ರೋಗಿಗಳಿಗೆ ರಕ್ತ ಹೊಂದಿಸುವುದು ದಾಖಲಾದ ಆಸ್ಪತ್ರೆಗಳ (ರಕ್ತ ನಿಧಿ) ಜವಾಬ್ದಾರಿ ಹೊರತು ರೋಗಿಗಳ ಸಂಬಂಧಿಕರದ್ದು ಅಲ್ಲ: ಸಂತೋಷ್ ಬಜಾಲ್, ಡಿವೈಎಪ್ಐ

ಕರಾವಳಿ

ಖಾಸಗೀ ಆಸ್ಪತ್ರೆಗಳ ಆಟಾಟೋಪ ಅತಿಯಾಗಿ ರೋಗಿಗಳು ಮತ್ತು ಅವರ ಮನೆಮಂದಿ ಅನುಭವಿಸುವ ಕಷ್ಟಗಳ ಅರಿವು ಈಗ ಸರ್ವೇ ಸಾಮಾನ್ಯ. ಮತ್ತು ಖಾಸಗೀ ಆಸ್ಪತ್ರೆಗಳ ದುಬಾರಿ ಬಿಲ್ಲು, ತಪ್ಪಾದ ಚಿಕಿತ್ಸಾ ಕ್ರಮಗಳ ಅನುಭವ ಬಹುತೇಕರಿಗೆ ಕೊರೋನಾ ಕಾಲದಲ್ಲಿ ಮತ್ತು ಈಗೀಗ ಸ್ವತಃ ಅನುಭವಕ್ಕೆ ಬಂದಿರುತ್ತದೆ. ಆದರೆ ಅವುಗಳ ನಡುವೆ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಹೊಂದಿಸುವುದು ಮಾತ್ರ ನಮ್ಮದೇ ಜವಾಬ್ದಾರಿಯೆಂದು ರೋಗಿಗಳ ಸಂಬಂಧಿಕರು ಮತ್ತು ನಾವು ಜನಸಾಮಾನ್ಯರು ಅಂದುಕೊಂಡದ್ದಿದೆ. ಹಾಗೆ ಅಂದು ಕೊಂಡಿದ್ದರೆ ಅದು ತಪ್ಪು. ಯಾಕೆಂದರೆ ರಕ್ತಕ್ಕೆ ಸಂಬಂಧಿಸದ ನಿಯಮಗಳು ( BLOOD LAW ) ಹೇಳುತ್ತದೆ. ತುರ್ತು ಸಂದರ್ಭದಲ್ಲಿ ರೋಗಿಗಳ ಶಸ್ತ್ರಚಿಕಿತ್ಸೆಗೆ ರಕ್ತ ಬೇಕಾದಲ್ಲಿ ಅಂತಹ ಅಗತ್ಯ ರಕ್ತಗಳನ್ನು ಹೊಂದಿಸುವುದು ರೋಗಿಗಳ ಮನೆಮಂದಿಯ ಕರ್ತವ್ಯವೂ ಅಲ್ಲ ಜವಾಬ್ದಾರಿಯೂ ಅಲ್ಲ. ಬದಲಾಗಿ ಆಸ್ಪತ್ರೆಗಳು ಅದಕ್ಕೆ ಸಂಪೂರ್ಣ ಜವಾಬ್ದಾರಿ ಮತ್ತು ಅವರೇ ರಕ್ತವನ್ನು ಹೊಂದಿಸುವ ಹೊಣೆಯನ್ನು ಹೊಂದಿರುತ್ತಾರೆ.

