ನಾನಾದರೆ ಹಿಂದುತ್ವವಾದಿಗಳ ಬೆದರಿಕೆ ಹಿನ್ನಲೆ ‘ಎ’ ಬ್ಲಾಕ್ ನಲ್ಲಿದ್ದೆ. ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ನನ್ನು ಯಾಕೆ ‘ಎ’ಬ್ಲಾಕ್ ಗೆ ಹಾಕಿದರು ?
✍️. ನವೀನ್ ಸೂರಿಂಜೆ
ಮಂಗಳೂರಿನ ಜೈಲಿನೊಳಗೆ ಎರಡು ಜೈಲುಗಳಿವೆ. ಒಂದು ಮುಸ್ಲೀಮರಿಗಾಗಿ, ಇನ್ನೊಂದು ಹಿಂದೂಗಳಿಗಾಗಿ ! ಹಿಂದೂ ಕೈದಿಗಳು ಮುಸ್ಲೀಮರನ್ನೂ, ಮುಸ್ಲಿಂ ಕೈದಿಗಳು ಹಿಂದೂಗಳನ್ನು ನೋಡುವಂತೆಯೂ ಇಲ್ಲ. ಅಪ್ಪಿ ತಪ್ಪಿಯೋ, ಉದ್ದೇಶಪೂರ್ವಕವೋ, ಕಾಮಗಾರಿ ನಿಮಿತ್ತವೋ ಎಲ್ಲಾ ಕೈದಿಗಳನ್ನು ಬೆರೆಸಿದರೆ ಜೈಲಿನೊಳಗೆ ಕೊಲೆಗಳು ಗ್ಯಾರಂಟಿ. ಹಾಗಾಗಿ ಜೈಲನ್ನು ಎ ಬ್ಲಾಕ್, ಬಿ ಬ್ಲಾಕ್ ಎಂದು ವಿಂಘಡಿಸಿ ಮಧ್ಯೆ ಸಂಪರ್ಕವೇ ಇರದಂತೆ ಗೋಡೆ ನಿರ್ಮಿಸಿ ಮುಸ್ಲೀಮರನ್ನು ಎ ಬ್ಲಾಕ್ ನಲ್ಲೂ, ಹಿಂದೂಗಳನ್ನು ಬಿ ಬ್ಲಾಕ್ ನಲ್ಲೂ ಇರಿಸಲಾಗುತ್ತದೆ.
ನಾನು ಆರ್ ಎಸ್ ಎಸ್ ಪಿತೂರಿಯನ್ನು / ನೈತಿಕ ಪೊಲೀಸ್ ಗಿರಿಯನ್ನು ಬಯಲು ಮಾಡಿದ್ದಕ್ಕಾಗಿ ಆಗಿನ ಬಿಜೆಪಿ ಸರ್ಕಾರ ನನ್ನನ್ನು ನಾಲ್ಕುವರೆ ತಿಂಗಳು ಇದೇ ಮಂಗಳೂರು ಜೈಲಿಗೆ ಹಾಕಿತ್ತು. ನಾನು ಹಿಂದೂವಾಗಿದ್ದರೂ ಜೈಲು ಅಧಿಕಾರಿಗಳು ನನ್ನನ್ನು ಮುಸ್ಲೀಮರಿದ್ದ ಎ ಬ್ಲಾಕಿಗೆ ಹಾಕಿದ್ದರು. ಯಾಕೆಂದರೆ ಬಿ ಬ್ಲಾಕ್ ನಲ್ಲಿ ನನ್ನಿಂದಾಗಿ ಅರೆಸ್ಟ್ ಆಗಿದ್ದ 45 ಹಿಂದೂ ಜಾಗರಣಾ ವೇದಿಕೆಯ ಕೈದಿಗಳು ಇದ್ದರು. ಅವರು ನನ್ನ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ತಪ್ಪಿಸಲು ನನ್ನನ್ನು ಮುಸ್ಲೀಮರಿದ್ದ ಎ ಬ್ಲಾಕಿಗೆ ಅರೆಸ್ಟ್ ಆದ ದಿನವೇ ಮಧ್ಯರಾತ್ರಿ ಹಾಕಲಾಗಿತ್ತು. ಜೈಲಿಗೆ ಹಾಕಿದ ಐದೇ ನಿಮಿಷದಲ್ಲಿ ನಾನು ಗೊರಕೆ ಹೊಡೆದುಕೊಂಡು ನಿರಾಳವಾಗಿ ಮಲಗಿದ್ದೆ. ಬೆಳಗ್ಗೆದ್ದು ನೋಡಿದರೆ ಪಕ್ಕದಲ್ಲಿ ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ! ನಾನಾದರೆ ಹಿಂದುತ್ವವಾದಿಗಳ ಬೆದರಿಕೆ ಹಿನ್ನಲೆ ಎ ಬ್ಲಾಕ್ ನಲ್ಲಿದ್ದೆ. ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ನನ್ನು ಯಾಕೆ ಎ ಬ್ಲಾಕ್ ಗೆ ಹಾಕಿದರು ?

