ಲಿಂಗ ಬದಲಾವಣೆಗೆ ಒಳಗಾಗಿ ಸುದ್ದಿಯಾಗಿದ್ದ ಪೊಲೀಸ್ ಪೇದೆ ಇದೀಗ ಗಂಡು ಮಗುವಿನ ತಂದೆ

ರಾಷ್ಟ್ರೀಯ

ಮುಂಬೈ: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೊಳಗಾಗಿ ಸುದ್ದಿಯಾಗಿದ್ದ ಮುಂಬೈನ ಪೊಲೀಸ್‌ ಪೇದೆಯೊಬ್ಬರು ಇದೀಗ ತಮ್ಮ ಜೀವನದ ಅತ್ಯಂತ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಮಹಿಳೆಯಿಂದ ಪುರುಷನಾಗಿ ಬದಲಾಗಿದ್ದ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಲಲಿತ್ ಸಾಳ್ವೆ ಮಗುವಿಗೆ ತಂದೆಯಾಗಿದ್ದಾರೆ. 36 ವರ್ಷದ ಲಲೀತ್ ಸಾಳ್ವೆ 2018 ರಿಂದ 2020ರಲ್ಲಿ ಮೂರು ಬಾರಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು , ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಈ ಲಿಂಗ ಬದಲಾವಣೆಗೆ ಒಳಗಾಗಿದ್ದ ಅವರು ಭಾರಿ ಚರ್ಚೆಗೆ ಕಾರಣರಾಗಿದ್ದರು.

ತದ ನಂತರ 2020 ರಲ್ಲಿ ಯುವತಿಯೊಬ್ಬರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನ ಆರಂಭಿಸಿದ್ದರು. ಈಗ ಒಂದು ಗಂಡು ಮಗುವಿಗೆ ತಂದೆಯಾಗಿದ್ದು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಹೆಣ್ಣಿನಿಂದ ಗಂಡಾಗಿ ಬದಲಾಗುವ ನನ್ನ ಪ್ರಯಾಣ ತುಂಬಾ ಕಷ್ಟಕರವಾಗಿತ್ತು ಆ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತವರನ್ನು ನಾನು ಸದಾ ಸ್ಮರಿಸುತ್ತೇನೆ , ಮದುವೆಯ ಬಳಿಕ ನನ್ನ ಹೆಂಡತಿ ಸೀಮಾ ಮಗುವಿನ ಬಗ್ಗೆ ಆಶಯ ವ್ಯಕ್ತಪಡಿಸಿದ್ದರು. ಈಗ ನಾವು ತಂದೆ ತಾಯಿಗಳಾಗಿದ್ದೇವೆ ಎಂದು ಮುಂಬೈ ಪೊಲೀಸ್ ಪೇದೆ ಸಾಳ್ವೆ ಹೇಳಿದ್ದಾರೆ.