ದಿನಾಂಕ 29-12-2023 ರಂದು ಗುರುಪುರ ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ ಸರಕಾರಿ ಅಸ್ಪತ್ರೆ ಉಳಿಸಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತ್ರತ್ವದಲ್ಲಿ ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ
ಗುರುಪುರ ಹೋಬಳಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ, ವೈದ್ಯರುಗಳ ಸಹಿತ ಸೂಕ್ತ ಮೂಲಭೂತ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸಲು ಒತ್ತಾಯಿಸಿ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು, ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ದಿನಾಂಕ 08-01-2024 ರಂದು ಪ್ರತಿಭಟನಾ ಧರಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ ಡಿವೈಎಫ್ಐನ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ
ಮಿಜಾರು, ಕುಪ್ಪೆಪದವು, ಅಡ್ಡೂರು, ಮಲ್ಲೂರು,ಬಜ್ಜೆ ಗಡಿವರೆಗೆ ವಿಶಾಲ ಭೂಪ್ರದೇಶವನ್ನು ಹೊಂದಿರುವ ಗುರುಪುರ ಹೋಬಳಿಯು ಅಪಾರ ಜನದಟ್ಟಣೆಯನ್ನು ಹೊಂದಿದೆ. ಪೂರ್ತಿ ಗ್ರಾಮೀಣ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಮಿಕರು, ಕೂಲಿಕಾರರು, ಅಸಂಘಟಿತ ವಲಯದ ನೌಕರರು, ಸಣ್ಣ ರೈತರ ಸಹಿತ ಕಡಿಮೆ ಆದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಗಂಜಿಮಠ ಕೈಗಾರಿಕಾ ವಲಯವು ಗುರುಪುರ ಹೋಬಳಿಯ ವ್ಯಾಪ್ತಿಯಲ್ಲಿದೆ. ಸರಿ ಸುಮಾರು ಎರಡು ಲಕ್ಷಕ್ಕೂ ಮಿಕ್ಕ ಜನಸಂಖ್ಯೆ ಹೊಂದಿರುವ ಇಲ್ಲಿ ಸರಕಾರದ ವೈದ್ಯಕೀಯ ನಿಯಮದಂತೆ ದಶಕದ ಹಿಂದೆಯೇ 40 ಹಾಸಿಗೆಗಳ ಸರಕಾರಿ ಸಮುದಾಯ ಆಸ್ಪತ್ರೆ ಲಭ್ಯ ಆಗಬೇಕಿತ್ತು. ಆದರೆ, ಹಲವು ಭಾರಿ ಈ ಕುರಿತು ಧ್ವನಿ ಎತ್ತಿದರೂ ಸಂಬಂಧ ಪಟ್ಟವರು ಗಮನ ಹರಿಸಿಲ್ಲ. ವೈದ್ಯಕೀಯ ವೆಚ್ಚಗಳು ದುಬಾರಿ ಆಗಿರುವ ಈಗಿನ ಸಂದರ್ಭದಲ್ಲಿ ಈ ವ್ಯಾಪ್ತಿಯ ಜನ ತಮ್ಮ ಆನಾರೋಗ್ಯದ ಚಿಕಿತ್ಸೆಗಾಗಿ ಖಾಸಾಗಿ ಆಸ್ಪತ್ರೆಗಳನ್ನು ಆಶ್ರಯಿಸುವುದು. ಅಲ್ಲಿನ ದುಬಾರಿ ವೆಚ್ಚವನ್ನು ಭರಿಸಲಾಗದೆ ಪರಿತಪಿಸುವುದು ನಡೆಯುತ್ತಿದೆ. ಬಡವರು. ಜನಸಾಮಾನ್ಯರಿಗೆ ಆರೋಗ್ಯದ ಹಕ್ಕು ಒದಗಿಸುವುದು ತಮ್ಮ ಕರ್ತವ್ಯವಾಗಿದ್ದರೂ ಸಂಸದರು. ಶಾಸಕರುಗಳು ಗಮನ ಹರಿಸದಿರುವುದು ಖೇದಕರ ಎಂದರು.
ಕಾಂಗ್ರೆಸ್ ನ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ಗಣೇಶ್ ಗಂಜಿಮಠ ಮಾತನಾಡಿ ಗುರುಪುರ ಹೋಬಳಿ ಪ್ರದೇಶವು ಸುಮಾರು 2 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಈ ಜನಸಂಖ್ಯೆಗೆ ಅನುಗುಣವಾಗಿ ಎರಡು ಸಮುದಾಯ ಆಸ್ಪತ್ರೆಗಳು ಗುರುಪುರ ಹೋಬಳಿಗೆ ಬರಬೇಕಿತ್ತು ಆದರೆ ಅವಕಾಶಗಳಿದ್ದರೂ ಇಲ್ಲಿಯವರೆಗೂ ಸಮುದಾಯ ಆಸ್ಪತ್ರೆಯ ಕನಸು ಕನಸಾಗಿಯೇ ಉಳಿದಿದೆ ಹಾಗಾಗಿ ಸಮಾನ ಮನಸ್ಕರಾದ ನಾವು ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸುವ ಮುಖಾಂತರ ನಮ್ಮ ಬೇಡಿಕೆಗಳನ್ನು ಮುಂದಿಡಬೇಕು ಎಂದರು. ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಿರಾಜ್ ಮಾತನಾಡಿ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಮೂಲಭೂತ ಹಕ್ಕನ್ನು ಸರಕಾರ ಒದಗಿಸುವ ಕೆಲಸ ಮಾಡಬೇಕು, ಇಲ್ಲದಿದ್ದಲ್ಲಿ ಜನ ಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬರುತ್ತದೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ,ಸಹಕಾರ ವ್ಯಕ್ತಪಡಿಸಿದರು. ಹಿರಿಯ ದಲಿತ ಮುಖಂಡರಾದ ಎಮ್ ದೇವದಾಸ್ ಇವರು ಸಭೆಯ ಸಭಾಧ್ಯಕ್ಷತೆಯನ್ನು ವಹಿಸಿದ್ದು ಸಭೆಯಲ್ಲಿ ಸಿಪಿಐಎಂ ಮುಖಂಡರಾದ ಸದಾಶಿವ ದಾಸ್, ಕಾರ್ಮಿಕ ಮುಖಂಡರಾದ ನೋಣಯ್ಯ ಗೌಡ, ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾದ ಅನಿತ ಡಿಸೋಜ,ಇರ್ಫಾನ್, ಹಮೀದ್ ಮಳಲಿ, ಝಹೂರ್, ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೊಹಮ್ಮದ್ ಶರೀಫ್ ಕಜೆ, ಸಾಮಾಜಿಕ ಹೋರಾಟಗಾರರಾದ ಬಾವ ಪದರಂಗಿ, ಸಿ ಎಫ್ ಸಿ ಸುರಲ್ಪಾಡಿ ಇದರ ಅಧ್ಯಕ್ಷರಾದ ಅಶ್ರಫ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ವಸಂತಿ ಕುಪ್ಪೆಪದವು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಕುಸುಮ, ಸಿರಾಜ್ ಉಳಾಯಿಬೆಟ್ಟು, ಕಾಂಗ್ರೆಸ್ ಮುಖಂಡ ಶರೀಪ್ ಉಳಾಯಿಬೆಟ್ಟು, ಆನಂದ ಇರುವೈಲು ಅಶೋಕ್ ಬಂಗೇರ,ಹಮೀದ್ ಸಾಗರ್, ಶೇಖ್ ಅಬ್ಬಾಸ್ ಸುರಲ್ಪಾಡಿ, ರಷೀದ್ ಕೆ.ಸಿ ಸುರಲ್ಪಾಡಿ, ಇಡ್ಮಾ ಖಾದರ್, ಯಾಕೂಬ್ ಗುರುಪುರ, ಮೊದಲಾದವರು ಉಪಸ್ಥಿತರಿದ್ದರು