ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಮೊಹಲ್ಲಾಗಳ ಆಡಳಿತ ಸಮಿತಿಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿ ಗೊಂದಲಗಳನ್ನು ಮುಂದುವರಿಸುತ್ತಿರುವ ಹಾಗೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ವಕ್ಫ್ ಮಂಡಳಿಯ ತಾರತಮ್ಯ ನೀತಿಯನ್ನು ಖಂಡಿಸಿ ಜನಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಮಟ್ಟದ ವಕ್ಫ್ ಸಂರಕ್ಷಣಾ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ.ವಕ್ಫ್ ನಡೆಯಿಂದ ಕಂಗೆಟ್ಟಿರುವ ಸಂತ್ರಸ್ತ ಮೊಹಲ್ಲಾಗಳ ಪ್ರಮುಖ ಗಣ್ಯರು ಆದಿತ್ಯವಾರ ಬಿಸಿರೋಡ್‌ನಲ್ಲಿ ಸಭೆ ಸೇರಿ ಈ ನಿರ್ಧಾರಕ್ಕೆ ಬರಲಾಗಿದೆ.
ನಿರ್ದಿಷ್ಟ ಸಂಘಟನೆಯ ಹಿತೈಷಿಗಳೇ ಬಹುಸಂಖ್ಯಾತರಾಗಿರುವ ಮೊಹಲ್ಲಾಗಳನ್ನು ಗುರಿಯಾಗಿಸಿ, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 7-8 ಮಸೀದಿಗಳ ಆಡಳಿತ ಸಮಿತಿಗಳನ್ನು ವಿನಾಃ ಕಾರಣಕ್ಕೆ ಬರ್ಖಾಸ್ತುಗೊಳಿಸಿ, ಕೇರ್ ಟೇಕರ್, ಅಡ್ಮಿನಿಸ್ಟ್ರೇಟರ್‌ಗಳ ಮೂಲಕ ವಕ್ಫ್ ಮಂಡಳಿಯು ಆಡಳಿತ ನಡೆಸುತ್ತಿದ್ದು, ವರ್ಷಗಳು ಕಳೆದರೂ ಸಮಸ್ಯೆಯನ್ನು ಪರಿಹರಿಸದೆ ಹಾಗೂ ಸ್ಥಳಿಯ ಮೊಹಲ್ಲಾ ಪ್ರತಿನಿಧಿಗಳಿಗೆ ಆಡಳಿತವನ್ನು ಹಸ್ತಾಂತರಿಸದೆ ವಿಳಂಬ ಧೋರಣೆಯನ್ನು ಮುಂದುವರಿಸುತ್ತಾ ಬಂದಿದೆ ಎಂದು ಸಂತ್ರಸ್ತ ಮೊಹಲ್ಲಾಗಳ ಪ್ರಮುಖರು ಆರೋಪಿಸಿದ್ದಾರೆ.
ಸಭೆಯಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ, ಪುತ್ತೂರು ತಾಲೂಕಿನ ಮುಂಡೋಳೆ, ಬಂಟ್ವಾಳ ತಾಲೂಕಿನ ಮಂಚಿ-ಕುಕ್ಕಾಜೆ, ಮೂಡುಬಿದಿರೆ ತಾಲೂಕಿನ ಕಾಯರ್‌ಕಟ್ಟ-ಗುಂಡುಕಲ್ಲು, ಬೈಲುಪೇಟೆ, ಮಸೀದಿ ಮೊಹಲ್ಲಾಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಹಾಲಿ ಅಧ್ಯಕ್ಷರು ವಕ್ಫ್ ಮಂಡಳಿಗೆ ಸದಸ್ಯರಾಗಿ ಸೇರ್ಪಡೆಗೊಂಡ ಬಳಿಕ ಇಂತಹ ಸಮಸ್ಯೆಗಳು ಹುಟ್ಟಿಕೊಂಡಿದೆ. ಮದ್ರಸಗಳಲ್ಲಿ ಪಠ್ಯಪುಸ್ತಕ ಬದಲಾವಣೆ ಸೇರಿದಂತೆ ಹಲವು ಗೊಂದಲಗಳಿಗೆ ನಾಂದಿ ಹಾಡಿದ್ದಾರೆ. ಬಿಜೆಪಿ ಸರಕಾರದ ಪ್ರತಿನಿಧಿಯಾಗಿ ವಕ್ಫ್ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡ ಬಳಿಕ ಅದು ಇನ್ನಷ್ಟು ತೀರ್ವತೆ ಪಡೆದುಕೊಂಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ಇವೆಲ್ಲವನ್ನೂ ಸಹಿಸಿಕೊಂಡು ಬಂದಿದ್ದೆವು. ಇದೀಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದ್ದರೂ ಬಿಜೆಪಿ ಅಭ್ಯರ್ಥಿಯಾಗಿರುವ ವಕ್ಫ್ ಅಧ್ಯಕ್ಷರನ್ನು ಅದೇ ಸ್ಥಾನದಲ್ಲಿ ಮುಂದುವರಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲೂ ನ್ಯಾಯ ಸಿಗುವ ಭರವಸೆ ಕಳೆದುಕೊಂಡಿದ್ದು, ವಕ್ಫ್ ಮಂಡಳಿಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದ ವಕ್ಫ್ ಸಂರಕ್ಷಣಾ ಸಮಿತಿಯ ಮುಖಂಡರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.