ಆಸ್ಪತ್ರೆಗಳು ತಮ್ಮ ರಕ್ತನಿಧಿಗಳಲ್ಲಿ ಅಂತಹ ಅಗತ್ಯ ರಕ್ತ ಒಂದು ವೇಳೆ ಇದ್ದಲ್ಲಿ ರೋಗಿಗಳ ಮನೆಮಂದಿಯಿಂದ ಬದಲಿ ರಕ್ತ ಹೊಂದಿಸಲು ಒತ್ತಾಯಿಸುತ್ತಾರೆ. ಆದರೆ ಆ ರೀತಿ ಒತ್ತಾಯಿಸುವುದು ಸರಿಯಾದ ಕ್ರಮ ಅಲ್ಲ. ತಮ್ಮ ರೋಗಿಗಳಿಗೆ ರಕ್ತ ನಿಧಿಯಿಂದ ನೀಡಿದ ರಕ್ತಕ್ಕೆ ಬದಲಿ ರಕ್ತ ನೀಡಲೇ ಬೇಕೆಂಬ ಒತ್ತಾಯ ನಡೆಸಲು ಅವಕಾಶವಿಲ್ಲ ಕೇವಲ ವಿನಂತಿಸಬಹುದು ಅಷ್ಟೇ ಆದರೆ ಬಹುತೇಕ ಖಾಸಗೀ ಆಸ್ಪತ್ರೆಗಳ ರಕ್ತನಿಧಿಗಳು ರೋಗಿಗಳ ಮನೆಮಂದಿಯನ್ನು ಬದಲಿ ರಕ್ತಕ್ಕಾಗಿ ಒತ್ತಾಯಿಸಲಾಗುತ್ತಿದೆ. ಅದೇ ರೀತಿ ಒಂದು ವೇಳೆ ರೋಗಿಗಳು ದಾಖಲಾಗಿರುವ ಆಸ್ಪತ್ರೆಯ ರಕ್ತ ನಿಧಿಯಲ್ಲಿ ತಮಗೆ ಬೇಕಾದ ರಕ್ತ ಇಲ್ಲದೇ ಹೋದಲ್ಲಿ ಅಂತಹ ರಕ್ತಗಳು ಲಭ್ಯ ವಿರುವ ರಕ್ತನಿಧಿಗಳನ್ನು ಸಂಪರ್ಕಿಸಿ ವಿಚಾರಿಸಿ ರೋಗಿಗಳಿಗೆ ಮನವಿ ಪತ್ರ‌ ಸ್ಯಾಂಪಲ್ ಗಳೊಂದಿಗೆ ಅಲ್ಲಿಂದ ತರಿಸಿಕೊಳ್ಳಬಹುದು. ಆದರೆ ಬಹುತೇಕ ಆಸ್ಪತ್ರೆಗಳು ಹೀಗೆ ಮಾಡುವುದರ ಬದಲಾಗಿ ರೋಗಿಗಳ ಮನೆ ಮಂದಿಗೆ ಒತ್ತಡ ಹಾಕಿ ಎಲ್ಲಿಂದಾದರೂ ಇಂತಹ ಅಗತ್ಯ ರಕ್ತ ಹೊಂದಿಸಿ ಎಂದು ಅವರ ಮೇಲೆ ಹೇರಿ ಅವರನ್ನು ಆತಂಕಕ್ಕೆ ಒಳಗಾಗಿಸುತ್ತಾರೆ. ಪಾಪ ಅಂತಹ ರೋಗಿಗಳು ಸ್ಥಳೀಯರಾದರೆ ಹೇಗಾದರೂ ಗೆಳೆಯರು ಅಥವಾ ರಕ್ತದಾನಿಗಳ ಸಂಪರ್ಕ ಪಡೆದು ಹೊಂದಿಸಲಾಗುತ್ತದೆ.

