ಕರಾವಳಿಯಲ್ಲಿ ಮತ್ತೆ,ಮತ್ತೆ ಅನೈತಿಕ ಪೊಲೀಸ್ ಗಿರಿ: ಆಂಟಿ ಕಮ್ಯೂನಲ್ ವಿಂಗ್ ನಾಮಕಾವಸ್ಥೆ

ಕರಾವಳಿ

ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ಅಂತ್ಯಗೊಂಡು ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿ, ಅಧಿಕಾರದ ಚುಕ್ಕಾಣಿ ಹಿಡಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಖಡಕ್ ಸಂದೇಶವೊಂದನ್ನು ರವಾನಿಸಿದ್ದರು. “ಇನ್ಮುಂದೆ ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿ ಇರಲ್ಲ ಅದಕ್ಕೆ ನಾವು ಅಂತ್ಯ ಹಾಡುತ್ತೇವೆ” ಎಂದರು.
ಗೃಹ ಸಚಿವರಾಗಿ ಮಂಗಳೂರಿಗೆ ಪ್ರಥಮ ಭೇಟಿ ಇತ್ತ ಡಾ.ಜಿ. ಪರಮೇಶ್ವರ್ ಜೂನ್ 6 ರಂದು ಪಶ್ಚಿಮ ವಲಯ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ನ ಪ್ರಗತಿ ಪರಿಶೀಲನೆ ಸಭೆ ನಡೆಸಿ ಪ್ರಚೋದನಕಾರಿ ಭಾಷಣ, ಕೋಮು ವೈಷಮ್ಯ ಘಟನೆ, ಸಾಮಾಜಿಕ ತಾಣಗಳ ದುರ್ಬಳಕೆ ಹಾಗೂ ಅನೈತಿಕ ಪೊಲೀಸ್ ಗಿರಿ ನಿಯಂತ್ರಣಕ್ಕೆ ಪ್ರತ್ಯೇಕ ಕೋಮು ವಿರೋಧಿ ವಿಭಾಗ (ಆಂಟಿ ಕಮ್ಯೂನಲ್ ವಿಂಗ್) ಸ್ಥಾಪನೆ ಘೋಷ‌ಣೆ ಮಾಡಿದ್ದು, ಆದರೆ ಅದು ಇದೀಗ ಕೇವಲ ನಾಮ್ ಕಾ ವಸ್ತೆಗೆ ಮಾತ್ರ ಸೀಮಿತವಾಗಿ ಬಿಟ್ಟಿದೆ.

ಕರಾವಳಿಯಲ್ಲಿ ಅನೈತಿಕ ಪೊಲೀಸ್ ಗಿರಿ ಗೆ ನಿಯಂತ್ರಣವೇ ಇಲ್ಲದಂತಾಗಿದೆ. ಕರಾವಳಿಯನ್ನು ಬಹುತೇಕ ಅನೈತಿಕ ಪೊಲೀಸ್ ಗಿರಿ ನಿಯಂತ್ರಿಸುವಂತೆ ತೋರುತ್ತಿದೆ. ಮೂಡುಬಿದಿರೆಯಲ್ಲಿ ಅನ್ಯಕೋಮಿನ ಸಹಪಾಠಿ ಜೊತೆ ಮಾತನಾಡಿದ್ದ ಎನ್ ಎಸ್ ಯು ಐ ಅಧ್ಯಕ್ಷ ನ ಮೇಲೆಯೇ ಅನೈತಿಕ ಪೊಲೀಸ್ ಗಿರಿ ನಡೆದಿತ್ತು. ಮಂಗಳೂರು, ಕಾಪುವಿನಲ್ಲೂ ಅನೈತಿಕ ಪೊಲೀಸ್ ಗಿರಿ ನಡೆದಿತ್ತು. ಸುಳ್ಯದಲ್ಲಿ ಅನ್ಯಕೋಮಿನ ಗೆಳತಿಗೆ ನೆರವಾದ ಕಾರಣಕ್ಕೆ, ಕಾರ್ಕಳದಲ್ಲಿ ವೈದ್ಯರ ಮೇಲೆಯೇ ಅನೈತಿಕ ಪೊಲೀಸ್ ಗೂಂಡಾಗಳು ತಮ್ಮ ದರ್ಪ ಪ್ರದರ್ಶಿಸಿದ್ದರು. ಇನ್ನು ಬಂಟ್ವಾಳದಲ್ಲಿ ಕಾನ್ ಸ್ಟೇಬಲ್ ಮತ್ತು ಅವರ ಪತ್ನಿಯ ಮೇಲೆಯೇ ಹಲ್ಲೆಗೆ ಯತ್ನ ನಡೆಸಿದ್ದರು. ಕಾವೂರಿನಲ್ಲಿ ಪತ್ರಕರ್ತನ ತಡೆದು ವಿಚಾರಣೆ, ಪಣಂಬೂರು ಬೀಚ್, ಸೋಮೇಶ್ವರ ಬೀಚ್ ನಲ್ಲಿ ವಿದ್ಯಾರ್ಥಿ ಗಳ ಮೇಲೆಯೇ ಅನೈತಿಕ ಪೊಲೀಸ್ ಗಿರಿ ನಡೆದಿತ್ತು. ಕಳೆದ 6 ತಿಂಗಳ ಅವಧಿಯಲ್ಲಿ ಕರಾವಳಿಯಲ್ಲಿ ಅನೈತಿಕ ಪೊಲೀಸ್ ಗಿರಿ ಯ 18 ಕ್ಕೂ ಅಧಿಕ ಪ್ರಕರಣಗಳು ನಡೆದಿದೆ.ಇನ್ನು ಪೊಲೀಸರಿಗೆ ದೂರು ಕೊಡದ ಹಲವಾರು ಪ್ರಕರಣಗಳು ನಡೆದಿರುವ ಸಾಧ್ಯತೆಗಳಿವೆ.

ಕೆಲವು ದಿನಗಳ ಹಿಂದೆ ಧರ್ಮಸ್ಥಳದಲ್ಲೂ ಅನೈತಿಕ ಪೊಲೀಸ್ ಗಿರಿ ನಡೆದ ಪ್ರಕರಣ ವರದಿಯಾಗಿತ್ತು. ದಿನಗಳ ಹಿಂದೆ ಕದ್ರಿ ಪಾರ್ಕ್ ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆಯೇ ಅನೈತಿಕ ಪೊಲೀಸ್ ಗಿರಿ ನಡೆದಿರುವ ಪ್ರಕರಣ ನಡೆದಿದ್ದು, ಗೂಂಡಾಗಳು ಪೊಲೀಸ್ ಠಾಣೆಯ ಸನಿಹದಲ್ಲೇ ಇಂತಹ ಕೃತ್ಯ ನಡೆಸಿದ್ದರು. ಪೊಲೀಸ್ ಇಲಾಖೆಯ ಭಯ ಕೋಮು ವಿಛಿದ್ರ ಶಕ್ತಿಗಳಿಗೆ ಇಲ್ಲದೆ ಇರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗುತ್ತಿದೆ‌. ಕದ್ರಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಪ್ರಾಪ್ತ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳಾದ ಬಂಟ್ವಾಳ ನಿವಾಸಿಗಳಾದ ನಿತಿನ್ ಹರ್ಷ ಸೇರಿದಂತೆ ಪೆರ್ಮುದೆಯ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನೊಬ್ಬನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತೂರಿನ ಕಾಲೇಜಿನಲ್ಲಿ ಜರ್ನಲಿಸಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಅಖಿಲ್ ಚಾಕೋ ಹಾಗೂ ದೇರಳಕಟ್ಟೆಯ ಕಾಲೇಜೊಂದರಲ್ಲಿ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ತಂಡವೊಂದು ಅನೈತಿಕ ಪೊಲೀಸ್ ಗಿರಿ ನಡೆಸಿದೆ. ದೇರಳಕಟ್ಟೆಯಿಂದ ಈ ಜೋಡಿ ಬಸ್ ನಲ್ಲಿ ಆಗಮಿಸಿ ಜ್ಯೋತಿಯಲ್ಲಿ ಇಳಿದಿದೆ. ಬಸ್ ನಲ್ಲಿದ್ದಾಗಲೇ ಹಿಂಬಾಲಿಸಿಕೊಂಡು ಬಂದ ಐದಾರು ಮಂದಿಯ ಯುವಕರ ತಂಡ ಇವರು ಕದ್ರಿ ಪಾರ್ಕ್ ಗೆ ಬರುತ್ತಿದ್ದಾಗ ಪಾರ್ಕ್ ರಸ್ತೆಯಲ್ಲೇ ತಡೆದು ಅನೈತಿಕ ಪೊಲೀಸ್ ಗಿರಿ ನಡೆಸಿದೆ. ಕದ್ರಿ ಪಾರ್ಕ್ ರಸ್ತೆಯಲ್ಲಿ ಜೋಡಿಯನ್ನು ತಡೆದು ವಿಚಾರಿಸಿದ ಯುವಕರ ತಂಡ ಹಲ್ಲೆಗೆತ್ನಿಸಿದೆ. ಈ ವೇಳೆ ಜೋಡಿ ರಿಕ್ಷಾದಲ್ಲಿ ಹೋಗಲು ಯತ್ನಿಸಿದಾಗ ಮತ್ತೆ ತಂಡ ಅವರನ್ನು ಎಳೆದಾಡಿದೆ. ಆಗ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಠಾಣಾ ಪಿಎಸ್ಐ ಉಮೇಶ್ ಕುಮಾರ್ ಹಾಗೂ ತಂಡ ಘಟನೆ ನಡೆದ ಐದೇ ನಿಮಿಷಕ್ಕೆ ಸ್ಥಳಕ್ಕೆ ದೌಢಾಯಿಸಿದೆ‌. ವಿದ್ಯಾರ್ಥಿಗಳಿಬ್ಬರನ್ನು ರಕ್ಷಿಸಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರಾವಳಿಯಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳು, ಸಹೋದ್ಯೋಗಿ ಜೊತೆ ಒಟ್ಟಿಗೆ ಸಂಚರಿಸುವುದು, ಊಟ ಮಾಡುವುದು ಅಪರಾಧ ಎಂಬಂತೆ ಬಿಂಬಿತವಾಗಿದೆ. ಅಂತಹವರ ಮೇಲೆಯೇ ಅನೈತಿಕ ಪೊಲೀಸ್ ಗಿರಿ ಗೂಂಡಾಗಿರಿ ನಡೆಯುತ್ತಿದೆ. ಕರಾವಳಿಯ ಅಭಿವೃದ್ಧಿಗೆ ಮಾರಕವಾದ ಅನೈತಿಕ ಪೊಲೀಸ್ ಗಿರಿ ಗೆ ಅಂಕುಶ ಹಾಕಲು ಆಂಟಿ ಕಮ್ಯೂನಲ್ ವಿಂಗ್ ಸ್ಥಾಪನೆ ಮಾಡಲಾಗಿತ್ತು. ಆದರೆ ಅದು ಇದೀಗ ಸದ್ದಿಲ್ಲದೆ ಮಲಗಿದೆ. ಘೋಷಣೆಗೆ ಮಾತ್ರ ಸೀಮಿತವಾಗಿದೆ. ಸರ್ಕಾರಕ್ಕೆ ಅನೈತಿಕ ಪೊಲೀಸ್ ಗಿರಿಯನ್ನು ಮಟ್ಟ ಹಾಕುವ ಬಗ್ಗೆ ಧೃಡವಾದ ಸಂಕಲ್ಪ ಇರದೆ ಇರುವುದು ಅನೈತಿಕ ಗೂಂಡಾಗಳು ವಿಜೃಂಭಿಸಲು ಮುಖ್ಯ ಕಾರಣವಾಗಿದೆ.