ಮಂದಿರವಲ್ಲೇ ಕಟ್ಟಿದೆವು.! ಅಡ್ವಾಣಿ ಎಲ್ಲಿ.?

ರಾಷ್ಟ್ರೀಯ

ಅಡ್ವಾಣಿ, ಜೋಷಿ, ಕಟಿಯಾರ್, ಉಮಾಭಾರತಿ, ತೊಗಾಡಿಯಾ ಮುಂತಾದ ಹಿಂದೂ ಹುಲಿಗಳು ಮೋದಿಯ ಹಠಾತ್ ದಾಳಿಯಿಂದ ತತ್ತರಿಸಿ ನೇಪಥ್ಯಕ್ಕೆ ಸರಿದು ತಮಗಾದ ​ ಗಾಯವನ್ನು ನೆಕ್ಕಿಕೊಳ್ಳುತ್ತಾ ಹಲ್ಲು ಮಸೆದುಕೊಳ್ಳುತ್ತಿದ್ದಾರೋ ಏನೋ.?

ಸಂಘಪರಿವಾರದ ಮುಖ್ಯಸ್ಥ ಮುರಳಿ ಮನೋಹರ ಜೋಷಿಯವರ ವಸತಿಗ್ರಹದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯ ಜಾಗದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ತೆಗೆದುಕೊಂಡ ಸಣ್ಣ ಮಟ್ಟದ ತೀರ್ಮಾನವು ಕ್ರಮೇಣ ಲಾಲ್‌ಕೃಷ್ಣ ಅಡ್ವಾಣಿಯವರ ರಥಯಾತ್ರೆಯ ಮೂಲಕ ದೇಶದಾದ್ಯಂತ ಸಂಚಲನ ಸೃಷ್ಠಿಸಿತು. “ಮಂದಿರವಲ್ಲೇ ಕಟ್ಟುವೆವು” ಎಂಬ ಅಡ್ವಾಣಿಯವರ ಘೋಷಾ ವಾಕ್ಯವು ಭಾರತದ ಹಳ್ಳಿಹಳ್ಳಿಯಲ್ಲೂ ಅನುರಣಿಸತೊಡಗಿತು. ಶಾಬಾನು ಪ್ರಕರಣದಲ್ಲಿ ವಿಚ್ಛೇಧಿತ ಮುಸ್ಲಿಮ್ ಮಹಿಳೆಗೆ ಜೀವನಾಂಶ ನೀಡಬೇಕೆಂಬ ತೀರ್ಪನ್ನು ಸಂಸತ್ತಿನಲ್ಲಿ ರದ್ದುಗೊಳಿಸುವ ಮೂಲಕ ಹಿಂದೂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದ ರಾಜೀವ್ ಗಾಂಧೀಯವರು ಹಿಂದೂಗಳ ಓಲೈಕೆಗಾಗಿ ಅಯೋಧ್ಯೆಯಲ್ಲಿ ಮಂದಿರದ ಶಿಲಾನ್ಯಾಸ ನೆರವೇರಿಸಲು ಕೊಟ್ಟ ಅವಕಾಶವನ್ನು ಸಂಘಪರಿವಾರವು ರಾಷ್ಟ್ರದ ರಾಜಕೀಯದಲ್ಲಿ ಕಾಂಗ್ರೆಸ್‌ನ್ನು ಅಪ್ರಸಕ್ತಗೊಳಿಸುವಷ್ಟು ಹೆಮ್ಮರವಾಗಿ ಬೆಳೆಯಿತು.

​ಲಾಲ್‌ಕೃಷ್ಣ ಅಡ್ವಾಣಿಯವರ ರಥಯಾತ್ರ‍್ರೆ, ಉಮಾಭಾರತಿ, ಗೋವಿಂದಚಾರ್ಯ ತೊಗಾಡಿಯ ಮುಂತಾದವರುಗಳ ಬೆಂಕಿ ಉಗುಳುವ ಭಾಷಣದಿಂದಾಗಿ ದೇಶವು ಕೋಮುದಳ್ಳುರಿ ಭುಗಿಲೇಳಲು ಹದಗೊಂಡಿತು. ಕರಸೇವೆಯ ಮೂಲಕ ಅದು ಸಾಕ್ಷಾತಾರಗೊಂಡಿತು. ಎಲ್ಲೆಡೆ ಪ್ರಮುಖವಾಗಿ ಮೋದಿಯ ಗುಜರಾತ್‌ನಲ್ಲಿ ಮುಸ್ಲಿಮರ ಮಾರಣಹೋಮ ನಡೆಯಿತು.

