿಕೆಗಾಗಿ ನ್ಯಾಯಾಲಯವು ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ಒಂದು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದೆ.