ಮೋದಿಯ ಗುಜರಾತಿನಲ್ಲಿ ದಲಿತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೆ ಮೇಲ್ಜಾತಿಯವರಿಂದ ಅಡ್ಡಿ

ರಾಷ್ಟ್ರೀಯ

ದಲಿತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ 13 ಜನರನ್ನು ಬಂಧಿಸಿರುವ ಘಟನೆ ಗುಜರಾತ್ ನ ವಡೋದರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಬುಧವಾರದಂದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆದರೆ ಭಾರೀ ಮಳೆಯಿಂದಾಗಿ ಮೃತನ ಸಮುದಾಯದ ಚಿತಾಗಾರವು ಜಲಾವೃತಗೊಂಡಿದ್ದರಿಂದ ಕುಟುಂಬವು ಅಂತಿಮ ಸಂಸ್ಕಾರಕ್ಕಾಗಿ ಪದ್ರಾ ತಾಲೂಕಿನ ಗಮೆಥಾ ಗ್ರಾಮದ ಸಾಮಾನ್ಯ ಸ್ಮಶಾನಕ್ಕೆ ಶವವನ್ನು ಕೊಂಡೊಯ್ದಿತ್ತು.

ಆಗ ಕೆಲವು ಗ್ರಾಮಸ್ಥರು ಅಲ್ಲಿಗೆ ಆಗಮಿಸಿ ಈ ಕ್ರಮವನ್ನು ವಿರೋಧಿಸಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಥಳಕ್ಕೆ ಧಾವಿಸಿದ್ದು, ಪೊಲೀಸ್ ಠಾಣೆಯಲ್ಲಿ ಈ ಕುರಿತು ಗುರುವಾರ ಎಫ್ ಐ ಆರ್ ದಾಖಲಿಸಲಾಗಿದೆ. ಗ್ರಾಮದ ಸರಪಂಚ್ ನ ಪತಿ ಸೇರಿದಂತೆ 13 ಜನರನ್ನು ಬಂಧಿಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.ಕೊನೆಗೆ ಸಾಮಾನ್ಯ ಸ್ಮಶಾನದ ಸಮೀಪವಿರುವ ಸ್ಥಳದಲ್ಲಿ ವ್ಯಕ್ತಿಯನ್ನು ದಹಿಸಲಾಗಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.