ನ್ಯಾಯದ ನಿರಾಕರಣೆ, ಬಲಾಢ್ಯ ಲಾಬಿಯ ರಕ್ಷಣೆಯೆ ಆದ್ಯತೆ ಎಂದಾದರೆ ಈ ಪ್ರಕರಣ ದೊಡ್ಡ ಹೋರಾಟಕ್ಕೆ ನಾಂದಿ ಹಾಡಲಿದೆ
✍️. ಮುನೀರ್ ಕಾಟಿಪಳ್ಳ
ಸುರತ್ಕಲ್ “ಅಥರ್ವಾ” ಆಸ್ಪತ್ರೆಯಲ್ಲಿ ಆಪರೇಷನ್ ಸಂದರ್ಭ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಬಲಿಯಾದ ಕುಳಾಯಿಯ 16 ವರ್ಷದ ಬಾಲಕ ಮೊಯ್ದಿನ್ ಫರ್ಹಾನ್ ಕಾಲಿನ ಪಾದದ ಮೇಲ್ಭಾಗದಲ್ಲಿ ಆಗಿದ್ದ ಗಾಯ ಏಳು ಹೊಲಿಗೆ ಮಾತ್ರ ಹಾಕುವಷ್ಟು ಸಣ್ಣದು. ಪಾದದ ಮೂಳೆಗೆ ಯಾವುದೇ ಹಾನಿ ಆಗದೆ ಇದ್ದ ಸಾಮಾನ್ಯ ಗಾಯ ಇದು.
ಇಂತಹ ಗಾಯಕ್ಕೆ ಸಾಮಾನ್ಯವಾಗಿ MBBS ವೈದ್ಯರು ತಮ್ಮ ಕ್ಲಿನಿಕ್ ನಲ್ಲಿಯೆ ಚಿಕಿತ್ಸೆ ನೀಡುತ್ತಾರೆ. ಹೊಲಿಗೆ ಹಾಕಬೇಕಾದ ಗಾಯದ ಸಮೀಪ ನೋವಿನ ಇಂಜಕ್ಷನ್ ಚುಚ್ಚಿ ಆರಾಮವಾಗಿ ಹೊಲಿಗೆ ಹಾಕಿ ಒಂದಿಷ್ಟು ಮಾತ್ರೆಗಳನ್ನು ಕೊಟ್ಟು ಮನೆಗೆ ಕಳುಹಿಸುತ್ತಾರೆ. ಆಸ್ಪತ್ರೆ, ನರ್ಸಿಂಗ್ ಹೋಂ ಗಳಲ್ಲಾದರೆ ಇಂತಹ ಗಾಯಕ್ಕೆ ಕ್ಯಾಸುವಲ್ಟಿ ಕೋಣೆಯಲ್ಲಿ ನೋವಿನ ಇಂಜಕ್ಷನ್ ಚುಚ್ಚಿ ಹೊಲಿಗೆ ಹಾಕಿ ಮನೆಗೆ ಕಳುಹಿಸಿ ಕೊಡುವುದು ಕ್ರಮ.
ಅಥರ್ವಾ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾದ (ಆಸ್ಪತ್ರೆಯ ಮಾಲಕತ್ವವೂ ಇವರದ್ದೇ) ಡಾ. ಪ್ರಶಾಂತ್ ಮೋಹನ್ , ಇಂತಹ ಸಾಮಾನ್ಯ ಹೊಲಿಗೆ ಹಾಕುವ ಗಾಯಕ್ಕೆ (ಚಿತ್ರ ಗಮನಿಸಿ, ಹುಡುಗನ ಪಾದದ ಗಾಯಕ್ಕೆ ಹಾಕಿರುವುದು ಏಳು ಹೊಲಿಗೆ ಮಾತ್ರ. ಮೂಳೆಗೆ ಯಾವುದೇ ಹಾನಿ ಆಗಿರಲಿಲ್ಲ ಎಂದು ವೈದ್ಯರೆ ಹೇಳಿಕೆ ನೀಡಿದ್ದಾರೆ) ಒಳರೋಗಿಯಾಗಿ ಅಡ್ಮಿಟ್ ಮಾಡಿದ್ದು ಯಾತಕ್ಕೆ ? ಸರ್ಜರಿ ನಡೆಸಬೇಕಿದೆ (ಹೊಲಿಗೆ ಹಾಕುವುದನ್ನು ಸರ್ಜರಿ ಎಂದು ಕರೆಯಲು ಶುರು ಮಾಡಿದ್ದು ಯಾವಾಗಿನಿಂದ), ಅದಕ್ಕೆ ವೆಚ್ಚ ರೂಪಾಯಿ 35 ಸಾವಿರ ಆಗುತ್ತದೆ ಎಂದು ಪ್ಯಾಕೇಜ್ ಫಿಕ್ಸ್ ಮಾಡಿದ್ದು ಹೇಗೆ ? ಏಳು ಹೊಲಿಗೆ, ಒಂದು XRAY ಗೆ 35 ಸಾವಿರ ರೂಪಾಯಿ ದರವೆ ! ಇಂತಹ ಒಂದು ಸಾಮಾನ್ಯ ಪ್ರಕರಣದಲ್ಲಿ ಅನಸ್ತೇಶಿಯಾ ಬಳಸಿದ್ದು, ಅದನ್ನು ಬಾಲಕನ ಬೆನ್ನು ಮೂಳೆಯ ಬಳಿ ಇಂಜಕ್ಟ್ ಮಾಡಿದ್ದು ಯಾಕೆ ?