​ಕರಸೇವೆಯ ಹೆಸರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ರವರ ಜಾಣ ಮೌನವು ವೃತವು ಮಸೀದಿಯ ರಕ್ಷಣೆಗಾಗಿ ನಿಂತಿದ್ದ ಪೊಲೀಸ್ ಮತ್ತು ಸೇನೆಗೆ ತಟಸ್ಥರಾಗಿ ಅಥವಾ ಮಸೀದಿಯ ಧ್ವಂಸಕ್ಕೆ ಪ್ರಚೋದನೆ ನೀಡಿದ ಉದ್ದೇಶಿತ ತಂತ್ರದ ಭಾಗವಾಗಿತ್ತೆಂದು ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಗ ಉತ್ತರಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವನ್ನು ವಜಾಗೊಳಿಸಿದ್ದು ಕೂಡಾ ಪೂರ್ವಯೋಜಿತ ಷಡ್ಯಂತ್ರದ ಭಾಗವಾಗಿತ್ತೆಂದು ಅನಂತರದ ಘಟನಾವಳಿಗಳಿಂದ ಸಾಭೀತಾಯಿತು.

​ಸಾವಿರಾರು ಮಾನವ ರುಂಡಮುಂಡಗಳನ್ನು ಗಲ್ಲಿಗಲ್ಲಿಗಳಲ್ಲಿ ಚೆಂಡಾಡಿ ರಕ್ತದೋಕುಳಿ ಹರಿಸಿದ ನಂತರ ಐತಿಹಾಸಿಕ ಪುರಾವೆಗಳನ್ನು ಬದಿಗೆ ತಳ್ಳಿ ವಿಶ್ವಾಸದ ಹೆಸರಲ್ಲಿ ತಮ್ಮ ಪರ ತೀರ್ಪು ಬರೆಸಿದ ನಂತರ ಮಸೀದಿಯ ಜಾಗದಲ್ಲಿ ತಲೆಯೆತ್ತಿದ ರಾಮಮಂದಿರವು ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದೆ.

​“ರಾಮ” ಎಂಬ ವ್ಯಕ್ತಿತ್ವವು ಪುರಾಣದ ಕಲ್ಪನೆಯೋ ಅಥವಾ ಐತಿಹಾಸ ಪಾತ್ರವೋ ಎಂಬುದು ಇನ್ನೂ ಇತ್ಯರ್ಥಗೊಂಡಿಲ್ಲ. ಕ್ರಿ.ಪೂ. ಏಳು ಸಾವಿರ ವರ್ಷಗಳ ಇತಿಹಾಸವಾಗಿದ್ದರೆ (ಇದು ಅತ್ಯಂತ ಪ್ರಾಚೀನವಾದ ಲಭ್ಯ ಇತಿಹಾಸ) ಅಲ್ಲಿ ಹತ್ತು ತಲೆಯ ರಾವಣ ಹನುಮಂತ, ಶೂರ್ಪನಖಿಯ ಅಸ್ತಿತ್ವವಿರಲು ಸಾಧ್ಯವೇ ಇಲ್ಲ. ವಾಸ್ತವದಲ್ಲಿ ರಾಮಮಂದಿರದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಹೀಗಿದ್ದರೂ ಉದ್ಘಾಟನೆಗಾಗಿ ಬಿಜೆಪಿ ಮತ್ತು ಸಂಘಪರಿವಾರ ಆತುರಪಡುತ್ತಿರುವುದು ಈ ವರ್ಷ ನಡೆಯಲಿರುವ ಮುಂದಿನ ಲೋಕಸಭಾ ಚುನಾವಣೆಯ ಏಕಮಾತ್ರ‍್ರ ಉದ್ದೇಶದಿಂದ ಮಾತ್ರವಾಗಿದೆಯೆಂದು ಪ್ರಜ್ಞಾವಂತರೆಲ್ಲ ಬಲ್ಲರು.