ಸಂತೋಷ್ ರಾವ್ ಜೈಲು ಸೇರಿದಾಗಲೇ ಆತನನ್ನು ಮುಗಿಸುವ ಪ್ಲ್ಯಾನ್ ಮಾಡಲಾಗಿತ್ತು. ಆತನನ್ನು ಹಿಂದುತ್ವವಾದಿಗಳೇ ತುಂಬಿದ್ದ ಬಿ ಬ್ಲಾಕ್ ಗೆ ಹಾಕಲಾಗಿತ್ತು. ಮರುದಿನವೇ ಹಿಂದುತ್ವವಾದಿ ಕೈದಿಗಳು ಸಂತೋಷ್ ರಾವ್ ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸಂತೋಷ್ ರಾವ್ ನನ್ನು ಕೊಂದರೆ ಸೌಜನ್ಯ ಕೊಲೆ ಅಪರಾಧಿ ಈತ ಹೌದೇ ಅಲ್ಲವೇ ಎಂಬ ಪ್ರಶ್ನೆಯೇ ಬರುವುದಿಲ್ಲ. ಮುಂಡಾಸುಧಾರಿಯ ಕುಟುಂಬದ ಮೇಲಿನ ಎಲ್ಲ ಅರೋಪಗಳೂ ಖುಲಾಸೆಯಾದಂತೆ ಆಗುತ್ತದೆ. ಹಾಗಾಗಿ ಇಂತಹ ಯೋಜನೆ ಮಾಡಲಾಗಿತ್ತು.ಆದರೆ ಜೈಲು ಸಿಬ್ಬಂದಿಗಳ ಸಕಾಲಿಕ ಮಧ್ಯಪ್ರವೇಶದಿಂದ ಸಂತೋಷ್ ರಾವ್ ಜೀವ ಉಳಿಸಿಕೊಂಡು ಮುಸ್ಲೀಮರೇ ಇದ್ದ ಎ ಬ್ಲಾಕ್ ಸೇರಿಕೊಂಡ.
ಮುಸ್ಲೀಮ್ ಕೈದಿಗಳೇ ಇದ್ದ ಎ ಬ್ಲಾಕ್ ನಲ್ಲಿ ಮುಸ್ಲಿಂ ಕೈದಿಗಳೇ ಮಾಡಿದ ಅಲಿಖಿತ ನಿಯಮವೊಂದು ಜಾರಿಯಲ್ಲಿದೆ. ಮುಸ್ಲೀಮನಿರಲಿ, ಹಿಂದೂವಿರಲಿ, ಕ್ರಿಶ್ಚಿಯನ್ನೇ ಇರಲಿ, ರೇಪ್ ಆರೋಪಿಯೇನಾದರೂ ಜೈಲಿಗೆ ಬಂದರೆ ಜೈಲಿನಿಂದ ಹೊರಗೆ ಹೋಗುವವರೆಗೂ ಟಾಯ್ಲೆಟ್ ಕ್ಲೀನ್ ಮಾಡುವುದು ಅವರ ಕೆಲಸ. ಸಂತೋಷ್ ರಾವ್ ಮೇಲೆ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯ ಆರೋಪವಿದ್ದರೂ ಟಾಯ್ಲೆಟ್ ತೊಳೆಯುವ ಕೆಲಸವನ್ನು ನೀಡಿರಲಿಲ್ಲ. ಅದಾಗಲೇ ಪತ್ರಿಕೆಗಳಲ್ಲಿ ಸಂತೋಷ್ ರಾವ್ ನಿರಪರಾಧಿ, ದೊಡ್ಡ ದೊಡ್ಡ ಕೈಗಳೇ ಈ ಕೃತ್ಯ ಮಾಡಿರುವುದು ಎಂಬ ಸುದ್ದಿ ಪ್ರಸಾರವಾಗಿದ್ದರಿಂದ ಸಂತೋಷ್ ನಿರಪರಾಧಿ ಎಂಬ ತೀರ್ಮಾನಕ್ಕೆ ಕೈದಿಗಳು ಬಂದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಂತೋಷ್ ಪ್ರತೀ ದಿನ ಎಲ್ಲಾ ಸಮಯದಲ್ಲೂ ದೇವರ ಧ್ಯಾನದಲ್ಲಿ ತೊಡಗಿಕೊಂಡಿರುತ್ತಿದ್ದ. ನಿತ್ಯ ದೇವರ ಧ್ಯಾನದಲ್ಲಿ ತೊಡಗಿಕೊಂಡ ವ್ಯಕ್ತಿಗೆ ಹಿಂಸಿಸಬಾರದು ಎಂಬ ಮುಸ್ಲೀಮ್ ಕೈದಿಗಳ ಪ್ರಜ್ಞೆ ಕೂಡ ಇದರ ಹಿಂದೆ ಇತ್ತು.
