ಶಾಲಾ-ಕಾಲೇಜು,ತ್ಯಾಜ್ಯ ವಿಲೇವಾರಿ, ಕಂದಾಯ ಮತ್ತು ಆರೋಗ್ಯ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಹೊಸ ಪಿಂಚಣಿ ನೀತಿ ರದ್ದತಿಗೆ ಆಗ್ರಹಿಸಿ 5.11 ಲಕ್ಷ ನೌಕರರು ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಧುಮುಕಲಿದ್ದಾರೆ. ಶಾಲಾ–ಕಾಲೇಜು, ತ್ಯಾಜ್ಯ ವಿಲೇವಾರಿ, ಕಂದಾಯ ಮತ್ತು ಆರೋಗ್ಯ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಗ್ರಾಮ ಪಂಚಾಯಿತಿ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಯಂ ಪೌರ ಕಾರ್ಮಿಕರು,ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಗ್ರಾಮ ಲೆಕ್ಕಿಗರಿಂದ ಹೆಚ್ಚುವರಿ ಜಿಲ್ಲಾಧಿಕಾರಿವರೆಗಿನ ಅಧಿಕಾರಿ, ಸಿಬ್ಬಂದಿ ಕೆಲಸಕ್ಕೆ ಗೈರುಹಾಜರಾಗುತ್ತಿದ್ದು, ಬಹುತೇಕ ಎಲ್ಲ ಸೇವೆಗಳಲ್ಲೂ ವ್ಯತ್ಯಯವಾಗಲಿದೆ.
ಕರ್ನಾಟಕ ಸಚಿವಾಲಯ ನೌಕರರ ಸಂಘ, ಅರಣ್ಯ ಇಲಾಖೆಯ ನೌಕರರು, ವಿವಿಧ ನಿಗಮ ಮಂಡಳಿಗಳ ನೌಕರರೂ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿನ ವಾಹನಗಳ ನೋಂದಣಿ, ಪರವಾನಗಿ ವಿತರಣೆ ಕಾರ್ಯಗಳೂ
ಸ್ಥಗಿತಗೊಳ್ಳಲಿವೆ.
ತುರ್ತು ಚಿಕಿತ್ಸೆ, ಸಾರಿಗೆ ಸೇವೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ, ಒಳರೋಗಿಗಳ ಆರೈಕೆಯ ಸೇವೆಗಳು ಎಂದಿನಂತೆ ದೊರಕಲಿವೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿಯನ್ನು ಮಾ.1ರಿಂದಲೇ ನಡೆಸಲಿದ್ದಾರೆ. ಆದರೆ, ಬಸ್‌ಗಳು ಎಂದಿನಂತೆ ಸಂಚರಿಸಲಿವೆ.ವಿಶ್ವವಿದ್ಯಾಲಯಗಳಲ್ಲಿ ನಿತ್ಯದಂತೆ ಪಾಠಗಳು ನಡೆಯಲಿವೆ. ಕಸ ಸಂಗ್ರಹಣೆಯಲ್ಲೂ ವ್ಯತ್ಯಯ.ಗ್ರಾಮ ಪಂಚಾಯಿತಿ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಂ ಪೌರ ಕಾರ್ಮಿಕರೂ ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ರಾಜ್ಯದ ನಗರ, ಗ್ರಾಮಗಳಲ್ಲಿ ಕಸ ಸಂಗ್ರಹಣೆ, ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ.
ಶಾಲಾ, ಕಾಲೇಜುಗಳು ಬಂದ್
ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಕೆಲಸಕ್ಕೆ ಗೈರುಹಾಜರಾಗುತ್ತಿದ್ದಾರೆ. ಹಾಗಾಗಿ, ಪ್ರಾಥಮಿಕ ಶಾಲೆಗಳಿಂದ ಪದವಿ ಕಾಲೇಜುಗಳವರೆಗೂ ತರಗತಿಗಳು ನಡೆಯುವುದಿಲ್ಲ.
ಮಾರ್ಚ್ 1ರ ಬಳಿಕ ನಡೆಯಬೇಕಿದ್ದ ಶಾಲಾ, ಕಾಲೇಜು ಹಂತದ ಎಲ್ಲ ಪರೀಕ್ಷೆಗಳನ್ನೂ ಮುಂದೂಡುವ ಸಂಭವ ಇದೆ. ಹೊರ ರೋಗಿಗಳ ಸೇವೆ ಅಲಭ್ಯಒಳರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ವಿಭಾಗ ಸಂಪೂರ್ಣ ಬಂದ್ ಆಗಲಿವೆ. ಐಸಿಯು ಮತ್ತಿತರ ತುರ್ತುಚಿಕಿತ್ಸಾ ಘಟಕಗಳ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವರು. ಆಸ್ತಿ ನೋಂದಣಿಯೂ ಸ್ಥಗಿತ
ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಇರುವುದಿಲ್ಲ. ಇದರಿಂದ ಸರ್ಕಾರಕ್ಕೆ ಸಾಕಷ್ಟು ವರಮಾನ ಖೋತಾ ಆಗುವ ಸಾಧ್ಯತೆ ಇದೆ.
ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಪಂಚಾಯಿತಿಯ ಸೇವೆಗಳು ಜನರಿಗೆ ದೊರಕುವುದಿಲ್ಲ. ಜಾತಿ, ಆದಾಯ ಪ್ರಮಾಣ ಪತ್ರಗಳ ಸೇವೆ ಸೇರಿದಂತೆ ಕಂದಾಯ ಇಲಾಖೆಯ ಬಹುತೇಕ ಸೇವೆಗಳು ಸ್ಥಗಿತವಾಗಲಿವೆ. ಏಳನೇ ವೇತನ ಆಯೋಗ ಈಚೆಗೆ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು, ಇಲಾಖೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಅಹವಾಲು ಸಲ್ಲಿಕೆಯ ಅವಧಿ ಇದೇ 28ಕ್ಕೆ ಕೊನೆಗೊಳ್ಳಲಿದೆ. ಮರು ದಿನದಿಂದಲೇ ನೌಕರರ ಮುಷ್ಕರ ಆರಂಭವಾಗುತ್ತಿದೆ.