ಇಲ್ಲಿ ನಿಜವಾದ ಸಮಸ್ಯೆಗೊಳಗಾಗುವುದು ಜನಸಮಾನ್ಯರೊಂದಿಗೆ ಅಂತಹ ಯಾವುದೇ ಸಂಪರ್ಕ ಹೊಂದಿಕೊಳ್ಳದ ಅಥವಾ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದಂತಹ ರೋಗಿಗಳು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇಂತಹವುಗಳು ಒಂದು ಗಂಭೀರ ಸಮಸ್ಯೆಯಾದರೆ ಇನ್ನು ರಕ್ತದ ಹೆಸರಲ್ಲಿ ಪಡೆದುಕೊಳ್ಳುವ ಟೆಸ್ಟಿಂಗ್ ದರ ವಿಪರೀತವಾಗಿ ಏರಿಸಲಾಗಿದೆ. ಅದು ಒಂದೇ ರೀತಿಯ ರಕ್ತಗಳಿಗೆ ವಿಧವಿಧ ದರಗಳನ್ನು ಇವತ್ತು ನಗರದ ವಿವಿಧ ಖಾಸಗೀ ಆಸ್ಪತ್ರೆಗಳ ರಕ್ತನಿಧಿ ಸಂಸ್ಥೆಗಳು ವಿಧಿಸಿದೆ. ಒಟ್ಟು ರೋಗಿಗಳನ್ನು ವಿಪರೀತ ದರ ವಸೂಲಿ ಮಾಡುವ ಮೂಲಕ ಲೂಟಿ ಮಾಡುವ ಖಾಸಗೀ ಆಸ್ಪತ್ರೆಗಳ ಕ್ರಮ ಒಂದೆಡೆಯಾದರೆ, ಇಷ್ಟೋಂದು ವಿಪರೀತ‌ದರ ವಸೂಲಿ ನಡೆಸಿಯೂ ತುರ್ತು ಸಂದರ್ಭದಲ್ಲಿ ಅಗತ್ಯ ರಕ್ತ ಹೊಂದಿಸಲು ರೋಗಿಗಳ ಮನೆಮಂದಿಯನ್ನು ಸತಾಯಿಸುವುದು ಬಹಳ ಆತಂಕಕಾರಿ.

ಖಾಸಗೀ ಮೆಡಿಕಲ್‌ ಆಸ್ಪತ್ರೆಗಳ ಹಬ್ ಆಗಿರುವ ದ.ಕ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹೆಸರಿಗಷ್ಟೇ ಇರೋದು. ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಹಲ್ಲಿಲ್ಲದ ಹಾವಿನಂತೆ ಇವರ ಹಲ್ಲನ್ನು ಖಾಸಗೀ ಆಸ್ಪತ್ರೆಯ ಧಣಿಗಳು ಕಿತ್ತು ಬಿಸಾಡಿ ಹಲವು ಕಾಲಗಳೇ ಕಳೆದಿದೆ. ಕನಿಷ್ಟ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ ರಾಮಕೃಷ್ಟ ಏನೂ ಮಾಡದಿದ್ದರೂ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತಿದ್ದರು ಅಥವಾ ಕನಿಷ್ಟ ಅಸಹಾಯಕತೆಯನ್ನಾದರೂ ತೋರಿಸುತ್ತಿದ್ದರು. ಮತ್ತು ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೆ ಕನಿಷ್ಟ ಸಮಸ್ಯೆಗಳನ್ನು ಆಲಿಸುವ ವ್ಯವದಾನವೂ ಅವರಲ್ಲಿತ್ತು. ಆದರೆ ಕೊರೋನಾ ಕಾಲದ‌ನಂತರ ನಮ್ಮ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಇಲ್ಲವೇನೋ ಅನ್ನಿಸುವಷ್ಟು ಅವರ ಆಡಳಿತ ವೈಖರಿ ತೋರುತ್ತಿದೆ. ಸರಕಾರ ಈಗ ಬದಲಾಗಿದೆ ದ.ಕ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರವನ್ನು ವ್ಯಾಪಾರಿಕರಣಗೊಳಿಸಿ ರೋಗಿಗಳನ್ನು ವಂಚಿಸುವ, ತಪ್ಪಾದ ಚಿಕಿತ್ಸಾ ಕ್ರಮದಿಂದ ಅವರ ಜೀವದಲ್ಲಿ ಚೆಲ್ಲಾಟವಾಡುವ ಲೂಟಿ ಕೋರ ಖಾಸಗೀ ಆಸ್ಪತ್ರೆಗಳನ್ನು ನಿಯಂತ್ರಿಸಲು ಸರಿಯಾದ ಜಿಲ್ಲಾ ಆರೋಗ್ಯಾಧಿಕಾರಿಯನ್ನು ನೇಮಿಸಬೇಕು. ಮತ್ತು ಕಳೆದ ಹಲವಾರು ವರುಷಗಳಿಂದ ನಾವುಗಳು ಒತ್ತಾಯಿಸುತ್ತಾ ಬಂದಿರುವ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು, ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿರುತ್ತಾರೆ.