ಇದು ಯಾರ ದರ್ಗಾ.? ಈ ದರ್ಗಾ ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ; ರಾಜ್ ಠಾಕ್ರೆ

ರಾಷ್ಟ್ರೀಯ

ರಾಜ್ ಠಾಕ್ರೆ ವಾರ್ನಿಂಗ್ ನೀಡಿದ 24 ಗಂಟೆಯೊಳಗೆ ದರ್ಗಾ ಕೆಡವಿದ ಮುಂಬೈ ಪೊಲೀಸ್

ಮುಂಬೈನ ಮಾಹಿಮ್ ಸಮುದ್ರದಲ್ಲಿ ಅಕ್ರಮ ದರ್ಗಾ ಕಟ್ಟಲಾಗಿದೆ.ಈ ದರ್ಗಾವನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಗುಡಿ ಪಾಡ್ವಾ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ, ಮುಂಬೈನ ಮಾಹಿಮ್ ಸಮುದ್ರದಲ್ಲಿ ಒಂದು ದರ್ಗಾ ಕಾಣಿಸುತ್ತಿದೆ. ಇದು ಯಾರ ದರ್ಗಾ.? ಇದು ಮೀನಿನದ್ದೇ.? ಇದು ಒಂದೆರಡು ವರ್ಷಗಳ ಹಿಂದೆ ಇರಲಿಲ್ಲ. ಅಕ್ರಮ ನಿರ್ಮಾಣವನ್ನು ತಕ್ಷಣವೇ ನೆಲಸಮ ಮಾಡದಿದ್ದರೆ, ಅದೇ ಸ್ಥಳದಲ್ಲಿ ಬೃಹತ್ ಗಣಪತಿ ದೇವಸ್ಥಾನವನ್ನು ನಾವು ನಿರ್ಮಿಸುತ್ತೇವೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.ಮಾಹಿಮ್‌ನಲ್ಲಿರುವ ಮಖ್ದುಮ್ ಬಾಬಾ ಅವರ ದರ್ಗಾದ ಬಳಿ ಈ ಅಕ್ರಮ ದರ್ಗಾ ಇದೆ. ನಾನು ದೇಶದ ಸಂವಿಧಾನವನ್ನು ಪಾಲಿಸುವ ಮುಸ್ಲಿಮರನ್ನು ಕೇಳಲು ಬಯಸುತ್ತೇನೆ: ನೀವು ಇದನ್ನು ಒಪ್ಪುತ್ತೀರಾ? ನಾನು ಫ್ಲೆಕ್ಸ್ ಮಾಡಲು ಬಯಸುವುದಿಲ್ಲ, ಆದರೆ ಅಗತ್ಯವಿದ್ದಾಗ ನಾನು ಅದನ್ನು ಮಾಡುತ್ತೇನೆ” ಎಂದು ರಾಜ್ ಠಾಕ್ರೆ ಹೇಳಿದರು.

ಕಂದಾಯ ಇಲಾಖೆಯ ಭೂಮಿಯಲ್ಲಿ ಅಕ್ರಮವಾಗಿ ದರ್ಗಾ ನಿರ್ಮಿಸಲಾಗಿದ್ದು ಅದರ ಸುತ್ತಲಿನ ಪ್ರದೇಶವನ್ನು ಅತಿಕ್ರಮಣ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಮತ್ತು ಮುಂಬೈ ಪೊಲೀಸರ ಸಹಾಯದಿಂದ ಆರು ಸದಸ್ಯರ ತಂಡವನ್ನು ಅದನ್ನು ಕೆಡವಲು ರಚಿಸಲಾಗಿದೆ ಎಂದು ಮುಂಬೈ ಸಿಟಿ ರೆಸಿಡೆಂಟ್ ಕಲಕ್ಟರ್ ಸದಾನಂದ ಜಾಧವ್ ತಿಳಿಸಿದ್ದಾರೆ.

ಇವರು ಎಚ್ಚರಿಕೆ ನೀಡಿದ 24 ಗಂಟೆಗೊಳಗಾಗಿ ದರ್ಗಾ ಹಾಗೂ ದರ್ಗಾ ಅತಿಕ್ರಮಿತ ಸ್ಥಳವನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಧ್ವಂಸ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್, ಈಗ ಬಾಳಾ ಸಾಹೇಬ್ ಠಾಕ್ರೆ ಅವರ ಹಾದಿಯಲ್ಲಿ ನಡೆಯುವ ಸರ್ಕಾರವಿದೆ. ಈ ಹಿಂದೆ ಬಾಳಾ ಸಾಹೇಬ್ ಠಾಕ್ರೆ ಪ್ರಸ್ತಾಪಿಸಿದ ವಿಷಯವನ್ನು ರಾಜ್ ಠಾಕ್ರೆ ಈಗ ಪ್ರಸ್ತಾಪಿಸಿದ್ದರು. ಕರಾವಳಿ ನಿಯಂತ್ರಣ ವಲಯ (CRZ) ಅಡಿಯಲ್ಲಿ ಧ್ವಂಸ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ಸಮುದ್ರದಲ್ಲಿ ಯಾವುದೇ ರೀತಿಯ ನಿರ್ಮಾಣವನ್ನು ಮಾಡಬೇಕಾದರೆ ಸಿಆರ್ ಜೆಡ್ ಅಡಿಯಲ್ಲಿ ಅನುಮತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.