ಗುಜಾರಾತ್‌ನಲ್ಲಿ ಮುಸ್ಲಿಮರ ಮಾರಣಹೋಮವನ್ನು ಚಿಮ್ಮುಹಲಗೆಯಾಗಿ ಬಳಸಿಕೊಂದು ಪ್ರಧಾನಿ ಸ್ಥಾನಕ್ಕೆ ಬಂದು ಮುಟ್ಟಿದ ಮೋದಿ ಮತ್ತು ಅವರ ಗ್ಯಾಂಗ್ ಪ್ರತಿಯೊಂದು ಚುನಾವಣೆ ಹತ್ತಿರ ಬರುವಾಗ ಬಹುಸಂಖ್ಯಾತರನ್ನು ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರಕ್ಕೇರುವುದನ್ನು ರೂಢಿಮಾಡಿಕೊಂಡು ಬಿಟ್ಟಿದೆ.
​ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವು ಈಗ ರಾಮ ಕೇಂದ್ರಿಕೃತವಾಗಿದೆ. ಮೋದಿ ಕೇಂದ್ರಿಕೃತವಾಗಿದೆ. ಸಂಘಪರಿವಾರದ ಮನದಲ್ಲಿ ಮೋದಿ ರಾಮನಿಗಿಂತಲೂ ದೊಡ್ಡ ವಿಗ್ರಹವಾಗಿ ಪ್ರತಿಷ್ಟಾಪನೆಗೊಂಡಿರುವುದರಿಂದ ಪ್ರಸ್ತುತ ಕಾರ್ಯಕ್ರಮವು ಸಂಪೂರ್ಣವಾಗಿ ಬಿಜೆಪಿ ಮತ್ತು ಅರ್‌ಎಸ್ಎಸ್‌ನ ರಾಜಕೀಯ ಯೋಜನೆಯಾಗಿ ಮಾರ್ಪಟ್ಟಿದೆ. ಮಹಾತ್ಮಗಾಂಧಿಯವರು ಕೊನೆಯ ಉಸಿರಿನಲ್ಲಿ ಜಪಿಸಿದ ರಾಮನಾಮಕ್ಕೂ ಸಂಘಪರಿವಾರದ ಘೋಷಣೆಯ ರಾಮನಾಮಕ್ಕೂ ನಡುವೆ ಇರುವ ಅಜಗಜಾಂತರದ ವ್ಯತ್ಯಾಸವನ್ನು ನಾವು ಗಮನಿಸಬೇಕಾಗಿದೆ. ಗಾಂಧಿಯದ್ದು ಆಧ್ಯಾತ್ಮಿಕ ರಾಮನಾದರೆ. ಸಂಘಪರಿವಾರದ್ದು ರಾಜಕೀಯ ರಾಮನಾಗಿದ್ದಾನೆ.!

​ವಿಚಿತ್ರವೆಂದರೆ ರಾಮಮಂದಿರದ ನಿರ್ಮಾಣಕ್ಕಾಗಿ ದೊಡ್ಡ ಹೋರಾಟವನ್ನು ರಾಷ್ಟ್ರಾದ್ಯಾಂತ ರಕ್ತದ ಹೊಳೆಯನ್ನೆಹರಿಸಿದ ಅಡ್ವಾಣಿ, ಜೋಷಿ, ಕಟಿಯಾರ್, ಉಮಾಭಾರತಿ, ತೊಗಾಡಿಯಾ ಮುಂತಾದ ಹಿಂದೂ ಹುಲಿಗಳು ಮೋದಿಯ ಹಠಾತ್ ದಾಳಿಯಿಂದ ತತ್ತರಿಸಿ ನೇಪಥ್ಯಕ್ಕೆ ಸರಿದು ತಮಗಾದ ​ ಗಾಯವನ್ನು ನೆಕ್ಕಿಕೊಳ್ಳುತ್ತಾ ಹಲ್ಲು ಮಸೆದುಕೊಳ್ಳುತ್ತಿದ್ದಾರೋ ಏನೋ.?
​ಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೋ.. ಬೇಡವೋ ಎಂದು ಅಳೆದು ತೂಗಿ ನೋಡಿ ಕೊನೆಗೆ ಘಳಿಗೆಯಲ್ಲಿ ಅದು ಸಂಘ ಪರಿವಾರ ಕಾರ್ಯಕ್ರಮವಾದ್ದರಿಂದ ಪಾಲ್ಗೊಳ್ಳದಿರಲು ನಿರ್ಧರಿಸುವ ಮೂಲಕ ಉಭಯ ಕಮ್ಯುನಿಸ್ಟ್ ಪಕ್ಷಗಳ ನಿಲುವನ್ನು ಅನುಗಮಿಸಿದ ಕಾಂಗ್ರೆಸ್ ಪಕ್ಷವು ಅಷ್ಟರಮಟ್ಟಿಗಾದರೂ ದೇಶದ ಜಾತ್ಯತೀತ ಮೌಲ್ಯಕ್ಕೆ ಬದ್ಧವಾಗಿರುವುದಕ್ಕಾಗಿ ನಾವು ಅಭಿನಂದಿಸೋಣ.

​ಹಿಂದೂಗಳ ಮಟ್ಟಿಗೆ ಅಯೋಧ್ಯೆಯ ರಾಮಮಂದಿರವು ಮುಸ್ಲಿಮರ ಮೆಕ್ಕಾ ಮತ್ತು ಕೈಸ್ತರ ವ್ಯಾಟಿಕನ್‌ನಂತಾಗಿರಬೇಕು ಸರಿ. ಆದರೆ ಆದಿವಾಸಿ ದಲಿತ ಸಮುದಾಯಕ್ಕೆ ಪೂಜೆಯ ಸಲುವಾಗಿ ಮಂದಿರದ ಗರ್ಭಗುಡಿಯೊಳಗೆ ಪ್ರವೇಶಾನುಮತಿ ನೀಡಿ ಆ ಕನಸನ್ನು ಸಾಕಾರಗೊಳಿಸಲು ಸಂಘಪರಿವಾರ ಬ್ರಾಹ್ಮಣಗಾಹಿ ಅವಕಾಶ ನೀಡಲಿ ಎಂದು ನಾವು ಹಾರೈಸೋಣ.