ಈಗ ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ಆರೋಪ ಮುಕ್ತರಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ತನಿಖಾ ತಂಡವೇ ಪ್ರಕರಣದ ವಿಚಾರಣೆ ನಡೆಸಿತ್ತು. ಸಿಬಿಐ ವಿಶೇಷ ನ್ಯಾಯಾಲಯವೇ ಸಂತೋಷ್ ರಾವ್ ರನ್ನು ಆರೋಪಮುಕ್ತಗೊಳಿಸಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂತೋಷ್ ರಾವ್ ಸಣ್ಣ ಭಾಗಿದಾರಿಕೆ ಇದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಯಾಕೆಂದರೆ ಮುಂಡಾಸುಧಾರಿಗಳು ಆರೋಪದಿಂದ ಮುಕ್ತರಾಗಬೇಕಾದರೆ ಸಂತೋಷ್ ರಾವ್ ಕೊಲೆ ಮಾಡಿದ್ದಾನೆ ಎಂದೇ ಸಾಭೀತಾಗಬೇಕು. ಕೇಂದ್ರ ಸರ್ಕಾರದಲ್ಲಿ ಮುಂಡಾಸುಧಾರಿಗಳು ಪ್ರಭಾವಶಾಲಿಯಾಗಿದ್ದರೂ ಸಿಬಿಐನಿಂದ ಸಂತೋಷ್ ರಾವ್ ನನ್ನು ಫಿಕ್ಸ್ ಮಾಡಲು ಸಾಧ್ಯವಾಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತೀರಾ ಮುಗ್ದನಾಗಿದ್ದ ಸಂತೋಷ್ ರಾವ್ ಯಾವ ಪ್ರಶ್ನೆಗಳಿಗೂ ಉತ್ತರಿಸುತ್ತಿರಲಿಲ್ಲ. ನ್ಯಾಯಾಲಯದಲ್ಲಿ ಆರೋಪಿ ಉತ್ತರಿಸದಿದ್ದರೆ, ಪೊಲೀಸರ ಆರೋಪಗಳನ್ನು ಅಲ್ಲಗಳೆಯದೇ ಇದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೂ ಸಂತೋಷ್ ರಾವ್ ಗೆ ಶಿಕ್ಷೆಯಾಗಿಲ್ಲ ಎಂದರೆ ಅದ್ಯಾವ ಮಟ್ಟದ ಅಮಾಯಕನಿರಬೇಕು ಊಹಿಸಿ.
ಈಗ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದವರು ಯಾರು ಎಂಬುದು ಬಯಲಾಗಬೇಕಿದೆ. ಸಂತೋಷ್ ರಾವ್ ಕೊಲೆಗಾರ ಅಲ್ಲ, ನಮಗೆ ಮುಂಡಾಸುಧಾರಿಗಳ ಕುಟುಂಬದ ಬಗ್ಗೆಯೇ ಅನುಮಾನ ಇದೆ ಎಂದು ಅಂದಿನಿಂದ ಇಂದಿನವರೆಗೂ ಸೌಜನ್ಯಳ ತಂದೆ ತಾಯಿ ಹೇಳಿಕೊಂಡೇ ಬರುತ್ತಿದ್ದಾರೆ. ಸಂತೋಷ್ ರಾವ್ ಬಿಡುಗಡೆಯಿಂದ ಸೌಜನ್ಯ ಪ್ರಕರಣಕ್ಕೆ ಅರ್ಧ ನ್ಯಾಯ ದೊರಕಿದಂತಾಗಿದೆ. ಈಗ ನಿಜವಾದ ಕೊಲೆಗಾರರ ಬಂಧನವಾದರೆ ನ್ಯಾಯ ಪ್ರಕ್ರಿಯೆ ಪೂರ್ಣವಾದಂತಾಗುತ್ತದೆ.
ನಾಲ್ಕುವರೆ ತಿಂಗಳು ನನ್ನ ಜೊತೆ ಇದ್ದ ಅಮಾಯಕ ಜೈಲ್ ಮೇಟ್ ಕೊನೆಗೂ ಬಿಡುಗಡೆ ಕಂಡಿದ್ದಾನೆ. ಇಂತಹ ನೂರಾರು ಅಮಾಯಕ ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತು, ನಿಜವಾದ ಅಪರಾಧಿಗಳು ಜೈಲು ಸೇರುವಂತಾಗಲಿ.