ಪೋಕ್ಸೊ ಪ್ರಕರಣದ ಆರೋಪಿಗೆ ಸಹಾಯ ಮಾಡುವ ವಾಗ್ದಾನ ನೀಡಿ, ಲಂಚ ಪಡೆಯುತ್ತಿದ್ದ ದಾವಣಗೆರೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಿತ್ತೂರು ಗ್ರಾಮದ ಜಿ.ಟಿ. ಮದನ ಕುಮಾರ್ ವಿರುದ್ಧ 2021ರಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೇಖಾ ಅವರು ಒಟ್ಟು ₹ 3 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಪೈಕಿ ಈ ಮೊದಲೇ ₹ 1.13 ಲಕ್ಷ ಪಡೆದಿದ್ದರು. ಉಳಿದ ₹ 1.87 ಲಕ್ಷ ಹಣ ನೀಡುವಂತೆ ದುಂಬಾಲು ಬಿದ್ದಿದ್ದರಲ್ಲದೆ, ಖಾತರಿಗಾಗಿ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದರು.
ರೇಖಾ ಅವರು ದಾವಣಗೆರೆಯ ತಮ್ಮ ನಿವಾಸದಲ್ಲಿ ₹ 1.87 ಲಕ್ಷ ಹಾಗೂ ಖಾತ್ರಿಗೋಸ್ಕರ ಪಡೆದ ಚೆಕ್ ಅನ್ನು ವಾಪಸ್ ನೀಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಹಣದೊಂದಿಗೆ ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ದಾವಣಗೆರೆ ಲೋಕಾಯುಕ್ತ ಘಟಕದ ಎಸ್ಪಿ ಎಂ.ಎಸ್. ಕೌಲಾಪುರೆ, ಪೊಲೀಸ್ ಇನ್ಸ್ಪೆಕ್ಟರ್ ಆಂಜನೇಯ ಎನ್.ಎಚ್ ನೇತೃತ್ವದಲ್ಲಿ ದಾಳಿ ನಡೆದಿತ್ತು.
