ವಿವಾಹ ವಿಚ್ಛೇದನ ಪ್ರಕರಣಗಳು ಒಂದು ವರ್ಷದೊಳಗೆ ಇತ್ಯರ್ಥಗೊಳಿಸಬೇಕು: ಕರ್ನಾಟಕ ಹೈಕೋರ್ಟ್‌ ಆದೇಶ

ರಾಜ್ಯ

ವಿವಾಹ ವಿಚ್ಛೇದನ ಪ್ರಕರಣಗಳು ವರ್ಷಾನುಗಟ್ಟಲೆ ನಡೆಯುತ್ತಿರುವುದಕ್ಕೆ ಹೈಕೋರ್ಟ್‌ ಗರಂ ಆಗಿದೆ. ಇನ್ನು ಮುಂದಕ್ಕೆ ಒಂದು ವರ್ಷದೊಳಗೆ ವಿವಾಹ ವಿಚ್ಛೇಧನ ಪ್ರಕರಣಗಳ ವಿಚಾರಣೆ ತ್ವರಿತವಾಗಿ ನಡೆಸಿ ಇತ್ಯರ್ಥ ಮಾಡಬೇಕು ಎಂದು ಕೆಳ ಹಂತದ ಎಲ್ಲಾ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.ವಿವಾಹ ವಿಚ್ಛೇದನ ಸೇರಿ ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ವೈವಾಹಿಕ ಪ್ರಕರಣಗಳನ್ನು ಗರಿಷ್ಠ ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಗಳಿಗೆ ಆದೇಶಿಸಿದೆ.

ತನ್ನ ವಿವಾಹ ವಿಚ್ಛೇದನ ಅರ್ಜಿ ತ್ವರಿತಗತಿಯಲ್ಲಿಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಎನ್‌. ರಾಜೀವ್‌ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.ಎರಡೂ ಕುಟುಂಬ ಮೇಲೆ ಕೆಟ್ಟ ಪರಿಣಾಮ
ಪ್ರಕರಣಗಳ ವಿಚಾರಣೆ ವಿಳಂಬ ಎರಡೂ ಕುಟುಂಬಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಮನುಷ್ಯ ಜೀವನದ ಅಲ್ಪಾವಧಿಯನ್ನು ಗಮನದಲ್ಲಿಟ್ಟುಕೊಂಡು ವೈವಾಹಿಕ ಪ್ರಕರಣಗಳ ವಿಲೇವಾರಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಿದೆ ಎಂದು ಹೇಳಿದೆ.

ಮದುವೆಯ ವಿಸರ್ಜನೆ ಅಥವಾ ರದ್ದು ಬಯಸುವ ವೈವಾಹಿಕ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಗರಿಷ್ಠ ಒಂದು ವರ್ಷದ ಮಿತಿಯೊಳಗೆ ವಿಲೇವಾರಿ ಮಾಡದಿರುವ ಎಲ್ಲಾಪ್ರಯತ್ನಗಳನ್ನು ಕೌಟುಂಬಿಕ ಅಥವಾ ವಿಚಾರಣಾ ನ್ಯಾಯಾಲಯಗಳು ಮಾಡಬೇಕು ಎಂದು ಆದೇಶಿಸಿದ್ದಾರೆ.

ವೈವಾಹಿಕ ಪ್ರಕರಣಗಳಲ್ಲಿ ತ್ವರಿತ ತೀರ್ಪು ನೀಡಿದಲ್ಲಿ ಇಬ್ಬರೂ ತಮ್ಮ ಜೀವನ ಪುನರ್‌ ರೂಪಿಸಿಕೊಳ್ಳ ಬಹುದು.ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಎರಡೂ ಕುಟುಂಬಗಳ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಏಳು ವರ್ಷಗಳಷ್ಟು ಹಳೆಯದಾದ ರಾಜೀವ್‌ ಪ್ರಕರಣವನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು,ಎಂದು ಸಂಬಂಧಿಸಿದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಚನೆ ನೀಡಿರುವ ಹೈಕೋರ್ಟ್‌ನ ಏಕ ಸದಸ್ಯಪೀಠ, ಇಂತಹದ್ದೇ ಪ್ರಕರಣಗಳನ್ನು ಎದುರಿಸುತ್ತಿರುವವರು ತಮ್ಮ ಅರ್ಜಿಗಳ ತ್ವರಿತ ವಿಲೇವಾರಿಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯದ ಕದ ತಟ್ಟುವ ಪ್ರಮೇಯ ಉದ್ಭವಿಸಬಾರದು. ಆದ್ದರಿಂದ ಈ ಆದೇಶವನ್ನು ಸಂಬಂಧಪಟ್ಟ ಎಲ್ಲರಿಗೂ ರವಾನಿಸಬೇಕು ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನಿರ್ದೇಶನ ನೀಡಿದೆ.

ಪತ್ನಿಯೊಂದಿಗಿನ ವಿವಾಹ ಬಂಧವನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ರಾಜೀವ್‌ 2016ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತ್ವರಿತ ವಿಲೇವಾರಿಯಾಗದ ಕಾರಣ ತಮ್ಮ ಅರ್ಜಿಯನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.