ಬಾಲಕ ಫರ್ಹಾನ್ ಅಸಹಜ ಸಾವಿನ ತನಿಖೆಗೆ ಜಿಲ್ಲಾಡಳಿತ ನೇಮಕ ಮಾಡಿರುವ ಪರಿಣಿತ ವೈದ್ಯರ ತಂಡ ತನಿಖೆ ನಡೆಸಬೇಕಾದ ಎರಡು ಅಂಶಗಳಲ್ಲಿ ಇದು ಪ್ರಧಾನ ಅಂಶ.
ಒಂದು, ಅನಸ್ತೇಶಿಯಾ ನೀಡಿದ ತಕ್ಷಣವೇ ಬಾಲಕನ ಪಲ್ಸ್ ಏರುಪೇರಾಗಲು, ಪಿಟ್ಸ್ ಬರಲು ಕಾರಣ ಏನು? ಅನಸ್ತೇಶಿಯಾ ಎರಡೆರಡು ಬಾರಿ ಚುಚ್ಚಿ ಓವರ್ ಡೋಸ್ ಆಗಿರುವುದು ಹೌದೆ ? ಅನಸ್ತೇಶಿಯಾ ನೀಡುವ ಮೊದಲು ಆತನ ದೇಹಕ್ಕೆ ಅನಸ್ತೇಶಿಯಾ ಒಗ್ಗುತ್ತದೆಯೆ ಎಂದು ಟೆಸ್ಟಿಂಗ್ ಡೋಸ್ ನೀಡಲಾಗಿತ್ತೆ, ಇಲ್ಲವೆ ? ಹುಡುಗನ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿ ಉಸಿರಾಡಲು ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ವೈದ್ಯರು ಆತನ ಗಂಭೀರ ಆರೋಗ್ಯ ಸ್ಥಿತಿಯ ತುರ್ತು ಚಿಕಿತ್ಸೆಗೆ ಗಮನ ನೀಡುವ ಬದಲು ಸರ್ಜರಿ ಮುಂದುವರಿಸಿದ್ದು ಹೇಗೆ ? ಇದು ವೈದ್ಯಕೀಯ ನಿಯಮದ ಪ್ರಕಾರ ಗಂಭೀರ ಲೋಪ ಅಲ್ಲವೆ ? ಆತ ಇನ್ನೇನು ಪ್ರಾಣ ಬಿಡುತ್ತಾನೆ ಎಂದು ಖಾತರಿಯಾದ ಮೇಲೂ ಪೋಷಕರಿಂದ ಒತ್ತಡದಲ್ಲಿ ಸಹಿ ಪಡೆದು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ನೆಪದಲ್ಲಿ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಹೊರ ಕಳುಹಿಸಿದ್ದು ಹೇಗೆ ?
