ಬಿಜೆಪಿ ಪಕ್ಷದ ಹೀನಾಯ ಸೋಲಿನ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆಯ ಕೂಗು ಇದೀಗ ಬಹಳ ಜೋರಾಗ ತೊಡಗಿದೆ. ಆದರೂ ರಾಷ್ಟ್ರೀಯ ನಾಯಕರು ಕರ್ನಾಟಕದ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಂಡಂತ್ತೆ ಕಾಣಿಸುತ್ತಿಲ್ಲ. ರಾಜ್ಯದ ನಾಯಕರು ಕೂಡ ವರಿಷ್ಠರ ಮೇಲೆ ಒತ್ತಡ ಹಾಕುವುದಿರಲಿ, ಪ್ರಶ್ನಿಸುವ ಗೋಜಿಗೂ ಹೋಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಬಿಜೆಪಿಯ ಎರಡು ಪ್ರಮುಖ ಹುದ್ದೆಗಳೂ ಸೇರಿದಂತೆ ಯಾವುದೇ ಜವಾಬ್ದಾರಿಯನ್ನು ಹಂಚುವ ಪ್ರಕ್ರಿಯೆ ನಡೆಯಲಿಲ್ಲ. ಜುಲೈ ಮೊದಲ ವಾರದಲ್ಲಿ ರಾಜ್ಯದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರಲ್ಲಿ ಕನಿಷ್ಟ ಪ್ರತಿಪಕ್ಷ ನಾಯಕ ಯಾರು ಎನ್ನುವ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಘೋಷಿಸಬೇಕಿದೆ.

ವಿಧಾನಸಭೆ ಫಲಿತಾಂಶ ಬಂದು ಮಂತ್ರಿ ಮಂಡಲ ರಚನೆಯಾಗಿ ತಿಂಗಳು ಕಳೆದರೂ, ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿ ಮೀನಾಮೇಷ ಎಣಿಸುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 66 ಶಾಸಕರು ಆಯ್ಕೆಯಾಗಿ ಪ್ರತಿಪಕ್ಷ ಸ್ಥಾನದಲ್ಲಿದೆ.ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸಂಪುಟ ವಿಸ್ತರಣೆ ಮಾಡಿ,ಖಾತೆ ಹಂಚಿಕೆ ಎಲ್ಲವನ್ನೂ ಮುಗಿಸಿ ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ.ಆದರೆ ಪ್ರತಿಪಕ್ಷ ಬಿಜೆಪಿಯ ವಿಳಂಬ ಧೋರಣೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಹಜವಾಗಿ ಬಿಜೆಪಿಯಲ್ಲಿ ಪೈಪೋಟಿ ಇದೆ. ಆದರೆ ವರಿಷ್ಠರ ಲೆಕ್ಕಾಚಾರ ಎಂತದ್ದು,ಅವರ ಕೃಪೆ ಯಾರ ಮೇಲೆ ಇದೆ ಎನ್ನುವುದು ಮಾತ್ರ ನಿಗೂಢವಾಗಿದೆ.ಬಸವರಾಜ ಬೊಮ್ಮಾಯಿ,ಯತ್ನಾಳ್,ಅಶ್ವಥ್ ನಾರಾಯಣ್,ಸುನಿಲ್ ಕುಮಾರ್ ಸೇರಿದಂತೆ ಹಲವು ಪ್ರಮುಖರ ಹೆಸರು ಈ ಹುದ್ದೆಗೆ ಕೇಳಿ ಬರುತ್ತಿದೆಯಾದರೂ ಹೈಕಮಾಂಡ್ ಮಾತ್ರ ಏನನ್ನೂ ಹೇಳುತ್ತಿಲ್ಲ.

ಇತ್ತೀಚೆಗೆ ಕರ್ನಾಟಕ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಶಾಸಕರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವರದಿ ಕೊಂಡೊಯ್ದಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಅವರೇ ಬಹುತೇಕ ಪ್ರತಿಪಕ್ಷ ನಾಯಕರಾಗ್ತಾರೆ ಅಂತ ಹೇಳಲಾಗುತ್ತಿದೆಯಾದರೂ, ಯಾರಿಗೂ ಖಚಿತತೆ ಇಲ್ಲ.ಬಿಜೆಪಿ ನಾಯಕರ ಮುಸುಕಿನ ಗುದ್ದಾಟ, ಯಾರಲ್ಲೂ ಒಮ್ಮತ ಇಲ್ಲದಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಆಡಳಿತಾರೂಢ ಕಾಂಗ್ರೆಸ್‌ನವರು ಬಿಜೆಪಿಯ ಈ ವಿದ್ಯಮಾನವನ್ನು ಲೇವಡಿ ಮಾಡಲು ತೊಡಗಿದ್ದಾರೆ. ಇದು ಬಿಜೆಪಿಯ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದ್ದು, ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆ ಮುಗಿಸುವಂತೆ ಒತ್ತಡ ಬಹಳ ಜೋರಾಗತೊಡಗಿದೆ. ಈ ನಡುವೆ ರಾಜ್ಯಾಧ್ಯಕ್ಷರ ಬದಲಾವಣೆಗೂ ಕಾಲ ಸನ್ನಿಹಿತವಾಗಿದ್ದು,ಬದಲಾವಣೆಯ ಕೂಗು ಕೇಳಿ ಬರುತ್ತಿದೆ.ಕಳೆದ ಆಗಸ್ಟ್‌ನಲ್ಲಿ ಅವರ ಅಧಿಕಾರಾವಧಿ ಮುಗಿದಿದ್ದರೂ, ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರಿಸಲಾಗಿತ್ತು.