ನಿಮ್ಮ ಮನೆ ಸುತ್ತಮುತ್ತಲ ಪ್ರದೇಶ ಸರಿಪಡಿಸಿ, ಅನಂತರ ‘ಬ್ರಾಂಡ್ ಬೆಂಗಳೂರು’ ಬಗ್ಗೆ ಕನವರಿಸಿ; ಡಿಕೆಶಿಗೆ ಸಾರ್ವಜನಿಕರ ತರಾಟೆ

ರಾಜ್ಯ

ಬೆಂಗಳೂರು: ಉದ್ಯಾನ ನಗರಿ ಎಂಬ ಖ್ಯಾತಿಗೊಳಗಾಗಿರುವ ಬೆಂಗಳೂರು ಅಧ್ವಾನ ನಗರಿ ಎಂಬ ಕುಖ್ಯಾತಿಗೆ ಗುರಿಯಾಗಲು ಬಿಬಿಎಂಪಿಯ ಕೆಲವು ಹೆಲ್ತ್ ಇನ್‌ಸ್ಪೆಕ್ಟರ್ಸ್ ಮತ್ತು ಮಾರ್ಷಲ್‌ಗಳು ಕಾರಣ ಅಲ್ಲದೇ ಬೇರೇನೂ ಇಲ್ಲ. ಬೆಂಗಳೂರಿನ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವ ಸನ್ನಿವೇಶಗಳು ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೆ ಕರಿ ಚುಕ್ಕೆಯಾಗಿದೆ.

ರಾಜಧಾನಿ ಬೆಂಗಳೂರಿನ ಎಲ್ಕೆಂದರಲ್ಲಿ ತ್ಯಾಜ್ಯಗಳ ರಾಶಿ ಕಂಡುಬರುತ್ತಿವೆ. ಈ ಪೈಕಿ ‘ಬ್ರಾಂಡ್ ಬೆಂಗಳೂರು’ ಮಂತ್ರ ಪಠಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಖಾಸಗಿ ನಿವಾಸವಿರುವ ಸದಾಶಿವ ನಗರದಿಂದ ಕೂಗಳತೆ ದೂರದಲ್ಲಿರುವ ವಯ್ಯಾಲಿಕಾವಲ್ ಬಳಿಯ ‘ನರಕ ದೃಶ್ಯ’ ಅನಾವರಣವಾಗಿದೆ.

https://twitter.com/alvinviews/status/1684775425980223488?t=qHg2OUZmOXn0qkCMGqUgkQ&s=08

ಬಿಬಿಎಂಪಿ ವಾರ್ಡ್ ನಂಬರ್ 64ರ ಹೆಲ್ತ್ ಇನ್ಸ್ಪೆಕ್ಟರ್, ಮಾರ್ಷಲ್‌ಗಳಿಗೆ ನಾಗರಿಕರು ನಿತ್ಯವೂ ದೂರು ನೀಡುತ್ತಲೇ ಇದ್ದಾರೆ. ಆದರೂ ಬಿಬಿಎಂಪಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ. ದೂರು ನೀಡಿದ ಸಂದರ್ಭದಲ್ಲಿ ತಾರಾತುರಿಯಲ್ಲಿ ಕಸ ಎತ್ತುವ ಕೆಲಸ ನಡೆಯುತ್ತದೆಯಾದರೂ ಕಸ ಸುರಿಯುತ್ತಿರುವುದನ್ನು ತಡೆಯುವ ಸಂಬಂಧ ಅಧಿಕಾರಿಗಳು ಗಮನಹರಿಸಿಲ್ಲ.

ಈ ಕುರಿತ ಸ್ಥಳೀಯ ದೂರಿನ ಹಿನ್ನೆಲೆಯಲ್ಲಿ ಎನ್‌ಜಿಒ ತಂಡದ ಪ್ರತಿನಿಧಿಗಳು ಭೇಟಿ ನೀಡಿದಾಗ ಸಾರ್ವಜನಿಕರು ಬಿಬಿಎಂಪಿ ಮಾರ್ಷಲ್‌ಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಸ ಸುರಿಯವುದನ್ನು ತಡೆಯುವ ಸಂಬಂಧದ ಕೆಲಸಕ್ಕೆ ನಿಯುಕ್ತಿಯಾಗಿರುವ ಮಾರ್ಷಲ್‌ಗಳು ಈ ವಾರ್ಡ್ ಪಾಲಿಗೆ ಪ್ರಯೋಜನಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಈ ನಡುವೆ, ಈ ಪ್ರದೇಶದಲ್ಲಿ ನಿತ್ಯ ಬೆಳ್ಳಂಬೆಳಿಗ್ಗೆ ಪ್ರತ್ಯಕ್ಷವಾಗುತ್ತಿರುವ ತ್ಯಾಜ್ಯದ ರಾಶಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆಶಿ ಬಗ್ಗೆಯೂ ಕಿಡಿ ಕಾರಿರುವ ನೆಟ್ಟಿಗರು, ಮೊದಲು ನಿಮ್ಮ ಮನೆ ಸುತ್ತಮುತ್ತಲ ಪ್ರದೇಶವನ್ನು ಸರಿಪಡಿಸಿ, ಅನಂತರ ‘ಬ್ರಾಂಡ್ ಬೆಂಗಳೂರು’ ಬಗ್ಗೆ ಯೋಚಿಸಿ ಎಂದು ವ್ಯಂಗ್ಯವಾಡಿದ್ದಾರೆ.
ಬಿಬಿಎಂಪಿ ಕಮೀಷನರ್ ವಿರುದ್ದವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಮರ್ಥ ಆಯುಕ್ತರನ್ನು ನೇಮಕ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.