ಎರಡು) ಕ್ಯಾಸುವಲ್ಟಿಯಲ್ಲಿ ನೋವಿನ ಇಂಜೆಕ್ಷನ್ ನೀಡಿ ಹೊಲಿಗೆ ಹಾಕಿ ಕಳುಹಿಸುವ ಸಾಮಾನ್ಯ ಪ್ರಕರಣದಲ್ಲಿ ಆಪರೇಷನ್ ನಡೆಸಬೇಕಿದೆ ಎಂದು ಕುಟುಂಬಸ್ಥರನ್ನು ನಂಬಿಸಿ (ಭಯ) ಭಯ ಪಡಿಸಿ ಒಳರೋಗಿಯಾಗಿ ಅಡ್ಮಿಟ್ ಮಾಡಿ ಆಪರೇಷನ್ ಥೇಟರ್ ನಲ್ಲಿ ಬೆನ್ನು ಮೂಳೆಗೆ ಅನಸ್ತೇಶಿಯಾ ನೀಡಿ ಪಾದದ ಗಾಯಕ್ಕೆ ಹೊಲಿಗೆ ಹಾಕಿದ ಉದ್ದೇಶ ಏನು ? ನಾಗರಿಕರು ಆರೋಪಿಸುವಂತೆ ರೋಗಿಗಳ ಅಸಹಾಯಕತೆ, ತಿಳುವಳಿಕೆಯ ಕೊರತೆಯನ್ನು ದುರುಪಯೋಗ ಪಡಿಸಿ ದೊಡ್ಡ ಪ್ರಮಾಣದ ಹಣ ಪಡೆಯುವ ತಂತ್ರವೆ ? ಹೌದು ಅಂತಾದರೆ, ಬಾಲಕನ ಅನ್ಯಾಯದ ಸಾವಿಗೆ ಇದೇ ಪ್ರಧಾನ ಕಾರಣ ಅಲ್ಲವೆ ?
ಸುರತ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಬಾಲಕ ಫರ್ಹಾನ್ ಚಿಕಿತ್ಸೆಗೆ ಸಂಬಂಧಿಸಿ ಎಲ್ಲಾ ದಾಖಲೆ, ಸಾಕ್ಷ್ಯಗಳನ್ನು ಸಮಗ್ರವಾಗಿ ಸಂಗ್ರಹಿಸಿ ಆರೋಗ್ಯ ಇಲಾಖೆಯ ಪರಿಣಿತ ತನಿಖಾ ತಂಡಕ್ಕೆ ನೀಡಿದ್ದಾರೆ. ಪೋಸ್ಟ್ ಮಾರ್ಟಂ ಎಲ್ಲಾ ಮುಂಜಾಗರೂಕತೆ (ವಿಡಿಯೊ ರೆಕಾರ್ಡಿಂಗ್, ಪರಿಣಿತ ವೈದ್ಯರ ಉಪಸ್ಥಿತಿಯೊಂದಿಗೆ) ಯೊಂದಿಗೆ ಜಿಲ್ಲಾ ಸರ್ಜನ್ ಮೇಲುಸ್ತವಾರಿಯಲ್ಲಿ ನಡೆಸಲಾಗಿದೆ. ಈಗ ಸರಿಯಾದ ತನಿಖೆಗೆ ಪರಿಣಿತರ ತಂಡಕ್ಕೆ ಯಾವುದೇ ಅಡ್ಡಿಗಳು ಇಲ್ಲ. ಒತ್ತಡಗಳನ್ನು ಮೀರಿ ಸರಿಯಾದ ತನಿಖೆ ನಡೆದು, ಸಮಗ್ರ ವರದಿಯನ್ನು ತನಿಖಾ ತಂಡ ನೀಡುತ್ತದೆ. ಅದರ ಆಧಾರದಲ್ಲಿ ತಪ್ಪಿತಸ್ಥ ಆಸ್ಪತ್ರೆ, ವೈದ್ಯರ ಮೇಲೆ ಸರಿಯಾದ ಕ್ರಮ ಜರುಗಲಿದೆ, ಫರ್ಹಾನ್ ಕುಟುಂಬಕ್ಕೆ ನ್ಯಾಯ ಸಿಗಲಿದೆ. ಮೆಡಿಕಲ್ ನೆಗ್ಲಿಜನ್ಸಿ ಎಸಗುವ, ರೋಗಿಗಳ ಪ್ರಾಣದೊಂದಿಗೆ ಆಟ ಆಡುವ,ಹಣದಾಸೆಗೆ ಅನಗತ್ಯ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಇದೊಂದು ಪಾಠ ಆಗಲಿದೆ ಎಂಬುದು ನಮ್ಮಲ್ಲರ ನಿರೀಕ್ಷೆ.
ನ್ಯಾಯದ ನಿರಾಕರಣೆ, ಬಲಾಢ್ಯ ಲಾಬಿಯ ರಕ್ಷಣೆಯೆ ಆದ್ಯತೆ ಎಂದಾದರೆ ಈ ಪ್ರಕರಣ ದೊಡ್ಡ ಹೋರಾಟಕ್ಕೆ ನಾಂದಿ ಹಾಡಲಿದೆ.